Advertisement

ಪಚ್ಚನಾಡಿ ರಸ್ತೆಯಲ್ಲಿ ಭರದಿಂದ ಸಾಗುತ್ತಿದೆ ಅಭಿವೃದ್ಧಿ ಕಾಮಗಾರಿ

10:17 AM May 15, 2018 | Team Udayavani |

ಮಹಾನಗರ: ನಗರದ ಬೊಂದೇಲ್‌-ವಾಮಂಜೂರು ರಸ್ತೆಯ ಪಚ್ಚನಾಡಿಯಲ್ಲಿ ಏಕಕಾಲದಲ್ಲೇ ಎರಡೆರಡು ಸೇತುವೆಗಳ ಕಾಮಗಾರಿ ಭರದಿಂದ ಸಾಗುತ್ತಿದ್ದು, ಒಂದು ಸೇತುವೆಯ ಕಾಮಗಾರಿ ಮಳೆಗಾಲಕ್ಕೆ ಮುಂಚಿತವಾಗಿ ಮುಗಿಸಬೇಕಾದ ಅನಿವಾರ್ಯ ಎದುರಾಗಿದೆ.

Advertisement

ಪಚ್ಚನಾಡಿಯಲ್ಲಿ ಒಂದು ಸೇತುವೆಯನ್ನು ಪಾಲಿಕೆ, ಮತ್ತೂಂದು ರೈಲ್ವೇ ಇಲಾಖೆಯ ವತಿಯಿಂದ ನಿರ್ಮಾಣಗೊಳ್ಳುತ್ತಿದೆ. ಮತ್ತೊಂದೆಡೆ  ಈ ರಸ್ತೆಯ ಕಾಂಕ್ರೀಟ್‌ ಕಾಮಗಾರಿ, ಜತೆಗೆ ಬೊಂದೇಲ್‌ ಸಮೀಪ ತಡೆಗೋಡೆ ನಿರ್ಮಾಣವೂ ನಡೆಯುತ್ತಿದೆ! ಪಚ್ಚನಾಡಿ ತೋಡಿನ ಹಳೆ ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಈಗ 1.5 ಕೋ.ರೂ. ವೆಚ್ಚದ ಸೇತುವೆ ನಿರ್ಮಿಸಲಾಗುತ್ತಿದೆ.

ಶೀಘ್ರ ಕಾಮಗಾರಿ ಮುಗಿಸಲು ಸೂಚನೆ
ಈಗ ಒಂದು ಭಾಗದ ಕಾಮಗಾರಿ ಪೂರ್ಣಗೊಂಡು, ಮತ್ತೂಂದು ಭಾಗದಲ್ಲಿ ಪಿಲ್ಲರ್‌ ರಚಿಸಲಾಗುತ್ತಿದೆ. ಈ ಕಾಮಗಾರಿ ಶೀಘ್ರ ಮುಗಿಯದೇ ಇದ್ದರೆ ಮಳೆ ಆರಂಭದ ಬಳಿಕ ಮುಂದುವರಿಸುವುದು ಕಷ್ಟ. ಸ್ಥಳೀಯ ಮನೆಗಳಿಗೆ ನೀರು ನುಗ್ಗುವ ಆತಂಕವೂ ಇದೆ. ಹೀಗಾಗಿ ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಬಂಡೆ ಒಡೆಯುವ ಹಿನ್ನೆಲೆ ಕಾಮಗಾರಿ ವಿಳಂಬ
ಈ ಸೇತುವೆಯ ನಿರ್ಮಾಣಕ್ಕೆ ಬಂಡೆ ಕಲ್ಲೊಂದು ಅಡ್ಡಿಯಾದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು.

ಆದರೆ ಬಂಡೆ ಒಡೆಯುವ ಸಂದರ್ಭ ಸ್ಥಳೀಯ ಮನೆ ಗಳಿಗೆ ತೊಂದರೆಯಾಗಿದೆ ಎಂದು ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ನಿಧಾನವಾಗಿ ಬಂಡೆ ಒಡೆಯುವ ಕಾಮಗಾರಿ ನಡೆದ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಕೊಂಚ ವಿಳಂಬವಾಗಿದೆ. 

Advertisement

ಹಳಿ ದ್ವಿಪಥದ ಹಿನ್ನೆಲೆಯಲ್ಲಿ ಹೊಸ ಸೇತುವೆ
ಮಂಗಳೂರು ಜಂಕ್ಷನ್‌ನಿಂದ ತೋಕೂರು ವರೆಗಿನ ಹಳಿ ದ್ವಿಪಥ ಹಾಗೂ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪಚ್ಚನಾಡಿಯಲ್ಲಿನ ಹಳೆ ಸೇತುವೆಯನ್ನು ತೆರವುಗೊಳಿಸುವುದು ರೈಲ್ವೇ ಇಲಾಖೆಗೆ ಅನಿವಾರ್ಯವಾಗಿತ್ತು. ಹಳೆ ಸೇತುವೆಯ ಪಿಲ್ಲರ್‌ ಇದ್ದ ಸ್ಥಳದಲ್ಲೇ ಹೊಸ ಹಳಿ ಸಾಗುತ್ತಿದ್ದು, ಹೀಗಾಗಿ ಸೇತುವೆಯನ್ನು ವಿಸ್ತರಿಸುವ ಜತೆಗೆ ಕೊಂಚ ಎತ್ತರಕ್ಕೆ ಏರಿಸಿ ನಿರ್ಮಿಸಲಾಗುತ್ತದೆ.

ಈ ಸೇತುವೆಯ ತೆರವಿನಿಂದ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಇನ್ನೊಂದು ಭಾಗದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್‌ ಕ್ರಾಸಿಂಗ್‌ ವ್ಯವಸ್ಥೆ ಮಾಡಿ ಗೇಟ್‌ ಅಳವಡಿಸಲಾಗಿದೆ. ಸುಮಾರು 2 ಕೋ.ರೂ. ವೆಚ್ಚದಲ್ಲಿ ಸೇತುವೆಯ ಕಾಮಗಾರಿ ನಡೆಯ ಲಿದ್ದು, 12 ಮೀ. ವಿಸ್ತೀರ್ಣ ಹಾಗೂ 25 ಮೀ. ಉದ್ದಕ್ಕೆ ನಿರ್ಮಿಸಲಾಗುತ್ತಿದೆ. ಡಿಸೆಂಬರ್‌ ವೇಳೆಗೆ ಈ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ರೈಲ್ವೇ ಇಲಾಖೆ ತಿಳಿಸಿದೆ. 

ಕಾಂಕ್ರೀಟ್‌ ಕಾಮಗಾರಿ
ಬೋಂದೆಲ್‌-ವಾಮಂಜೂರು ರಸ್ತೆಯಲ್ಲಿ ಡಾಮಾರು ಕಿತ್ತು ಹೋದ ಪರಿಣಾಮ ಸಂಚಾರವೇ ದುಸ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯ ಕಾಂಕ್ರೀಟ್‌ ಕಾಮಗಾರಿಯೂ ನಡೆಯುತ್ತಿದೆ. ಈಗ ರಸ್ತೆಯ ಬಹುತೇಕ ಭಾಗ ಕಾಂಕ್ರೀಟ್‌ ಕಾಮಗಾರಿ ನಡೆದಿದೆ. ರಸ್ತೆಯಲ್ಲಿ ಈ ಹಿಂದೆ 1.50 ಕೋ. ರೂ. ಹಾಗೂ 80 ಲಕ್ಷ ರೂ. ಗಳ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆದಿದ್ದು, ಈಗ 1.25 ಕೋ. ರೂ. ಹಾಗೂ 80 ಲಕ್ಷ ರೂ.ಗಳ ಕಾಮಗಾರಿ ನಡೆಯುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ವಿವರಿಸಿದ್ದಾರೆ. ಬೊಂದೇಲ್‌ ಸಮೀಪ ರಸ್ತೆ ಬದಿ ರೂ. 30 ಲಕ್ಷ ವೆಚ್ಚದ ತಡೆಗೋಡೆ ನಿರ್ಮಾಣ ನಡೆಯುತ್ತಿದೆ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next