Advertisement

ಚಿದುಗೆ ಕಾದಿದೆ ಮತ್ತಷ್ಟು ಸಂಕಷ್ಟ

01:31 AM Aug 23, 2019 | Team Udayavani |

ನವದೆಹಲಿ: ಐಎನ್‌ಎಕ್ಸ್‌ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅನುವು ಮಾಡುವುದರ ಜತೆಗೆ ಚಿದಂಬರಂ ಕೈಗೊಂಡಿದ್ದ ಇತರ ಪ್ರಮುಖ ನಿರ್ಧಾರಗಳ ತನಿಖೆಗೆ ಸಿಬಿಐ ಮುಂದಾಗಿದೆ.

Advertisement

ಮಾಜಿ ಸಚಿವ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಇತರ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಲಂಚ ಸ್ವೀಕಾರ ಮಾಡಿರಬಹುದು ಎನ್ನುವುದು ಸಿಬಿಐನ ಅನುಮಾನ. ಅದಕ್ಕಾಗಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ) ಮೂಲಕ ಆ ಸಂಸ್ಥೆಗಳಿಗೆ ಇತರ ರಾಷ್ಟ್ರಗಳಿಂದ ಬಂಡವಾಳ ಹೂಡಿಕೆಗೆ ಅನುವು ಮಾಡಿಕಕೊಟ್ಟಿರುವ ಸಾಧ್ಯತೆ ಇದೆ ಎನ್ನುವುದು ತನಿಖಾ ಸಂಸ್ಥೆಯ ಗುಮಾನಿ. ಆದರೆ, ಅವರಿಬ್ಬರೂ ಆರೋಪವನ್ನು ಬಲವಾಗಿಯೇ ನಿರಾಕರಿಸಿದ್ದಾರೆ. ಸಿಬಿಐ ದಾಖಲಿಸಿರುವ ಎಫ್ಐಆರ್‌ ಪ್ರಕಾರ ಕಾರ್ತಿ ಚಿದಂಬರಂ ತಂದೆಯ ಪ್ರಭಾವದ ಮೂಲಕ ವಿದೇಶಿ ಹೂಡಿಕೆ ಪಡೆಯಲು ನೆರವಾಗಿದ್ದಾರೆ. ಆದರೆ ಪಿ.ಚಿದಂಬರಂ ಹೆಸರನ್ನು ದಾಖಲು ಮಾಡದೇ ಇರುವುದು ಗಮನಾರ್ಹ. ಕಾರ್ತಿ ಚಿದಂಬರಂ ನಕಲಿ ಕಂಪನಿಗಳ ಮೂಲಕ ಪಾವತಿ ಸ್ವೀಕಾರ ಮಾಡಿದ್ದಾರೆ ಎನ್ನುವುದು ಸಿಬಿಐ ಆರೋಪವಾಗಿದೆ.

ಇಂದ್ರಾಣಿ ಮುಖರ್ಜಿ ಹೇಳಿದ್ದೇನು?
ಪುತ್ರ ಕಾರ್ತಿ ಚಿದಂಬರಂ ಉದ್ದಿಮೆಗೆ ನೆರವಾಗಬೇಕು. ಹೀಗೆ ಮಾಡಿದರೆ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯ ಕೋರಿಕೆಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ) ಅನುಮೋದನೆ ಸಿಗುತ್ತದೆ. ಹೀಗೆಂದು ಮಾಜಿ ಸಚಿವ ಚಿದಂಬರಂ ಹೇಳಿದ್ದರು ಎಂದು ಸಂಸ್ಥೆಯ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದರು. ಪತಿ ಪೀಟರ್‌ ಮುಖರ್ಜಿ ಇದೇ ನಿಟ್ಟಿನಲ್ಲಿ ನವದೆಹಲಿಯಲ್ಲಿ ಚಿದಂಬರಂರನ್ನು ಭೇಟಿಯಾಗಿದ್ದರು. ಐಎನ್‌ಎಕ್ಸ್‌ ಸಂಸ್ಥೆಗೆ ಎಫ್ಡಿಐ ಪಡೆದುಕೊಳ್ಳುವ ಅರ್ಜಿಯನ್ನು ಹಿಡಿದುಕೊಂಡು ನೆರವು ನೀಡುವಂತೆ ಪೀಟರ್‌ ಮುಖರ್ಜಿ ಆಗ ವಿತ್ತ ಸಚಿವರಾಗಿದ್ದ ಚಿದಂಬರಂರನ್ನು ಕೇಳಿಕೊಂಡಿದ್ದರು. ಅದನ್ನು ಕೇಳಿದ ಅವರು, ಪುತ್ರ ಕಾರ್ತಿ ಉದ್ದಿಮೆಯಲ್ಲಿ ನೆರವಾಗಬೇಕು. ಎಫ್ಐಪಿಬಿಯಿಂದ ಅನುಮತಿ ಸಿಗುವಂತಾಗಲು ಸಾಗರೋತ್ತರ ಮೂಲಗಳಿಂದ ಪಾವತಿ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿ ದ್ದರು. ಜಾರಿ ನಿರ್ದೇಶನಾಲಯಕ್ಕೆ 2008ರಲ್ಲಿ ಇಂದ್ರಾಣಿ ನೀಡಿರುವ ಹೇಳಿಕೆಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ ಎಂದು ಸುದ್ದಿ ಸಂಸ್ಥೆ ‘ಪಿಟಿಐ’ ವರದಿ ಮಾಡಿದೆ.

ನಿಯಮ ಉಲ್ಲಂಘನೆ ವಿಚಾರಗಳ ಬಗ್ಗೆ ಪೀಟರ್‌ ಮುಖರ್ಜಿ ಪ್ರಸ್ತಾಪಿಸಿದ್ದಾಗ ‘ಕಾರ್ತಿ ಚಿದಂಬರಂ ಮೂಲಕ ಅದನ್ನು ಪರಿಹರಿಸಿಕೊಡಲಾಗುತ್ತದೆ. ಅದಕ್ಕಾಗಿ 1 ದಶಲಕ್ಷ ಅಮೆರಿಕನ್‌ ಡಾಲರ್‌ ಮೊತ್ತ (3.10 ಕೋಟಿ ರೂ.)ವನ್ನು ವಿದೇಶದಲ್ಲಿರುವ ಖಾತೆಗೆ ವರ್ಗಾಯಿಸಲು ಸಾಧ್ಯವೇ ಎಂದು ಕೇಳಿದ್ದರು. ಈ ಅಂಶ ಕಾರ್ತಿಗೂ ಗೊತ್ತು. ಅದು ಸಾಧ್ಯವಿಲ್ಲ ಎಂದು ಪೀಟರ್‌ ಹೇಳಿದಾಗ ಚೆಸ್‌ ಮ್ಯಾನೇಜ್‌ಮೆಂಟ್ ಮತ್ತು ಅಡ್ವಾಂಟೇಜ್‌ ಸ್ಟ್ರಾಟಜಿಕ್‌ ಕನ್ಸಲ್ಟಿಂಗ್‌ ಪ್ರೈ.ಲಿ ಸಂಸ್ಥೆಗಳನ್ನು ಬದಲಿ ವ್ಯವಸ್ಥೆಗಳಾಗಿ ಹೆಸರಿಸಿದ್ದರು ಚಿದು ಪುತ್ರ. ಈ ಮೂಲಕ ಪಾವತಿಗೆ ವ್ಯವಸ್ಥೆಯನ್ನೂ ಹೇಳಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೀಟರ್‌ ಮುಖರ್ಜಿ ಕೂಡ ಇ.ಡಿ.ತನಿಖಾಧಿಕಾರಿಗಳ ವಿಚಾರಣೆ ವೇಳೆ ಪಿ.ಚಿದಂಬರಂ ಅವರನ್ನು 2-3 ಬಾರಿ ಭೇಟಿಯಾಗಿದ್ದ ಬಗ್ಗೆ ವಿವರಿಸಿದ್ದಾರೆ.

Advertisement

ಪೀಟರ್‌ ಅಥವಾ ಇಂದ್ರಾಣಿ ಭೇಟಿಯಾಗಿಲ್ಲ: ಐಎನ್‌ಎಕ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಅಥವಾ ಪೀಟರ್‌ ಮುಖರ್ಜಿ ಅವರನ್ನು ಭೇಟಿಯೇ ಆಗಿಲ್ಲ. ಈ ವಿಚಾರದಲ್ಲಿ ತಂದೆಯ ಬಂಧನ ವಿಚಾರವೇ ರಾಜಕೀಯವಾಗಿ ಪ್ರತೀಕಾರ ತೀರಿಸಿಕೊಳ್ಳುವ ವಿಷಯವೇ ಆಗಿದೆ ಎಂದು ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ. ‘ಇಂದ್ರಾಣಿ ಮುಖರ್ಜಿ, ಪೀಟರ್‌ ಮುಖರ್ಜಿ ಅವರನ್ನು ಭೇಟಿಯಾಗಿಯೇ ಇಲ್ಲ. ಬೈಕುಲ ಜೈಲಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಇಂದ್ರಾಣಿಯನ್ನು ಭೇಟಿಯಾಗಿದ್ದೆ. ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ ಪ್ರಕ್ರಿಯೆ ತಿಳಿದಿಲ್ಲ ಮತ್ತು ಅಲ್ಲಿ ಯಾರನ್ನೂ ಭೇಟಿಯಾಗಿಲ್ಲ’ ಎಂದು ಹೇಳಿದ್ದಾರೆ.

ಮತ್ತೂಬ್ಬ ಹೈಪ್ರೊಫೈಲ್ ನಾಯಕ
ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ ನಾಯಕರ ಸಾಲಿಗೆ ಪಿ.ಚಿದಂಬರಂ (73) ಸೇರಿದ್ದಾರೆ. ಈ ಪಟ್ಟಿಯಲ್ಲಿ ಇನ್ನೂ ಹಲವು ನಾಯಕರು ಇದ್ದಾರೆ.
ಬಿ.ಎಸ್‌.ಯಡಿಯೂರಪ್ಪ: ಕರ್ನಾಟಕದ ಹಾಲಿ ಮುಖ್ಯಮಂತ್ರಿ. ಸರ್ಕಾರಿ ಜಮೀನು ಡಿನೋಟಿಫೈ ಆರೋಪ.
ಸುರೇಶ್‌ ಕಲ್ಮಾಡಿ: ಕಾಮನ್ವೆಲ್ತ್ ಗೇಮ್ಸ್‌ ಹಗರಣ. 9 ತಿಂಗಳ ಬಳಿಕ ಬಿಡುಗಡೆ
ಅಮರ್‌ ಸಿಂಗ್‌: ಸಮಾಜವಾದಿ ಪಕ್ಷದ ಮಾಜಿ ನಾಯಕ. ‘ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ಬಂಧನ
ಎಸ್‌.ಪಿ.ತ್ಯಾಗಿ: ಐಎಎಫ್ನ ನಿವೃತ್ತ ಮುಖ್ಯಸ್ಥ. ವಿವಿಐಪಿ ಕಾಪ್ಟರ್‌ ಹಗರಣ ಸಂಬಂಧ ಬಂಧನ
ಲಾಲು ಪ್ರಸಾದ್‌ ಯಾದವ್‌: ಆರ್‌ಜೆಡಿ ಸಂಸ್ಥಾಪಕ. ಬಹುಕೋಟಿ ಮೌಲ್ಯದ ಮೇವು ಹಗರಣದಲ್ಲಿ ಬಂಧನ.
ಜಯಲಲಿತಾ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ. ಅಕ್ರಮ ಆಸ್ತಿ ಪ್ರಕರಣ
ಬಂಗಾರು ಲಕ್ಷಣ್‌: ಬಿಜೆಪಿಯ ಅಧ್ಯಕ್ಷರಾಗಿದ್ದ ಅವರು ನಕಲಿ ಶಸ್ತ್ರಾಸ್ತ್ರ ದಳ್ಳಾಳಿಗಳಿಂದ 1 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪ
ಎ.ರಾಜಾ: ಕೇಂದ್ರದ ಮಾಜಿ ಸಚಿವ. 2ಜಿ ಸ್ಪೆಕ್ಟ್ರಂ ಹಗರಣ ಸಂಬಂಧ ಬಂಧನ.
ಕನಿಮೋಳಿ: ಸದ್ಯ ಡಿಎಂಕೆ ಸಂಸದೆ. 2ಜಿ ಹಗರಣ ಸಂಬಂಧ 2011 ಮೇ 21ರಿಂದ ನ.28ವರೆಗೆ ಬಂಧನ.

ಪಿ. ಚಿದಂಬರಂ ಆಸ್ತಿ ಮೌಲ್ಯ
(2014ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ ಪ್ರಕಾರ)
ಉದ್ಯೋಗ- ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ನ್ಯಾಯವಾದಿ. ಪತ್ನಿ ನಳಿನಿ ಮದ್ರಾಸ್‌ ಹೈಕೋರ್ಟಲ್ಲಿ ಹಿರಿಯ ನ್ಯಾಯವಾದಿ.
ಒಟ್ಟು ಆಸ್ತಿ ಮೌಲ್ಯ: 95.66 ಕೋಟಿ ರೂ. (ಪತ್ನಿಯದ್ದೂ ಸೇರಿದೆ)
ಒಟ್ಟು ಸಾಲ: 5.79 ಕೋಟಿ ರೂ.
ನಗದು: 5 ಲಕ್ಷ ರೂ.
24 ಬ್ಯಾಂಕ್‌ಗಳ ಖಾತೆಗಳಲ್ಲಿ ಠೇವಣಿ:
24 ಕೋಟಿ ರೂ.
ಚರಾಸ್ತಿ ಮೌಲ್ಯ: 54.30 ಕೋಟಿ ರೂ.
ಸ್ಥಿರಾಸ್ತಿ ಮೌಲ್ಯ: 41.35 ಕೋಟಿ ರೂ.
ಚಿನ್ನ: 32 ಗ್ರಾಂ, 87, 232 ರೂ. (ಮೌಲ್ಯ)
ವಜ್ರ: 3.25 ಕ್ಯಾರೆಟ್‌, 97,500 ರೂ (ಮೌಲ್ಯ)
ಪತ್ನಿ ನಳಿನಿ ಹೊಂದಿರುವ ಆಭರಣದ ವಿವರ
ಚಿನ್ನ: 1.43 ಕೆಜಿ, 39 ಲಕ್ಷ ರೂ. (ಮೌಲ್ಯ)
ಬೆಳ್ಳಿ: 52 ಕೆಜಿ, 20 ಲಕ್ಷ ರೂ. (ಮೌಲ್ಯ)
ವಜ್ರ: 76.71 ಕ್ಯಾರೆಟ್‌, 23 ಲಕ್ಷ ರೂ. (ಮೌಲ್ಯ)
ಕಾರ್ತಿ ಚಿದಂಬರಂ ಹೊಂದಿರುವ ಆಸ್ತಿ ಮೌಲ್ಯ
(2019ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಕೆಯಾಗಿರುವ ಅಫಿಡವಿಟ್‌ ಪ್ರಕಾರ)
ಒಟ್ಟು ಆಸ್ತಿ ಮೌಲ್ಯ: 79.37 ಕೋಟಿ ರೂ.
ಸಾಲ: 17.69 ಕೋಟಿ ರೂ.
ಬ್ಯಾಂಕ್‌ಗಳಲ್ಲಿ ಠೇವಣಿ: 7 ಕೋಟಿ ರೂ.
ಚರಾಸ್ತಿ ಮೌಲ್ಯ: 26 ಕೋಟಿ ರೂ.
ಸ್ಥಿರಾಸ್ತಿ ಮೌಲ್ಯ: 45. 85 ಕೋಟಿ ರೂ.

ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ.)ಗಳನ್ನು ವೈಯಕ್ತಿಕ ಹಗೆ ತೀರಿಸುವ ಇಲಾಖೆಗಳಂತೆ ಕೇಂದ್ರ ಸರಕಾರ ಬಳಸಿಕೊಳ್ಳುತ್ತಿದೆ. ಸದ್ಯ ನಡೆದಿರುವ ಬೆಳವಣಿಗೆ ಪ್ರಜಾಸತ್ತೆಯ ಕಗ್ಗೊಲೆ.
ರಣದೀಪ್‌ ಸುಜೇವಾಲಾ, ಕಾಂಗ್ರೆಸ್‌ ವಕ್ತಾರ

ಚಿದಂಬರಂಗೆ ಕಾಂಗ್ರೆಸ್‌ ನೀಡುತ್ತಿರುವ ಬೆಂಬಲ ನೋಡಿದರೆ, ಅವರೆಲ್ಲರೂ ಭ್ರಷ್ಟಾಚಾರವನ್ನು ರಕ್ಷಿಸಲು ಒಗ್ಗಟ್ಟಾದಂತಿದೆ.
ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next