Advertisement

ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ :ಸೆಮಿಯಲ್ಲಿ ಎಡವಿದ ಸಿಂಧು

09:37 AM Apr 14, 2019 | keerthan |

ಸಿಂಗಾಪುರ: “ಸಿಂಗಾಪುರ್‌ ಓಪನ್‌ ಕೂಟ’ದಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

Advertisement

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸಿಂಧು ವಿಶ್ವದ 3ನೇ ರ್‍ಯಾಂಕಿನ, ಜಪಾನಿನ ನೊಜೊಮಿ ಒಕುಹಾರಾ ವಿರುದ್ಧ ಯಾವುದೇ ಪೈಪೋಟಿ ನೀಡದೆ 7-21, 11-21 ಗೇಮ್‌ಗಳಿಂದ ಪರಾಭವಗೊಂಡರು.

ಸಿಂಧು ಅನೇಕ ತಪ್ಪುಗಳನ್ನು ಮಾಡುತ್ತ ಹೋದುದರಿಂದ ಗೆಲುವಿನ ಸಮೀಪವೂ ಸುಳಿಯಲಿಲ್ಲ. ಆದರೆ ಇನ್‌ಫಾರ್ಮ್ ಆಟಗಾರ್ತಿ ಒಕುಹಾರಾ ಸಂಪೂರ್ಣ ಹಿಡಿತ ಸಾಧಿಸಿ ಕೊಂಡರು. ಅವರನ್ನು ಕಟ್ಟಿಹಾಕುವಲ್ಲಿ ಸಿಂಧು ಅವರಲ್ಲಿ ಆತ್ಮವಿಶ್ವಾಸ ಮತ್ತು ತಾಳ್ಮೆಯ ಕೊರತೆ ಎದ್ದುಕಂಡಿತು.

ಮೊದಲ ಗೇಮ್‌ನಲ್ಲಿ 1-3 ಹಿನ್ನಡೆಯಲ್ಲಿದ್ದ ಸಿಂಧು ಅಂಕವನ್ನು 4-4 ಸಮಬಲಕ್ಕೆ ತಂದರು. ಅನಂತರ ಒಕುಹಾರ 6 ನೇರ ಅಂಕಗಳನ್ನು ಗೆದ್ದು 11-5ರಿಂದ ಮುನ್ನಡೆ ಸಾಧಿಸಿದರು. ಸಿಂಧು ಈ ವೇಳೆ ಹಲವು ತಪ್ಪುಗಳೆಸಗಿದ ಕಾರಣ ಭಾರೀ ಅಂತರದಿಂದ ಸೋತರು. ದ್ವಿತೀಯ ಗೇಮ್‌ನ ಆರಂಭದಲ್ಲಿ ಸಿಂಧು ಸ್ವಲ್ಪ ಪೈಪೋಟಿ ನೀಡಿದರೂ ಲಾಭವೇನೂ ಆಗಲಿಲ್ಲ.

ಒಕುಹಾರಾ ವಿರುದ್ಧ ಕಳೆದ ಎರಡು ಪಂದ್ಯಗಳನ್ನು ಜಯಿಸಿದ್ದ ಸಿಂಧು 7-6 ದಾಖಲೆ ಹೊಂದಿದ್ದಾರೆ. 2017 “ವಿಶ್ವ ಚಾಂಪಿಯನ್‌ಶಿಪ್‌’ ಫೈನಲ್‌ನಲ್ಲಿ ಇವರಿಬ್ಬರ ನಡುವೆ ಭಾರೀ ಪೈಪೋಟಿ ನಡೆದಿತ್ತು. 110 ನಿಮಿಷಗಳ ಕಾಲ ನಡೆದ ಈ ಪಂದ್ಯ ಬ್ಯಾಡ್ಮಿಂಟನ್‌ ಇತಿಹಾಸದ ಅದ್ಭುತ ವನಿತಾ ಸಿಂಗಲ್ಸ್‌ ಪಂದ್ಯ ಎಂದು ದಾಖಲಾಗಿತ್ತು. ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಅನಂತರ ಸಿಂಧು-ಒಕುಹಾರ 6 ಬಾರಿ ಮುಖಾಮುಖೀಯಾಗಿದ್ದು, ಸಿಂಧು 4 ಬಾರಿ ಗೆಲುವು ದಾಖಲಿಸಿದ್ದಾರೆ.

Advertisement

ತೈ ಜು ಯಿಂಗ್‌ ಎದುರಾಳಿ
ಫೈನಲ್‌ನಲ್ಲಿ ಒಕುಹಾರಾ ವಿಶ್ವದ ನಂ.1ಆಟಗಾರ್ತಿ, ಚೈನೀಸ್‌ ತೈಪೆಯ ತೈ ಜು ಯಿಂಗ್‌ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ಅವರನ್ನು 15-21, 24-22, 21-19 ಗೇಮ್‌ಗಳಿಂದ ಸೋಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next