Advertisement

ರಾತ್ರಿ ನಿದ್ದೆಯಿಲ್ಲ; ಹೊಟ್ಟೆಗೆ ಅಂಬಲಿ

11:25 AM Sep 08, 2019 | mahesh |

ನವದೆಹಲಿ: ಮರದ ಹಲಗೆ ಮೇಲೆ ನಿದ್ರೆಯಿಲ್ಲದೆ ರಾತ್ರಿ… ಬೆಳಗ್ಗೆ ಲಘು ಉಪಾಹಾರ… ಸ್ವಲ್ಪ ಓದು… ಇದು ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ
ಪ್ರಕರಣದಲ್ಲಿ 14 ದಿನಗಳ ಕಾಲ ನ್ಯಾಯಾಂಗ ವಶದಲ್ಲಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ ಅವರ ಮೊದಲ ದಿನದ ತಿಹಾರ್‌ ಜೈಲಿನ ದಿನಚರಿ.

Advertisement

ಗುರುವಾರವಷ್ಟೇ ಅವರನ್ನು ನ್ಯಾಯಾಂಗ ವಶಕ್ಕೊಪ್ಪಿಸಿ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅವರನ್ನು ರಾತ್ರಿಯೇ ತಿಹಾರ್‌ ಜೈಲಿಗೆ ಕರೆದೊಯ್ಯಲಾಗಿತ್ತು. ಅದರಂತೆ, ಜೈಲಿನ 7ನೇ ಸಂಖ್ಯೆಯ
ಕೊಠಡಿಯಲ್ಲಿ ಯಾವುದೇ ವಿಶೇಷ ಸೌಲಭ್ಯವಿಲ್ಲದೇ ಚಿದು ರಾತ್ರಿ ಕಳೆದಿದ್ದಾರೆ.

ಹಾಸಿಗೆ ಸಿಗಲಿಲ್ಲ: ತಮಗೆ ನಿದ್ರಿಸಲು ಒಂದು ಹಾಸಿಗೆ ಬೇಕು ಎಂದು ಚಿದಂಬರಂ ಕೋರಿಕೆ ಸಲ್ಲಿಸಿದ್ದರು. ಆದರೆ, ನಿಯಮದ ಪ್ರಕಾರ, ಜೈಲಿನ ವೈದ್ಯರು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ,
ಹಾಸಿಗೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದರೆ ಮಾತ್ರವೇ ಹಾಸಿಗೆಯನ್ನು ಒದಗಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದಿರದ ಕಾರಣ ಗುರುವಾರ ರಾತ್ರಿ ಚಿದು ಮರದ ಹಲಗೆಯ ಮೇಲೆಯೇ ಮಲಗಬೇಕಾಯಿತು. ಹೀಗಾಗಿ, ಅವರಿಗೆ ನಿದ್ರೆ ಹತ್ತಲಿಲ್ಲ ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯದ ಆದೇಶದ ಮೇರೆಗೆ,
ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್‌ ಹಾಗೂ ಪ್ರತ್ಯೇಕ ಕೊಠಡಿಯನ್ನು ಮಾತ್ರವೇ ಅವರಿಗೆ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿದ ಬೇರಾವುದೇ ಸೌಲಭ್ಯಗಳನ್ನು ನೀಡಲಾಗಿಲ್ಲ.

ಚಹಾ ಮತ್ತು ಅಂಬಲಿ: ಶುಕ್ರವಾರ ಬೆಳಗ್ಗೆ ಎದ್ದೊಡನೆ ಜೈಲು ಕೊಠಡಿಯ ಆವರಣದಲ್ಲಿ ವಾಕಿಂಗ್‌ ಮಾಡಿದ ಚಿದಂಬರಂ, ಆರು ಗಂಟೆಗೆ ಅಂಬಲಿ ಸೇವಿಸಿ, ಚಹಾ ಕುಡಿದರು. ನಂತರ, ಧಾರ್ಮಿಕ ಗ್ರಂಥವನ್ನು ಓದುತ್ತಾ,
ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು ಎಂದು ಜೈಲಿನ ಮೂಲಗಳು ಹೇಳಿವೆ. ಬಳಿಕ ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ವಕೀಲರು ಜೈಲಿಗೆ ಭೇಟಿ ಕೊಟ್ಟು ಚಿದಂಬರಂ ಜತೆ ಮಾತುಕತೆ ನಡೆಸಿದರು.

ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಚಿದು, ಕಾರ್ತಿ ಆರೋಪಿಗಳಾಗಿರುವ ಏರ್‌ಸೆಲ್‌-ಮ್ಯಾಕ್ಸಿಸ್‌ ಪ್ರಕರಣದ ವಿಚಾರಣೆಯನ್ನು ದೆಹಲಿಯ ಕೋರ್ಟ್‌ ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

Advertisement

ಸಿಬಿಐ ಮತ್ತು ಇ.ಡಿ. ಪದೇ ಪದೆ ವಿಚಾರಣೆ ಮುಂದೂಡುವಂತೆ ಕೋರುತ್ತಿರುವ ಕಾರಣ, ಈ ನಿರ್ಧಾರ ಕೈಗೊಂಡಿರುವುದಾಗಿ ಕೋರ್ಟ್‌ ಹೇಳಿದೆ. ತನಿಖೆ ಪೂರ್ಣಗೊಂಡ ಬಳಿಕ, ತನಿಖಾ ಸಂಸ್ಥೆಗಳೇ ಕೋರ್ಟ್‌ ಅನ್ನು ಸಂಪರ್ಕಿಸಲಿ. ಆಗ ಮುಂದಿನ ವಿಚಾರಣೆಯ ದಿನಾಂಕ ನಿಗದಿಪಡಿಸುತ್ತೇವೆ ಎಂದು ನ್ಯಾಯಾಧೀಶ ಒ.ಪಿ. ಸೈನಿ ಹೇಳಿದ್ದಾರೆ.

ಇನ್ನೂ 3 ತಿಂಗಳು ಇಲ್ಲೇ ಇರಲಿ: ಕಳೆದ ಜನವರಿಯಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ನೀಡುವ ವೇಳೆ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಕಾರ್ತಿ ಚಿದಂಬರಂ ಇಟ್ಟಿದ್ದ 10 ಕೋಟಿ ರೂ. ಠೇವಣಿಯನ್ನು ಸದ್ಯಕ್ಕೆ ಬಿಡುಗಡೆ ಮಾಡಲು ಕೋರ್ಟ್‌ ನಿರಾಕರಿಸಿದೆ. ಇನ್ನೂ ಮೂರು ತಿಂಗಳು ಈ ಮೊತ್ತ ರಿಜಿಸ್ಟ್ರಿಯಲ್ಲೇ ಇರಲಿ ಎಂದು ನ್ಯಾ. ದೀಪಕ್‌ ಗುಪ್ತಾ ನೇತೃತ್ವದ ಪೀಠ ಹೇಳಿದೆ.

ವಿದೇಶ ಪ್ರವಾಸಕ್ಕೆ ಒಪ್ಪಿಗೆ ನೀಡುವ ವೇಳೆ 10 ಕೋಟಿ ರೂ. ಠೇವಣಿಯನ್ನು ರಿಜಿಸ್ಟ್ರಿಯಲ್ಲಿ ಇಡುವಂತೆ ಸುಪ್ರೀಂ ಕೋರ್ಟ್‌ ಕಾರ್ತಿಗೆ ಷರತ್ತು ವಿಧಿಸಿತ್ತು. ಈ ಮೊತ್ತವನ್ನು ವಾಪಸ್‌ ನೀಡುವಂತೆ ಮೇ ತಿಂಗಳಲ್ಲೂ ಕಾರ್ತಿ ಮಾಡಿದ್ದ ಮನವಿಯಲ್ಲಿ ಕೋರ್ಟ್‌ ತಿರಸ್ಕರಿಸಿತ್ತು. ನಾನು ಈ ಮೊತ್ತವನ್ನು ಸಾಲಕ್ಕೆ ಪಡೆದಿದ್ದು, ಅದಕ್ಕಾಗಿ ಬಡ್ಡಿಯನ್ನೂ ಪಾವತಿಸುತ್ತಿದ್ದೇನೆ ಎಂದು ಕಾರ್ತಿ ಹೇಳಿಕೊಂಡಿದ್ದರು.

ಜೈಲಲ್ಲೇ ಬರ್ತ್‌ಡೇ? ಸೆಪ್ಟೆಂಬರ್‌ 16ರಂದು ಚಿದಂಬರಂ ಅವರು 74ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಷ್ಟರಲ್ಲಿ, ಕೋರ್ಟ್‌ ಅವರಿಗೆ ಜಾಮೀನು ಮಂಜೂರು ಮಾಡದೇ ಇದ್ದರೆ, ಹುಟ್ಟಿದ ದಿನವನ್ನೂ ಅವರು ತಿಹಾರ್‌ನಲ್ಲೇ ಕಳೆಯಬೇಕಾಗುತ್ತದೆ. ಕಳೆದ ವರ್ಷ ಅವರ ಪುತ್ರ ಕಾರ್ತಿ ಕೂಡ ಇದೇ ಕೊಠಡಿಯಲ್ಲಿ ಹಾಗೂ ಇದೇ ಕೇಸಿನಲ್ಲಿ 12 ದಿನಗಳನ್ನು ಕಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next