Advertisement

ಒಯ್ಯಾರ ಬಿಟ್ಟು ಪ್ರೀತಿ ಮಾಡು ಕಾಲ್ಗೆಜ್ಜೆ ಕೊಡಸ್ತೀನಿ…..

06:30 AM Feb 20, 2018 | |

ಏನ್‌ ನಿನ್ನ ಬಿಟ್ಟ ಬದಕಾಕ ಆಗುದಿಲ್ಲ ಅಂತ ಏನಿಲ್ಲ. ನಿನ್ನ ಕೂಡ ಆದರೆ ಬಾಳ ಚಂದ ಬದಕ್ತನಿ ಅಂತ. ಬಡಾಯಿ ಬಾಳ ಆದರೂ ಪ್ರೀತಿ ಒಳಗ ಬಡಪಾಯಿ ಅಲ್ಲಾ ನಾ. 

Advertisement

ಊರ ಜಾತ್ರ್ಯಾಗ  ಅಡ್ಡಾದಿಡ್ಡಿ ಓಡಾಡಿಕೊಂಡ್‌ ಇದ್ದವಂಗ್‌ ಇಲ್ಲದ ಜಾದೂ ಮಾಡಿ ಹುಚ್ಚು ಹಿಡಸಿದಕಿ. ಅಲ್ಲಾ ಹುಡುಗಿ, ಮತ್ಯಾರೂ ಸಿಗಲಿಲ್ಲನ ನಿನಗ? ನನ್ನ ಮುಂದ ಯಾಕ ಬಂದಿ ಅವತ್ತು? ಅರಾಮ ದೇವರಗೆ ಬಿಟ್ಟ ಗೂಳಿ ಹಂಗ್‌ ಅಡ್ಯಾಡಕೋತ ಇದ್ದವನ ಮುಂದ ಇಲ್ಲದ ವಯ್ನಾರ ಮಾಡಕೋತ ಬಂದು, ಆ ಸುಡಗಾಡ ಹಣಿಯ ಮ್ಯಾಲಿನ ಕೂದಲಾ ಹೊಳ್ಳಾ ಬಳ್ಳಾ ಸರಿಪಡಿಸಿಕೊಂತ ನೀ ಹೊಂಟರ, ಇಲ್ಲೆ ನಿನ್ನ ನೋಡಕೊಂತ ಕುಂತವಂಗ್‌, ಮತ್‌ ತಲೆ ಕೆಟ್ಟು ಔಟ್‌ ಆಫ್ ಕಂಟ್ರೋಲ್‌ ಆಗತಿತ್‌.

ಈ ಅಡ್ನಾಡಿ ಪ್ರೀತಿ ಪ್ರೇಮಾ ಅನ್ನುವ ಎಲ್ಲಾ ಟಿ.ವಿ, ಸಿನಿಮಾದಾಗ ಬರು ಹೀರೋ, ಹೀರೋಯಿನ್‌ಗಳಿಗೆ ಅಷ್ಟ ಅನಕೊಂಡಾವಂಗ ಪ್ರ್ಯಾಕ್ಟಿಕಲ್‌ ಆಗಿ ಹೇಳಿಕೊಟ್ಟಕಿ ನೀನ. ಈ ಎರೆ ಹೊಲದಾಗ, ಕರೆ ಮಣ್ಣ ನೋಡಕೊಂಡ ಬೆಳೆದಾವ ನಾನ. ಒಮ್ಮೊಮ್ಮೆ ಅನಸ್ತತಿ, ಆ ಹತ್ತಿ ತೊಳಿ ಅರಳಬೇಕಂದರ ನಿನ್ನ ಅನುಮತಿ ಕೇಳಿರತತಿ ಏನೋ ಅಂತ. ಎಷ್ಟ ಚೆಂದ ಹುಡುಗಿ ಆ ನಿನ್ನ ದುಂಡನ ಮಖಾ. ಕರೆ ಹೊಲದಾಗ ಬಿಳೆ ಹತ್ತಿ ತೊಳಿ ಇದ್ದಂಗ. ಕರೆ ನೆಲಕ್‌R ಹಸರ ಹೊದಿಕೆ ಹೊದಸಿದಂಗ ಎಷ್ಟ ಚಂದ ಗೊತ್ತನ?

ಇಲ್ಲದ ಒಣಾ ಬಿಂಕಾ ಬಿಟ್ಟು ಸುಮ್ಮನ ಪ್ರೀತಿ ಮಾಡಾಕ ಒಪ್ಪಕೋ. ಒಡ್ಯಾನ ಮಾಡಸಿ ಕೊಡ್ತನಿ. ಒಯ್ನಾರ ಬಿಟ್ಟ ಪ್ರೀತಿ ಮಾಡು, ಕಾಲ್ಗೆಜ್ಜಿ ಕೊಡಸ್ತನಿ. ಕಾಡಸಲಂಗ ಪ್ರೀತಿ ಮಾಡು, ತೋಳಬಂದಿ ತರತನಿ. ತಡಮಾಡದ ಪ್ರೀತಿ ಮಾಡು. ಇಷ್ಟ ಕಾಡಸೂದ ಚಲೊ ಅಲ್ಲಾ ಹುಡುಗಿ. ನಾ ಜಬರದÓ¤… ಹುಡಗ ಅದನಿ ಪೊರ್ಗ ಬಿಟ್ಟ ಯೋಚನೆ ಮಾಡ. ಏನ್‌ ನಿನ್ನ ಬಿಟ್ಟ ಬದಕಾಕ ಆಗುದಿಲ್ಲ ಅಂತ ಏನಿಲ್ಲ. ನಿನ್ನ ಕೂಡ ಆದರೆ ಬಾಳ ಚಂದ ಬದಕ್ತನಿ ಅಂತ. ಬಡಾಯಿ ಬಾಳ ಆದರೂ ಪ್ರೀತಿ ಒಳಗ ಬಡಪಾಯಿ ಅಲ್ಲಾ ನಾ. 

 ಹಳ್ಳದ ದಂಡ್ಯಾಗ ಹಳ್ಳಿಲೇ ಮನಿ ಮಾಡಿ ಜೋಪಾನ ಮಾಡಿ ಇಡತೇನಿ, ನೀ ಏನ್‌ ಚಿಂತಿ ಮಾಡಬ್ಯಾಡ. ಆರತಿಗೊಂದು ಕೀರ್ತಿಗೊಂದ ಮಕ್ಕಳ ಮಾಡಕೊಂಡ್‌ ಚಂದ ಬಾಳೆ ಮಾಡಕೊಂಡ್‌ ಹೋಗ್ತನಿ. ನೀಲಿ ಅಂಗಿ ನೀಲಿ ಚೊಣ್ಣದಾಗ ಎಷ್ಟ ಚಂದ ಕಾಣತಾವ ಗೊತ್ತನ ಮಕ್ಕಳು. ಜರ್ಸಿ ಆಕಳಾ ಕಟ್ಟೂಣ, ಹೀರೋ ಹೊಂಡಾ ಗಾಡಿ ತರೂಣ. ಕಲ್ಪನೆ ಮಾಡಕೊಂತ ಕುಂದರಬ್ಯಾಡ, ಮೊದಲ ಹ್ಞುಂ ಅನ್ನು. ಮುಂದ ಎಲ್ಲಾ ಗೊತ್ತಕ್ಕತಿ.

Advertisement

ಕೆರಿ ನೀರನಾ ತುಂಬಕೊಂಡ ಕೊಡಾ ನೆತ್ತಿ ಮ್ಯಾಲಾ ಇಟಕೊಂಡ ಬರಕತ್ರಾ ಯಾವ ರ್‍ಯಾಂಪ್‌ ವಾಕ್‌ನೂ ನಿನ್ನ ಮುಂದ ನಾಚಗೊಂಡ ತಲಿ ಕೆಳಗ ಹಾಕತತಿ.  ಹಂಚಿನ ಮನಿ ಕಟ್ಟತನಿ. ರಾಣಿಯಂಗ ನೋಡ್ಕೊತನಿ. ಕಂಚಿನ ಕದಕ್ಕ ಆತಗೊಂಡ್‌ ಸಂಜಿಮುಂದ ನಾ ಹೊಲದಿಂದ ಬರುವಾಗ ನೀನ ತಲಿತುಂಬ ಸೆರಗ ಹೊಚಗೊಂಡ ನನಗ ಕಾಯ್ಕೊಂತ ನಿಲ್ಲುದ ನೆನಸ್ಕೊಂಡ್ರ ಮೂರ ಗೇಣಿನ್ಯಾಗ ಮೂರಲೋಕ ತಿರಗಿ ಬಂದಂಗ ಅಕ್ಕತಿ.

ನೀ ಏನ್‌ ಹೊಲದಾಗ ದುಡದ ಬಣ್ಣಾ ಸುಟ್ಟಗೋಳುದ ಬ್ಯಾಡ. ಮಧ್ಯಾನದ ಹೊತ್ತಿಗೆ ಬುತ್ತಿ ಗಂಟ ಕಟಗೊಂಡ ವಯ್ನಾರ ಮಾಡಕೊಂತ ಹೊಲಕ್ಕ ಬಂದ್ರ ಸಾಕು . ಅರ್ಧಾ ಹೊಟ್ಟಿ ಅಲ್ಲೆ ತುಂಬಿರತತಿ. ನೋಡವಾ, ಹೇಳೂದ ಎಲ್ಲಾ ಹೇಳೇನಿ. ಉಳದಿದ್ದ ನಿನಗ ಬಿಟ್ಟಿದ್ದ. ಇಲ್ಲದ್ದ ಒಣ ಧಿಮಾಕ ಬಿಟ್ಟ ಯೋಚನೆ ಮಾಡ. ಬಿಟ್ಟರ ಸಿಗುದಿಲ್ಲಾ ಇಂತಾ ಹುಡುಗಾ. ನಿನ್ನ ಒಪ್ಪಿಗೀ ಮಾತಿಗಂತನ ಊರ ಬಸವಣ್ಣನ ಗುಡಿಮುಂದ ಕಾಯ್ಕೊಂತ ಕುಂತಿರ್ತನಿ. ಲಗುನ ಬಂದ ಸಿಹಿ ಸುದ್ದಿ ಹೇಳು. ಲಗ್ನಕ್ಕ ಕಾರ್ಡ್‌ ಪ್ರಿಂಟ್‌ ಮಾಡ್ಯಾಕ ಹೇಳಬೇಕು…

* ಕಲ್ಮೇಶ ಹ ತೋಟದ

Advertisement

Udayavani is now on Telegram. Click here to join our channel and stay updated with the latest news.

Next