Advertisement

ಅಮ್ಮನ ಚಾಟಿಂಗ್‌ ಮಗನ ಪಬ್‌ಜಿ…

07:54 PM Oct 01, 2019 | Lakshmi GovindaRaju |

ಅಮ್ಮ ಬೇರೊಬ್ಬ ಗಂಡಸಿನ ಜೊತೆ ಮೊಬೈಲ್‌ನಲ್ಲಿ ಸರಸವಾಡುವುದನ್ನು ನೋಡಿದ ಮಗ, ದಿಗ್ಭ್ರಾಂತನಾಗಿದ್ದಾನೆ. ಅಪ್ಪನಿಗೆ ಹೇಳುವುದಾಗಿ ಹೆದರಿಸಿದ್ದಾನೆ. ಆಗ ಅಮ್ಮ ಅವನಿಗೆ ಕಂಪ್ಯೂಟರ್‌ ಗೇಮ್‌ ಆಡಲು ಕೊಟ್ಟು ದಿಕ್ಕು ತಪ್ಪಿಸಿದ್ದಾಳೆ. ಅವನೀಗ ಪಬ್‌ ಜಿ ಗೀಳಿಗೆ ಬಿದ್ದು, ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಾನೆ.

Advertisement

ಕಾಲೇಜಿನಿಂದ ಮಗನ ಗೈರುಹಾಜರಿಯ ಬಗ್ಗೆ ದೂರವಾಣಿ ಕರೆಗಳು ಬರುತ್ತಿದ್ದುದರಿಂದ ನಲವತ್ತೈದರ ಸ್ವರೂಪ್‌ ಚಿಂತಾಕ್ರಾಂತರಾಗಿದ್ದರು. ಮಗ, ಕಾಲೇಜು ಬಿಟ್ಟು ಮನೆಯಲ್ಲಿ ಕುಳಿತು, ಪಬ್‌ಜಿ ಆಡುತ್ತಿದ್ದಾನೆ. ಜಗಳ ಮಾಡುತ್ತಾನೆ. ಮಗನಿಗೂ ಅವರ ಪತ್ನಿಗೂ ಇನ್ನಿಲ್ಲದ ಜಗಳ. ಅಮ್ಮನನ್ನು ಕಂಡರೆ ಮಗನಿಗೆ ಕೋಪ, ಹೊಡೆಯಲು ಹೋಗುತ್ತಾನೆ.

ಸ್ವರೂಪ್‌ರ ಪತ್ನಿ, ಮಗನ ಸಿಟ್ಟಿನ ನೆಪ ಇಟ್ಟುಕೊಂಡು ಕೋಣೆಯಲ್ಲಿ ತಮ್ಮ ಹೈಸ್ಕೂಲ್‌ ಕ್ಲಾಸ್‌ಮೇಟ್‌ ಜೊತೆಗೆ ಚಾಟಿಂಗ್‌ ಶುರು ಮಾಡಿ­ದ್ದರು. ಅನೇಕ ವರ್ಷಗಳ ನಂತರ, ಮಿತ್ರರು ಭಾವನಾತ್ಮಕವಾಗಿ ಒಂದಾಗುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಸಂಯಮ ಮೀರಿದ ಮೆಸೇಜ್‌ಗಳು ಈಗ ಮಗನ ಕೈ ಸೇರಿವೆ. ಅಮ್ಮ ಬೇರೊಬ್ಬ ಗಂಡಸಿನ ಜೊತೆ ಮೊಬೈಲ್‌ನಲ್ಲಿ ಸರಸವಾಡುವುದನ್ನು ನೋಡಿದ ಮಗ, ದಿಗ್ಭ್ರಾಂತನಾಗಿದ್ದಾನೆ.

ಅಪ್ಪನಿಗೆ ಹೇಳುವುದಾಗಿ ಹೆದರಿಸಿದ್ದಾನೆ. ಆಗ ಅಮ್ಮ ಅವನಿಗೆ ಕಂಪ್ಯೂಟರ್‌ ಗೇಮ್‌ ಆಡಲು ಕೊಟ್ಟು ದಿಕ್ಕು ತಪ್ಪಿಸಿದ್ದಾಳೆ. ಅವನೀಗ ಪಬ್‌ ಜಿ ಗೀಳಿಗೆ ಬಿದ್ದು, ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಾನೆ. ತಾಯಿಯರು ಹೀಗೂ ಇರುತ್ತಾರೆಯೇ? ಎಂದು ಸ್ವರೂಪ್‌ ಖನ್ನತೆಗೆ ಜಾರಿದ್ದಾರೆ.

ಮಕ್ಕಳು ಕಾಲೇಜಿಗೆ ಬರುವ ಹೊತ್ತಿಗೆ, ದುಬಾರಿ ಕಾಲೇಜು ಫೀಸಿನ ಜೊತೆಗೆ, ಮನೆಯಲ್ಲಿ ಹಿರಿಯರ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಇತರೆ ಖರ್ಚುಗಳಿಗೆ ಹಣ ಒದಗಿಸಿ ಕೊಳ್ಳಬೇಕು. ಆಗ ಪತಿಗೆ, ಪತ್ನಿಯ ಆಸೆಗಳನ್ನು ಈಡೇರಿಸಲು ಹಣ ಇರುವುದಿಲ್ಲ. ಕೆಲಸದ ಒತ್ತಡದಿಂದ ಹೆಂಡತಿಯೊಂದಿಗೆ ಸಮಯ ಕಳೆಯಲೂ ಆಗದಿರಬಹುದು. ಪತಿ-ಪತ್ನಿಯ ನಡುವೆ ನಿರಾಶೆ, ಸಿಟ್ಟು; ಪತ್ನಿ ಉಪವಾಸ ಮಾಡುತ್ತಾಳೆ. ಅಡುಗೆ ಮಾಡುವುದಿಲ್ಲ. ಮನೆಯೆಲ್ಲ ತಿಪ್ಪೆಯಂತೆ ಬಿದ್ದಿರುತ್ತದೆ. ಏಕವಚನದಲ್ಲಿ, ಕೆಟ್ಟ ಪದಗಳಲ್ಲಿ ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಾರೆ. ಸಂಬಂಧ ಜಾಳಾಗುವುದು ಹೀಗೆಯೇ.

Advertisement

ತಪ್ಪು ನಡೆದ ಮೇಲೆ ಸುಧಾರಿಸುಕೊಳ್ಳುವ ದಾರಿ ಸುಗಮ ಮಾಡಿಕೊಳ್ಳಬೇಕು. ಸ್ವರೂಪ್‌ಗೆ ಕೋಪದ ನಿರ್ವಹಣೆಯ ತಂತ್ರವಾಗಿ, ಅವರಲ್ಲಿದ್ದ ಹೀನಭಾವ, ಕೀಳರಿಮೆ­ ಯನ್ನು ಕಡಿಮೆ ಮಾಡಿಸಿದೆ. ಅವರ ಹತಾಶೆಗೆ ಕಾರಣವಾದ ಅಂಶಗಳನ್ನು ಸರಿಪಡಿಸಲಾಯ್ತು. ಹದಿಹರೆಯದ ಮಗನಿಗೆ ಸಾಕಷ್ಟು ಸಮಯ ಮೀಸಲಿಡತೊಡಗಿದರು. ಅವನೊ­ ಡನೆ ಹತ್ತಿರದ ಕಬಡ್ಡಿ ಕ್ಲಬ್‌ಗ ಸೇರಿದರು.

perimenopause ಹಂತದ­ ಲ್ಲಿರುವ ಹೆಂಡತಿಯ ಬಗ್ಗೆ ಕಾಳಜಿ ವಹಿಸುವುದನ್ನು ಕಲಿತುಕೊಂಡರು. ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಹೆಂಡತಿ-ಮಗನ ಮನಸು ಕರಗಿತು. ಅವರೂ ಮನೆಯ ಕರ್ತವ್ಯಗಳಲ್ಲಿ ಭಾಗಿಯಾದರು. ಪತ್ನಿಯ ಚಾಟಿಂಗ್‌ ಕಡಿಮೆ­ಯಾಯ್ತು. ಮಗ ಕಾಲೇಜಿಗೆ ಹೋಗತೊಡಗಿದ. ಪತಿ ಸಾಕಷ್ಟು ಬದಲಾಗಿರುವುದನ್ನು ಮನಗಂಡು ಪತ್ನಿಯೂ ಕೌನ್ಸೆಲಿಂಗ್‌ಗೆ ಬಂದರು.

ಹೊಸ ಬದುಕನ್ನು ಕಟ್ಟಿಕೊಳ್ಳಲು ನಿರ್ಧರಿಸಿದರು. ಮನಸ್ಸು ಹಗುರವಾಗಲು ಮನೆಯವರೆಲ್ಲರೂ ಪ್ರವಾಸಕ್ಕೆ ಹೋದರು. ಈಗ ಪತ್ನಿ, ಮನೆಯ ಹತ್ತಿರವಿರುವ ಆಸ್ಪತ್ರೆಯಲ್ಲಿ ರಿಸೆಪ್ಷನ್‌ ಆಗಿ ಕೆಲಸಕ್ಕೆ ಸೇರಿದ್ದಾರೆ. ಸಂಸಾರದಲ್ಲಿ ಸಂಘರ್ಷಗಳು ಸಾಮಾನ್ಯ. ಅದನ್ನು ನಿಭಾಯಿಸುವ ಛಲಗಾರಿಕೆಯನ್ನು ಆಗಾಗ ಚೂಪುಗೊಳಿಸುತ್ತಿರಬೇಕು.

ವಿ.ಸೂ.: ಹಳೆಯ ಸ್ನೇಹಿತ­ರೊಂದಿಗೆ ಮಾತನಾಡುವುದು ತಪ್ಪಲ್ಲ. ಆದರೆ, ಮಾತಿನ ಹದ ತಪ್ಪದೇ ಇರುವಂತೆ ಎಚ್ಚರ ವಹಿಸಿ.

* ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next