Advertisement

ಗಾಂಧೀಜಿ ಬಾಲ್ಯದ ಹಿಂದೆ ಪಿ.ಶೇಷಾದ್ರಿ

09:10 AM Jul 19, 2019 | Lakshmi GovindaRaj |

ಮಹಾತ್ಮಾ ಗಾಂಧಿಜೀಯವರ ಬದುಕು, ತತ್ವ ಮತ್ತು ಆದರ್ಶಗಳಿಂದ ಪ್ರೇರಣೆಗೊಂಡು ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ಬಂದ ಹಲವು ಚಿತ್ರಗಳ ಬಗ್ಗೆ ನೀವೆಲ್ಲ ಕೇಳಿರುತ್ತೀರಿ, ನೋಡಿರುತ್ತೀರಿ. ಇನ್ನು ಕನ್ನಡದಲ್ಲಿ ಗಾಂಧಿ ವಿಚಾರಗಳನ್ನ ಇಟ್ಟುಕೊಂಡು “ಕೂರ್ಮಾವತಾರ’, “ನಾನೂ ಗಾಂಧಿ’ ಹೀಗೆ ಹಲವು ಚಿತ್ರಗಳು ಬಂದಿವೆ. ಈಗ ಗಾಂಧಿಯ ಜೀವನವನ್ನೇ ಕಥಾಹಂದರವಾಗಿ ಇಟ್ಟುಕೊಂಡು ಮತ್ತೂಂದು ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಮೋಹನದಾಸ’.

Advertisement

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ “ಮೋಹನದಾಸ’ ಚಿತ್ರ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಇನ್ನು “ಮೋಹನದಾಸ’ ಪಿ. ಶೇಷಾದ್ರಿ ನಿರ್ದೇಶನದ 12ನೇ ಚಿತ್ರ. ಬಹಳ ವರ್ಷಗಳಿಂದ ಗಾಂಧಿ ಜೀವನವನ್ನು ತೆರೆಯ ಮೇಲೆ ತರಬೇಕು ಎನ್ನುವ ಪಿ. ಶೇಷಾದ್ರಿ ಅವರ ಕನಸು ಈ ಚಿತ್ರದ ಮೂಲಕ ನನಸಾಗುತ್ತಿದೆ.

ಇತ್ತೀಚೆಗೆ “ಮೋಹನದಾಸ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ಪತ್ರಕರ್ತರು ಮತ್ತು ಮಾಧ್ಯಮಗಳನ್ನು ಆಹ್ವಾನಿಸಿದ್ದ ನಿರ್ದೇಶಕ ಪಿ. ಶೇಷಾದ್ರಿ ಮತ್ತು ಚಿತ್ರತಂಡ, “ಮೋಹನದಾಸ’ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದೆ. ತಮ್ಮ ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ಪಿ. ಶೇಷಾದ್ರಿ, “ಭಾರತೀಯ ಚಿತ್ರರಂಗದಲ್ಲಿ ಗಾಂಧಿ ತತ್ವ, ಆದರ್ಶಗಳಿಂದ ಪ್ರೇರಣೆ ಪಡೆದುಕೊಂಡು ಹಲವು ಚಿತ್ರಗಳು ಬಂದಿವೆ. ಆದ್ರೆ ಗಾಂಧಿ ಜೀವನವನ್ನೇ ಕಥೆಯಾಗಿಟ್ಟುಕೊಂಡು ತೆರೆಮೇಲೆ ಬಂದಿರುವುದು ಅಧಿಕೃತವಾಗಿ ನನಗೆ ಗೊತ್ತಿರುವಂತೆ ಕೇವಲ ಮೂರು ಚಿತ್ರಗಳು ಮಾತ್ರ.

“ಮೋಹನದಾಸ’ ಅಂಥ ಸಾಲಿಗೆ ಸೇರುವ ಚಿತ್ರ. ಇಲ್ಲಿ ಮಹಾತ್ಮಾ ಗಾಂಧಿ ಕಾಣುವುದಿಲ್ಲ. ಅವರ ಬದಲಾಗಿ ಬಾಲ್ಯದ “ಮೋಹನದಾಸ’ ಕಾಣುತ್ತಾನೆ. ಗಾಂಧೀಜಿಯವರ ಬಗ್ಗೆ ಬೋಳಾರ್‌ ಬರೆದಿದ್ದ “ಪಾಪು ಗಾಂಧಿ ಬಾಪು ಗಾಂಧಿಯಾದ ಕಥೆ’ ಕೃತಿ ಓದಿದ ಮೇಲೆ ಇದನ್ನು ಚಿತ್ರವಾಗಿ ತೆರೆಮೇಲೆ ತಂದರೆ ಹೇಗೆ ಎನ್ನುವ ಯೋಚನೆ ಬಂತು. ಸುಮಾರು ಮೂರು-ನಾಲ್ಕು ವರ್ಷಗಳ ಪ್ರಯತ್ನ 14-15 ಬಾರಿ ಸ್ಕ್ರಿಪ್ಟ್ ಬದಲಾವಣೆ ಆದ ನಂತರ “ಮೋಹನದಾಸ’ನನ್ನು ಈಗ ತೆರೆಗೆ ತರುತ್ತಿದ್ದೇವೆ’ ಎನ್ನುವ ವಿವರಣೆ ನೀಡಿದರು.

“ಮೋಹನದಾಸ’ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಸುಮಾರು 1500 ಮಕ್ಕಳನ್ನು ಆಡಿಷನ್‌ ಮಾಡಿ ಕೊನೆಗೆ ಚಿತ್ರಕ್ಕೆ ಬೇಕಾದ 2 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. “7 ವರ್ಷದಿಂದ 13 ವರ್ಷರ ಬಾಲ್ಯದ ಗಾಂಧಿಯನ್ನ ಈ ಚಿತ್ರದಲ್ಲಿ ನೋಡಬಹುದು. ಮೋಹನದಾಸನ ಬಾಲ್ಯದ 8 ವರ್ಷದ ಜೀವನದ ಮಹತ್ತರ ಘಟನೆಗಳೆಲ್ಲವನ್ನೂ ಇಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದೇವೆ.

Advertisement

1885ರ ವಾತಾವರಣ ರೀ ಕ್ರಿಯೇಟ್‌ ಮಾಡಲಾಗಿದೆ. ಗಾಂಧಿ ಸಿಗರೇಟ್‌ ಸೇದಿರುವುದುದು, ಸುಳ್ಳು ಹೇಳಿರುವುದು, ವೇಶ್ಯೆಯ ಸಂಗ ಮಾಡಲು ಬಯಸಿದ್ದು, ಹೀಗೆ ಗಾಂಧಿ ಬಾಲ್ಯದ ಅನೇಕ ತಿರುವುಗಳನ್ನ ಇಲ್ಲಿ ದಾಖಲಿಸಲಾಗಿದೆ. ಗಾಂಧೀಜಿಯ ಜೀವನ ಎಲ್ಲಾ ಕಾಲಕ್ಕೂ, ಎಲ್ಲರಿಗೂ ಸಲ್ಲುವಂಥದ್ದು ಆಗಿರುವುದರಿಂದ, ಆದಷ್ಟು ವಸ್ತುನಿಷ್ಠವಾಗಿ ಬಯೋಪಿಕ್‌ ರೀತಿಯಲ್ಲೇ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಪಿ. ಶೇಷಾದ್ರಿ.

“ಮೋಹನದಾಸ’ ಚಿತ್ರದಲ್ಲಿ ಬಹುಭಾಷಾ ನಟ ಅನಂತ ಮಹಾದೇವನ್‌, ಶೃತಿ, ನಂದಿನಿ, ಸಮರ್ಥ್, ಅಭಯಂಕರ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ 1982ರಲ್ಲಿ ತೆರೆಕಂಡ “ಗಾಂಧೀ’ ಚಿತ್ರದಲ್ಲಿ ಗಾಂಧೀಜಿಯ ಪಾತ್ರವನ್ನು ನಿರ್ವಹಿಸಿದ್ದ ಬೆನ್‌ ಕಿಂಗ್ಸ್‌ಲೇ ಅವರನ್ನು ಚಿತ್ರಕ್ಕೆ ಕರೆತರುವ ಪ್ರಯತ್ನದಲ್ಲಿದೆ ಚಿತ್ರತಂಡ. “ಸಾಧ್ಯವಾದರೆ, ಚಿತ್ರಕ್ಕೆ ಅಮಿತಾಬ್‌ ಬಚ್ಚನ್‌ ಸೇರಿದಂತೆ ಯಾವುದಾದರೂ ಸ್ಟಾರ್‌ ನಟರೊಬ್ಬರನ್ನು ಕರೆತರುವ ಯೋಚನೆ ಕೂಡ ಇದೆ’ ಎನ್ನುತ್ತಾರೆ ಪಿ. ಶೇಷಾದ್ರಿ.

“ಮೋಹನದಾಸ’ ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಭಾಸ್ಕರ್‌ ಕ್ಯಾಮರಾ ಹಿಡಿದರೆ, ಬಿ.ಎಸ್‌ ಕೆಂಪರಾಜು ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್‌ಕೋಟ್‌, ಪೋರಬಂದರ್‌ ಮತ್ತು ಬೆಂಗಳೂರು ಸುತ್ತಮುತ್ತ “ಮೋಹನದಾಸ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಭರದಿಂದ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಅಕ್ಟೋಬರ್‌ ತಿಂಗಳಿನಲ್ಲಿ “ಮೋಹನದಾಸ’ನನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next