Advertisement

ರಕ್ತದಲ್ಲಿ ಆಮ್ಲಜನಕ ಸ್ಯಾಚುರೇಶನ್‌ ಮಟ್ಟ ಸರ್ವೆ; ವಾರದಲ್ಲಿ 40,321 ಮನೆ ಭೇಟಿ ಸವಾಲು

12:26 PM Jul 28, 2020 | mahesh |

ಬೆಳ್ತಂಗಡಿ: ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ಸೂಚನೆ ಮೇರೆಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣ ಕಂಡು ಬರುತ್ತಿರುವ 8 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವ್ಯಕ್ತಿಯ ರಕ್ತದಲ್ಲಿ ಆಮ್ಲ ಜನಕ ಸ್ಯಾಚುರೇಶನ್‌ ಮಟ್ಟ ತಿಳಿಯುವ ದೃಷ್ಟಿಯಿಂದ ಜು. 24ರಿಂದ ತಾ| ಆರೋಗ್ಯ ಅಧಿಕಾರಿ ಡಾ| ಕಲಾಮಧು ನೇತೃತ್ವದಲ್ಲಿ ಸರ್ವೆ ಆರಂಭವಾಗಿದೆ.

Advertisement

ಜು. 24ರಿಂದ 29ರ ವರೆಗೆ ಸರ್ವೆ ಕಾರ್ಯ ಪೂರ್ಣಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ತಾಲೂಕಿನಲ್ಲಿ 40,321 ಮನೆಗಳ ಪೈಕಿ 4 ದಿನಗಳಲ್ಲಿ 4,007 ಮನೆಗಳ 20,006 ಮಂದಿಯ ಪರೀಕ್ಷೆ ಪೂರ್ಣಗೊಂಡಿದೆ. ಉಳಿದ ಎರಡು ದಿನಗಳಲ್ಲಿ ತಾಲೂಕಿನ 36,314 ಮನೆಗಳ ಸರ್ವೆ ಕಷ್ಟಸಾಧ್ಯವಾಗಿದ್ದು, ಮತ್ತಷ್ಟು ದಿನಗಳು ತಗಲುವ ಸಂಭವವಿದೆ. ಈಗಾಗಲೇ ಅಂಗನವಾಡಿ ಕಾರ್ಯ ಕರ್ತೆಯರು, ಆಶಾ ಕಾರ್ಯಕರ್ತೆಯರು ಸಂಯುಕ್ತವಾಗಿ ಸರ್ವೆ ಕಾರ್ಯ ನಡೆಸಲು 2 ಮಂದಿಯಂತೆ ತಂಡ ರಚಿಸಲಾಗಿದೆ.

8 ಪಿಎಚ್‌ಸಿ ವ್ಯಾಪ್ತಿ
ತಾಲೂಕಿನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ತಾ| ಆಸ್ಪತ್ರೆ ಬೆಳ್ತಂಗಡಿ, ಅಳದಂಗಡಿ, ನಾರಾವಿ, ವೇಣೂರು, ಪಡಂಗಡಿ, ಉಜಿರೆ, ಮುಂಡಾಜೆ, ಕಣಿಯೂರು ಪ್ರದೇಶಗಳ ಸರ್ವೆ ನಡೆಸಲು 189 ಮಂದಿ ಆಶಾ ಕಾರ್ಯಕರ್ತೆಯರನ್ನು ಗುರುತಿಸಲಾಗಿದೆ. ಒಂದು ದಿನದಲ್ಲಿ ಒಂದು ತಂಡಕ್ಕೆ 30 ಮನೆ ಸರ್ವೆಗೆ ನಿಗದಿಗೊಳಿಸಲಾಗಿದೆ. ಸರ್ವೆ ಕಾರ್ಯಕ್ಕೂ ಮುನ್ನ ಆಶಾ ಕಾರ್ಯ ಕರ್ತೆಯರಿಗೆ ತರಬೇತಿ ನೀಡಲಾಗಿದೆ.
ಆಮ್ಲಜನಕ ಸ್ಯಾಚುರೇಶನ್‌, ಹೃದಯ ಬಡಿತ ಪರಿಶೀಲನೆಗೊಳಪಡಿಸಲಾಗುತ್ತಿದೆ. ಆಮ್ಲಜನಕ ಸ್ಯಾಚುರೇಶನ್‌ ಮಟ್ಟ ಶೇ. 90 ಕಡಿಮೆ ಇದ್ದಲ್ಲಿ ಅಥವಾ ಕೆಮ್ಮು, ಶೀತ, ನೆಗಡಿ, ಜ್ವರ ಲಕ್ಷಣ ಕಂಡುಬಂದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆ ಗೊಳಪಡಿಸಲು ಸೂಚಿಸಲಾಗುತ್ತದೆ.
ಇದರ ಹೊರತಾಗಿ ರಕ್ತದೊತ್ತಡ, ಮಧು ಮೇಹ ಮಾಹಿತಿಯಷ್ಟೇ ಪಡೆಯಲು ಸೂಚಿಸಲಾಗಿದೆ ಎಂದು ತಾಲೂಕು ಆಶಾ ಮೇಲ್ವಿಚಾರಕಿ ಹರಿಣಿ ತಿಳಿಸಿದ್ದಾರೆ.

ತಾಲೂಕು/ಜಿಲ್ಲಾ ಮೇಲ್ವಿಚಾರಕರ ನೇಮಕ
ಸರ್ವೆ ಕಾರ್ಯದ ಮೇಲ್ವಿಚಾರಕರಾಗಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿ ಕಾರಿಗಳು, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು (ಉಪಕೇಂದ್ರಕ್ಕೆ ಒಬ್ಬರಂತೆ), ತಾಲೂಕು ಕಿರಿಯ ಆಶಾ ಮೇಲ್ವಿಚಾರಕಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಸರ್ವೆ ಕಾರ್ಯ ಪರಿಶೀಲನೆಗೆ ಜಿಲ್ಲೆಯಿಂದ ಜಿಲ್ಲಾ ಆಶಾ ಮೇಲ್ವಿಚಾರಕಿ ಮತ್ತು ಜಿಲ್ಲಾ ಶುಶ್ರೂಷಣ ಅಧಿಕಾರಿ ನೇಮಿಸಲಾಗಿದೆ.

4 ದಿನಗಳಲ್ಲಿ 4 ಸಾವಿರ ಮನೆ ಭೇಟಿ
ಜಿಲ್ಲಾಡಳಿತದ ಸೂಚನೆಯಂತೆ ತಾಲೂಕಿನಲ್ಲಿ ಕೊರೊನಾ ನಿರ್ಮೂಲನೆ ಮಾಡುವ ದೃಷ್ಟಿಯಿಂದ ಆರೋಗ್ಯ ಸಿಬಂದಿ ತಂಡ ಸರ್ವೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಮನೆಮಂದಿ ಹಾಗೂ ಆರೋಗ್ಯ ಸಿಬಂದಿ ಇಬ್ಬರ ಸುರಕ್ಷತೆ ಕಾಯ್ದುಕೊಂಡು ಸರ್ವೆ ನಡೆಸಲಾಗುತ್ತಿದೆ. ಈಗಾಗಲೇ 4 ದಿನಗಳಲ್ಲಿ 4 ಸಾವಿರ ಮನೆಗಳ ಭೇಟಿ ಕಾರ್ಯ ಪೂರ್ಣಗೊಂಡಿದೆ.
-ಡಾ| ಕಲಾಮಧು ಆರೋಗ್ಯಾಧಿಕಾರಿ, ಬೆಳ್ತಂಗಡಿ

Advertisement

 ಒಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ – 8
 ಸರ್ವೆ ನಡೆಯಬೇಕಿರುವ ಮನೆಗಳು – 40,321
 ಒಟ್ಟು ಸರ್ವೆಗೆ ಒಳಪಡುವ ಜನಸಂಖ್ಯೆ – 2,01,807
 ಸರ್ವೆಗೆ ನಿಯೋಜಿಸಿದ ಆಶಾ ಕಾರ್ಯಕರ್ತೆಯರು – 189
 ನಾಲ್ಕು ದಿನಗಳಲ್ಲಿ ಸರ್ವೆ ನಡೆಸಿದ ಮನೆಗಳು – 4,007
 ನಾಲ್ಕು ದಿನಗಳಲ್ಲಿ ಸರ್ವೆಗೆ ಒಳಗಾದವರು – 20,006
 ತಾಲೂಕಿಗೆ ಬಂದ ಆಮ್ಲಜನಕ ಪರಿಶೀಲನೆ ಸಾಧನ – 183

Advertisement

Udayavani is now on Telegram. Click here to join our channel and stay updated with the latest news.

Next