Advertisement

ಕೋಟಿ ವೆಚ್ಚದ ಆಕ್ಸಿಜನ್‌ ಘಟಕ ಸಿದ್ಧ

06:20 PM Sep 17, 2021 | Team Udayavani |

ವಾಡಿ: ಕೊರೊನಾ ಮೂರನೇ ಅಲೆ ಎದುರಿಸಲು ಎಸಿಸಿ ಸಿಮೆಂಟ್‌ ಕಂಪನಿ ನಿರ್ಮಿಸಿದ ಕೋಟಿ ರೂ. ವೆಚ್ಚದ ಆಕ್ಸಿಜನ್‌ ಘಟಕ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಪರಿಸರದಲ್ಲಿ ಸಿದ್ಧವಾಗಿದ್ದು, ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಕಂಪನಿ ಸಿದ್ಧವಾಗಿದೆ.

Advertisement

ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ ಕೊರನಾ ಮೂರನೇ ಅಲೆ ಎದುರಿಸಲು ಆಕ್ಸಿಜನ್‌ ಘಟಕ ಸ್ಥಾಪಿಸುವಂತೆ ಎಸಿಸಿ ಕಂಪನಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ.

ಎಸಿಸಿ ನೀಡಿದ ಸೌಲಭ್ಯ:
ಸ್ಥಾಪನೆಯಾಗಿರುವ ಆಕ್ಸಿಜನ್‌ ಘಟದಿಂದ ಒಂದು ತಾಸಿಗೆ 40 ಜನ ರೋಗಿಗಳಿಗೆ ನೀಡಬಹುದಾದಷ್ಟು ಆಮ್ಲಜನಕ (10 ಕ್ಯೂಬಿಕ್‌ ಮೀಟರ್‌) ಉತ್ಪಾದನೆ ಆಗುತ್ತದೆ. ದಿನದ 24 ಗಂಟೆಗಳ ಕಾಲ ಈ ಘಟಕ ಕಾರ್ಯನಿರ್ವಹಿಸುತ್ತದೆ. ಇದಕ್ಕೆ 25 ಲಕ್ಷ ರೂ. ಖರ್ಚು ಮಾಡಲಾಗಿದೆ. ಅಲ್ಲದೇ 4 ಲಕ್ಷ ರೂ. ಮೌಲ್ಯದ 35 ಕೆವಿ ಜನರೇಟರ್‌, 10 ಲಕ್ಷ ರೂ. ಮೌಲ್ಯದ ಐಸಿಯು ವೆಂಟಿಲೇಟರ್‌, ಐದು ಐಸಿಯು ಬೆಡ್‌, 26 ಆಕ್ಸಿಜನ್‌ ಬೆಡ್‌, ಎರಡು ಆಮ್ಲಜನಕ ಉತ್ಪಾದನಾ ಯಂತ್ರಗಳು, 10 ಜಂಬೋ ಸಿಲಿಂಡರ್‌, ಒಂದು ಇಸಿಜಿ ಯಂತ್ರ, ಮೂರು ಕೋಣೆಗಳಲ್ಲಿ ಜನರಲ್‌ ಬೆಡ್‌ ಹಾಗೂ ಪೀಠೊಪಕರಣ, ಐಸಿಯು ತೀವ್ರ ನಿಗಾ ಘಟಕಗಳಿಗೆ ಎಸಿ ಅಳವಡಿಸುವುದು ಸೇರಿದಂತೆ ಒಟ್ಟು ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಆಕ್ಸಿಜನ್‌ ಘಟಕ ಸ್ಥಾಪನೆಗೆ ಎಸಿಸಿ ಕಂಪನಿಗೆ ಸೂಚಿಸಿದ್ದರು. ಈ ಸೂಚನೆಯಂತೆ ವಾಡಿ ಸುಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಿಸಿದ್ದೇವೆ. ಆಕ್ಸಿಜನ್‌ ಕೋಣೆಗಳಿಗೆ ಬೇಕಾದ ವೈದ್ಯಕೀಯ ಸೌಲಭ್ಯ ಮತ್ತು ಪೀಠೊಪಕರಣ ಒದಗಿಸಿದ್ದೇವೆ. ಇದರಿಂದ ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್‌ ಉತ್ಪಾದಿಸಿಕೊಳ್ಳಬಹುದು. ಜನರೇಟರ್‌ ಯಂತ್ರವನ್ನು ನೀಡಲಾಗಿದೆ. ಒಂದು ವೇಳೆ ತಾಂತ್ರಿಕ ಕಾರಣಕ್ಕೆ ಘಟಕ ನಿಷ್ಕ್ರಿಯವಾದರೆ ಒದಗಿಸಲಾದ ಹತ್ತು ಜಂಬೋ ಸಿಲಿಂಡರ್‌ಗಳ ಆಕ್ಸಿಜನ್‌ ಸಹಾಯಕ್ಕೆ ಬರುತ್ತದೆ. ಇದಕ್ಕೂ ಮೀರಿದ ತುರ್ತು ಪರಿಸ್ಥಿತಿ ಎದುರಾದರೆ ನೀಡಲಾದ ಐದು ಕಾನ್ಸ್‌ಂಟ್ರೇಟರ್‌ ಗಳ ಉಪಯೋಗ ಪಡೆಯಬಹುದು.
ಪೆದ್ದಣ್ಣಾ ಬೀದಾಳ, ಮುಖ್ಯ ವ್ಯವಸ್ಥಾಪಕ, ಸಿಎಸ್‌ಆರ್‌ ವಿಭಾಗ, ಎಸಿಸಿ

ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಂದರ್ಭದಲ್ಲಿ ಜಿಲ್ಲೆಯ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಮತ್ತೆ ಇಂತಹ ಕರಾಳ ದಿನಗಳು ಬರಬಾರದು ಎನ್ನುವ ಕಾರಣಕ್ಕೆ ಚಿತ್ತಾಪುರ ಕ್ಷೇತ್ರದಲ್ಲಿ ಮಾದರಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲಾಗಿತ್ತು. ಈಗ ಮುಂಬರುವ ಮೂರನೇ ಅಲೆಯಿಂದ ತಾಲೂಕಿನ ಜನರಿಗೆ ಆಮ್ಲಜನಕದ ಕೊರತೆ ಆಗಬಾರದು ಎನ್ನುವ ಆಕ್ಸಿಜನ್‌ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಿಯಾಂಕ್‌ ಖರ್ಗೆ, ಶಾಸಕ,
ಚಿತ್ತಾಪುರ

Advertisement

*ಮಡಿವಾಳಪ್ಪ ಹೇರೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next