Advertisement

ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕು : ಡಾ.ಕೆ.ಸುಧಾಕರ್

02:09 PM May 11, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಉತ್ಪಾದನೆಯಾಗುವ ವೈದ್ಯಕೀಯ ಆಮ್ಲಜನಕವನ್ನು ಸಾಧ್ಯವಾದಷ್ಟು ರಾಜ್ಯಕ್ಕೇ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 6 ಕಂಟೇನರ್ ಗಳಲ್ಲಿ ಒಟ್ಟು 120 ಟನ್ ವೈದ್ಯಕೀಯ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ರೈಲಿನಲ್ಲಿ ಕಳುಹಿಸಿಕೊಟ್ಟಿದೆ. ಕೇಂದ್ರ ಸರ್ಕಾರ ಎಲ್ಲ ರೀತಿಯಲ್ಲಿ ರಾಜ್ಯಕ್ಕೆ ಸಹಕಾರ ನೀಡಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜಕನವನ್ನು ಇಲ್ಲಿಗೇ ನೀಡಿದರೆ ಸಾಗಣೆಯ ಸಮಸ್ಯೆ ಇರುವುದಿಲ್ಲ. ರೈಲಿನಲ್ಲಿ ಪೂರೈಕೆ ಮಾಡಿದರೆ ಮೂರ್ನಾಲ್ಕು ದಿನ ಬೇಕಾಗುತ್ತದೆ. ಈ ಸಮಸ್ಯೆ ಬಗ್ಗೆ ವಿವರಿಸಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೋರಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನವಾಗುವ ವಿಶ್ವಾಸವಿದೆ. 125 ರಿಂದ 150 ಟನ್ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗುವುದು ಎಂಬ ಭರವಸೆ ದೊರೆತಿದೆ ಎಂದರು.

ಪ್ರತಿ ಜಿಲ್ಲೆಯ ಸಕ್ರಿಯ ಪ್ರಕರಣ, ಆಮ್ಲಜನಕ ಬೇಡಿಕೆ ನೋಡಿಕೊಂಡು ಪೂರೈಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಗೆ 30 ವೆಂಟಿಲೇಟರ್ ನೀಡಲಾಗುತ್ತಿದೆ. 150 ವೆಂಟಿಲೇಟರ್ ದಕ್ಷಿಣ ಕನ್ನಡದಲ್ಲಿ ಇದೆ. ಹಾಸನ ಜಿಲ್ಲೆಗೆ 50 ವೆಂಟಿಲೇಟರ್ ಕಳುಹಿಸಿಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರ ಎಷ್ಟೇ ಕ್ರಮ, ಕಾನೂನು ತಂದರೂ ಜನರಿಗೆ ಜಾಗೃತಿ ಬೇಕು. ಏನೇ ಕ್ರಮ ಕೈಗೊಂಡರೂ ಸರ್ಕಾರ ಮಾಡುವುದು ತಪ್ಪು ಎಂಬ ವಾದ ಮಂಡಿಸಿದರೆ ಕಷ್ಟವಾಗುತ್ತದೆ. ಕೋವಿಡ್ ಸೋಂಕು ಕಡಿಮೆಯಾಗಲು 14 ದಿನ ಬೇಕು. ಈ ಸಮಯದಲ್ಲಿ ಜನರು ಸಹಕರಿಸಬೇಕು. ಸ್ವ ನಿಯಂತ್ರಣ ಹೇರಿಕೊಂಡು ಮನೆಯಲ್ಲೇ ಕ್ಷೇಮವಾಗಿದ್ದರೆ ಪ್ರಕರಣಗಳ ಸಂಖ್ಯೆ ಖಂಡಿತ ಕಡಿಮೆಯಾಗುತ್ತದೆ ಎಂದರು.

ಈ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಬೇಗ ಔಷಧಿ, ಚಿಕಿತ್ಸೆ ನೀಡಬೇಕಾಗುತ್ತದೆ. ಅನೇಕ ಔಷಧಿಗಳು ಬರುತ್ತಿದೆ. ಎಲ್ಲವೂ ಆದಷ್ಟು ಶೀಘ್ರ ಸರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next