ಹುಬ್ಬಳ್ಳಿ: ಕಣ್ಣಿಲ್ಲದ ವ್ಯಕ್ತಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ ಜನರು ಒಂದೆಡೆಯಾದರೇ ಇಡೀ ದೇಶವನ್ನು ಒಂದು ರತ್ನವನ್ನಾಗಿ ಮಾಡಲು ಶ್ರಮಿಸಿದ ಪಂ| ಪುಟ್ಟರಾಜ ಗವಾಯಿಗಳು ಇನ್ನೊಂದೆಡೆ. ಅಂಥ ಮಹಾತ್ಮರ ಸ್ಮರಣೆ ಶ್ಲಾಘನೀಯ ಎಂದು ಮಣಕವಾಡ ದೇವಮಂದಿರ ಮಹಾಮಠದ ಸಿದ್ಧರಾಮ ದೇವರು ಹೇಳಿದರು.
ಜೆ.ಸಿ. ನಗರದ ಎಂಪ್ಲಾಯೀಸ್ ಹಾಲ್‌ನಲ್ಲಿ ಪಂ| ಪುಟ್ಟರಾಜ ಗವಾಯಿಗಳ ಭಕ್ತ ಕಲಾವೃಂದ ಹಾಗೂ ರಂಗಭೂಮಿ ಕಲಾವಿದರ ಆಶ್ರಯದಲ್ಲಿ ಸೋಮವಾರ ನಡೆದ ಪುಟ್ಟರಾಜ ಗವಾಯಿಗಳ 7ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಂ| ಪುಟ್ಟರಾಜ ಗವಾಯಿಗಳು ಇಡೀ ಮನುಕುಲಕ್ಕೆ ದಾರಿದೀಪ ಆದವರು.
ಅಂಥ ಮಹಾತ್ಮರಿಂದ ಸಾವಿರಾರು ವಿದ್ಯಾರ್ಥಿಗಳು ಸಂಗೀತಾಭ್ಯಾಸ ಮಾಡುವ ಮೂಲಕ ಇಂದು ಖ್ಯಾತನಾಮರಾಗಿದ್ದಾರೆ ಎಂದರು. ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯ ಅಜ್ಜನವರು ಮಾತನಾಡಿ, ಇಂದಿನ ಸಮಾಜದಲ್ಲಿ ಕಲಾವಿದರಿಗೆ ಗೌರವ ಇಲ್ಲದಂತಾಗಿದೆ. ಈ ಕುರಿತು ಸರಕಾರ ಗಮನ ಹರಿಸಿ ಕಲಾವಿದರ ರಕ್ಷಣೆಗೆ ಮುಂದಾಗಬೇಕು.
ಕಲಾವಿದರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಕಲೆ ಉಳಿಸಿ-ಬೆಳೆಸಬೇಕು ಎಂದರು. ರಾಮಕೃಷ್ಣ ಆಶ್ರಮದ ರಘುವೀರಾನಂದ ಸ್ವಾಮೀಜಿ ಮಾತನಾಡಿ, ಸಂಗೀತದಲ್ಲಿ ಅತ್ಯುದ್ಭುತ ಶಕ್ತಿ ಇದ್ದು, ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಹೊರಹಾಕುವ ಶಕ್ತಿ ಇದೆ.
ಸಮಾಜದಲ್ಲಿರುವ ಆಸ್ಪತ್ರೆಗಳು ಔಷಧಿ ನೀಡುವ ಮೂಲಕ ರೋಗವನ್ನು ಗುಣಮುಖ ಮಾಡಿದರೆ, ಸಂಗೀತದಲ್ಲಿ ರೋಗವೇ ನಮ್ಮ ಬಳಿ ಸುಳಿಯದಂತೆ ಮಾಡುವ ಶಕ್ತಿ ಇದೆ. ಆದ್ದರಿಂದ ಸಂಗೀತ ಎಂಬ ಕಲೆಯನ್ನು ಎಲ್ಲರೂ ಕರಗತ ಮಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.
ಇದಕ್ಕೂ ಪೂರ್ವದಲ್ಲಿ ಮೂರು ಸಾವಿರಮಠದಿಂದ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಉತ್ತರ ಕರ್ನಾಟಕ ಕಲಾವಿದರ ಸಂಘದ ಅಧ್ಯಕ್ಷ ಡಾ| ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಜೆ., ಪ್ರಕಾಶ ಕುಸಬಿ, ರಾಘವೇಂದ್ರ ಹೊಸಪೇಟೆ, ಸ್ವಾತಿ ಮಳಪ್ಪಗೌಡರ, ಉಮಾ ಹಿರೇಮಠ, ರಮೇಶಬಾಬು ಪಾಟೀಲ ಇದ್ದರು.