ಕೋಲಾರ ಮತ್ತು ದೇವನಹಳ್ಳಿ ಸುತ್ತಮುತ್ತ ಕೆಲ ವರ್ಷಗಳ ಹಿಂದೆ ಶೋಷಿತ ಸಮುದಾಯದ ಮೇಲೆ ನಡೆದಿದೆ ಎನ್ನಲಾದ ನೈಜ ಘಟನೆಯೊಂದು ಈಗ “ಪಾಲಾರ್’ ಎಂಬ ಹೆಸರಿನಲ್ಲಿ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಸದ್ದಿಲ್ಲದೆ “ಪಾಲಾರ್’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಫೆ. 24ಕ್ಕೆ “ಪಾಲಾರ್’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.
ಸದ್ಯ “ಪಾಲಾರ್’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆ ಮಾಡಿದೆ. ಇದೇ ವೇಳೆ ಮಾತನಾಡಿದ “ಪಾಲಾರ್’ ಸಿನಿಮಾದ ನಿರ್ದೇಶಕ ಜೀವಾ ನವೀನ್, “ಕೆಲ ವರ್ಷಗಳ ಹಿಂದೆ ಕೋಲಾರ ಮತ್ತು ದೇವನಹಳ್ಳಿ ಭಾದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರಕಥೆ ಹೆಣೆದಿದ್ದೇವೆ. ಇದೊಂದು ಮಹಿಳಾ ಪ್ರಧಾನವಾಗಿರುವ ಹಾಗೂ ಹೋರಾಟ, ಸಂಘರ್ಷದ ಕಥಾಹಂದರ ಹೊಂದಿರುವ ಸಿನಿಮಾ. ನಮ್ಮ ಜೀವನದಲ್ಲಿ ನಡೆದ, ನಾವು ನೋಡಿದಂಥ ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎಂದು ವಿವರಣೆ ನೀಡಿದರು.
ಅಂದಹಾಗೆ, ಸಿನಿಮಾದ ಹೆಸರು “ಪಾಲಾರ್’ ಅಂತಿದ್ದರೂ, ಪಾಲಾರ್ ನದಿಗೂ ನಮ್ಮ ಕಥೆಗೂ ಯಾವುದೇ ಸಂಬಂಧವಿಲ್ಲ. ಪಾಲಾರ್ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆಯಿದು. ಹಾಗಾಗಿ “ಪಾಲಾರ್’ ಎಂಬ ಹೆಸರನ್ನು ಒಂದು ರೂಪಕವಾಗಿ ಅದನ್ನು ಸಿನಿಮಾದಲ್ಲಿ ಬಳಸಿದ್ದೇವೆ. ಇದೊಂದು ಕಂಟೆಂಟ್ ಬೇಸ್ ಸಿನಿಮಾ. ಸಿನಿಮಾದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎನ್ನುವುದು ಚಿತ್ರತಂಡದ ಭರವಸೆಯ ಮಾತು.
ತೆಲುಗಿನ “ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ. ಜಿ ಉಮಾ ಕೋಲಾರ ಮುಖ್ಯ ಪಾತ್ರದಲ್ಲಿ ನಟಿಸಿರುವ “ಪಾಲಾರ್’ ಚಿತ್ರದಲ್ಲಿ ತಿಲಕ್ ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಆಸಿ ರೆಹಾನ್ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನವಿದೆ.
“ಪಾಲಾರ್’ ಸಿನಿಮಾದ ನಾಲ್ಕು ಹಾಡುಗಳಿಗೆ ಸುಬ್ರಮಣ್ಯ ಆಚಾರ್ಯ ಸಂಗೀತವಿದೆ. “ಸೌನವಿ ಕ್ರಿಯೇಷನ್’ ಮತ್ತು “ಹೆಲೋ ಗ್ಲೋಬಲ್’ ಬ್ಯಾನರ್‌ನಲ್ಲಿ ಕೆ. ಆರ್ ಸೌಜನ್ಯಾ, ಸೌಂದರ್ಯ ಕೆ. ಆರ್ ಮತ್ತು ನವೀನ್ ಕುಮಾರ್ ಬಾಬು “ಪಾರ್ಲಾ’ ಚಿತ್ರವನ್ನು ನಿರ್ಮಿಸಿದ್ದಾರೆ.
ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ಬಹುತೇಕ ಹೊಸ ಪ್ರತಿಭೆಗಳ “ಪಾಲಾರ್’ ಹೇಗಿರಲಿದೆ ಎಂಬುದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ