ಕೋಲ್ಕತಾ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಪಿ ಚಿದಂಬರಂ ಅವರು ಬುಧವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರು ಮತ್ತು ಪಕ್ಷದ ಬೆಂಬಲಿಗರಿಂದ ಪ್ರತಿಭಟನೆಯನ್ನು ಎದುರಿಸಬೇಕಾಯಿತು.
ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ವಿರುದ್ಧದ ಮೆಟ್ರೋ ಡೈರಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಲು ಚಿದಂಬರಂ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಘಟನೆ ನಡೆದಿದೆ. ನ್ಯಾಯಾಲಯದಲ್ಲಿ ಬಂಗಾಳ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ನಂತರ ಪಿ ಚಿದಂಬರಂ ಅವರಿಗೆ ಘೇರಾವ್ ಹಾಕಲಾಗಿದೆ.
ಪ್ರಶ್ನಾರ್ಹ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಅವರು ಪ್ರಾರಂಭಿಸಿದ್ದು, ಅವರು ತೃಣಮೂಲ ಕಾಂಗ್ರೆಸ್ ಸರ್ಕಾರವು ಮೆಟ್ರೋ ಡೈರಿ ಷೇರುಗಳನ್ನು ಕೃಷಿ-ಸಂಸ್ಕರಣಾ ಸಂಸ್ಥೆ ಕೆವೆಂಟರ್‌ಗೆ ಮಾರಾಟ ಮಾಡುವುದನ್ನು ಪ್ರಶ್ನಿಸಿದ್ದರು.
ಪ್ರತಿಭಟನಾಕಾರರು, ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿಕೊಂಡ ವಕೀಲರಾಗಿದ್ದು, ಚಿದಂಬರಂ “ಪಕ್ಷದ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ” ಎಂದು ಆಕ್ರೋಶ ಹೊರ ಹಾಕಿದರು.
ಘಟನೆಯ ವಿಡಿಯೋಗಳಲ್ಲಿ ಚಿದಂಬರಂ ಅವರನ್ನು ಹಿಂಬಾಲಿಸುವ ವಕೀಲರು, ”ಕಾಂಗ್ರೆಸ್‌ನ ಅವನತಿಗೆ ಈ ರೀತಿಯ ನಾಯಕತ್ವವು ಜವಾಬ್ದಾರವಾಗಿದೆ” ಎಂದು ಟೀಕಿಸಿದ್ದು, ”ಚಿದಂಬರಂ ಗೋ ಬ್ಯಾಕ್” ಎಂಬ ಘೋಷಣೆಗಳೂ ಕೇಳಿಬಂದಿವೆ.
“ಇದು ಸ್ವತಂತ್ರ ದೇಶ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಇದರ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು?” ಎಂದು ಚಿದಂಬರಂ ಪಿಟಿಐಗೆ ತಿಳಿಸಿದ್ದಾರೆ.