Advertisement

ಆಸ್ಪತ್ರೆಗಳಲ್ಲಿ ಆಮ್ಲಜನಕದ ಅಭಾವ : ದರವೂ ಏಕಾಏಕಿ ಹೆಚ್ಚಳ

03:47 PM Jun 25, 2020 | sudhir |

ಕೊನಾಕ್ರೈ(ಗಿನಿ): ಆಫ್ರಿಕಾ, ದ.ಅಮೆರಿಕ ದೇಶದ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಬಾಧಿಸುತ್ತಿರುವಂತೆ, ವಿಶ್ವದ ಇತರ ಆಸ್ಪತ್ರೆಗಳೂ ಕಷ್ಟ ಕಾಲ ಎದುರಿಸುತ್ತಿವೆ.

Advertisement

ಈ ಮೊದಲು ಬಡ ರಾಷ್ಟ್ರಗಳ ಆಸ್ಪತ್ರೆಗಳಲ್ಲಿ ಪೂರೈಕೆ ಕೊರತೆಯಿಂದ ಇಂತಹ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಆದರೆ ಈಗ ಯುರೋಪ್‌, ಅಮೆರಿಕದಂತಹ ಮುಂದುವರಿದ ದೇಶಗಳಲ್ಲೇ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ.

ಆಮ್ಲಜನಕ ಆಸ್ಪತ್ರೆಗಳಲ್ಲಿ ಸಾಮಾನ್ಯ ಅಗತ್ಯವಾಗಿದ್ದು, ವಿದ್ಯುತ್‌, ನೀರಿನಂತೆ ಬೇಡಿಕೆ ಹೊಂದಿದೆ. ಇದನ್ನು ದ್ರವ ರೂಪದಲ್ಲಿ ಟ್ಯಾಂಕರ್‌ ಟ್ರಕ್‌ಗಳಲ್ಲಿ ಆಸ್ಪತ್ರೆಗಳಲ್ಲಿರುವ ಟ್ಯಾಂಕ್‌ಗಳಿಗೆ ಪೂರೈಸಲಾಗುತ್ತದೆ. ಅಲ್ಲಿಂದ ಪೈಪ್‌ಗ್ಳ ಮೂಲಕ ರೋಗಿಯ ವಾರ್ಡ್‌ಗೆ ಸಂಪರ್ಕ ಕಲ್ಪಿಸಿ ನೀಡಲಾಗುತ್ತದೆ. ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಅತಿ ಹೆಚ್ಚು ಬೇಕಾಗಿದ್ದು, ಈ ಕಾರಣದಿಂದ ಪೂರೈಕೆಯಾದಷ್ಟೂ ಸಾಕಾಗುತ್ತಿಲ್ಲ.

ಬಡ ದೇಶಗಳಾದ ಪೆರು ಮತ್ತು ಬಾಂಗ್ಲಾದೇಶಗಳಲ್ಲಿ ಈಗ ಆಮ್ಲಜನಕ ಸಿಗುತ್ತಲೇ ಇಲ್ಲ. ಪರಿಣಾಮ ಅದು ದುಬಾರಿ ವಸ್ತುವಾಗಿ ಪರಿಣಮಿಸಿದೆ. ಸಹರಾ ಆಸುಪಾಸಿನ ಆಫ್ರಿಕಾ ದೇಶಗಳಲ್ಲಿ ಆಮ್ಲಜನಕ್ಕೆ ಲಕ್ಷಾಂತರ ರೂ.ಗಳನ್ನು ಸರಕಾರಗಳು ವ್ಯಯಿಸುತ್ತಿವೆ.

ಹಲವಾರು ಆಸ್ಪತ್ರೆಗಳು ತಮ್ಮಲ್ಲೇ ಒಂದು ಆಮ್ಲಜನಕ ತಯಾರಿಕೆ ಕೇಂದ್ರ ಮಾಡಲು ಉದ್ದೇಶಿಸಿದ್ದರೂ ಹಣದ ಅಭಾವದಿಂದಾಗಿ ಅವುಗಳು ಆರಂಭವಾಗಿಲ್ಲ. ಇದರಿಂದ ವಿವಿಧ ತಯಾರಿಕೆ ಕೇಂದ್ರಗಳಿಂದ ಸಿಲಿಂಡರ್‌ಗಳ ಮೂಲಕ ಆಮ್ಲಜನಕವನ್ನು ತಯಾರಿಸಬೇಕಾಗಿದೆ. ಗಿನಿ ದೇಶದಲ್ಲಿ ಸೊಗೆಡಿ ಹೆಸರಿನ ಒಂದೇ ಒಂದು ಆಮ್ಲಜನಕ ತಯಾರಿಕೆ ಕೇಂದ್ರವಿದ್ದು ಅಲ್ಲೀಗ ಮಾಡುವ ಉತ್ಪಾದನೆ ಏನಕ್ಕೂ ಸಾಲುತ್ತಿಲ್ಲ. ಇತ್ತ ಬಾಂಗ್ಲಾದೇಶದಲ್ಲಿ ಏಕೀಕೃತ ವ್ಯವಸ್ಥೆ ಇಲ್ಲದ್ದರಿಂದ ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಮಸ್ಯೆ ಶುರುವಾಗಿದೆ. ಇದರಿಂದ ಜನರು ಸಿಲಿಂಡರ್‌ ಖರೀದಿಸಿ, ಕಾಳಸಂತೆಯಲ್ಲಿ ಆಮ್ಲಜನಕ ಖರೀದಿಸಿ ತಮ್ಮವರಿಗೆ ಆಮ್ಲಜನಕ ವ್ಯವಸ್ಥೆ ಮಾಡಬೇಕಾಗಿದೆ. ಪೆರು ದೇಶದಲ್ಲಿ ಕೊರತೆಯಿಂದಾಗಿ ಹೆಚ್ಚೆಚ್ಚು ಉತ್ಪಾದನೆ ಮಾಡುವಂತೆ ಅಲ್ಲಿನ ಅಧ್ಯಕ್ಷರು ಕಂಪೆನಿಗಳಿಗೆ ಹೇಳಿದ್ದಾರೆ.

Advertisement

ಅಲ್ಲದೇ ಹೊಸ ಟ್ಯಾಂಕ್‌ಗಳು ತಯಾರಿಕೆ ಕೇಂದ್ರಗಳಿಗೆ ಸರಕಾರವೇ 212 ಕೋಟಿ ರೂ.ಗಳ ನೆರವಿಗೆ ಮುಂದಾಗಿದೆ.
ಶ್ವಾಸಕೋಶದ ಸಮಸ್ಯೆ ಹೊಂದಿರುವ ರೋಗಿಗಳಿಗೂ ಆಮ್ಲಜನಕ ಬೇಕು. ನ್ಯುಮೋನಿಯಾದಂತಹ ಕಾಯಿಲೆಗೆ ಆಮ್ಲಜನಕ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್‌ ಕಾಲದಲ್ಲಿ ಇದರ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ. ಈವರೆಗೆ ಆಮ್ಲಜನಕವನ್ನು ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಆದರೆ ಈಗ ಸಹರಾ ಆಫ್ರಿಕಾ, ಲ್ಯಾಟಿನ್‌ ಅಮೆರಿಕ, ಏಷ್ಯಾದ ಪರಿಸ್ಥಿತಿಯಿಂದ ಆಮ್ಲಜನಕ ಅಗತ್ಯ ವಸ್ತುಗಳಲ್ಲಿ ಸೇರಬೇಕಾದ ಸ್ಥಿತಿ ಬಂದೊದಗಿದೆ. ಸಂಶೋಧನೆಯೊಂದರ ಪ್ರಕಾರ ಕಾಂಗೋದಲ್ಲಿ ಅಗತ್ಯದ ಶೇ.2ರಷ್ಟು ಮಾತ್ರ ಆಮ್ಲಜನಕ ಲಭ್ಯ. ತಾಂಜೇನಿಯಾದಲ್ಲಿ ಶೇ.8, ಬಾಂಗ್ಲಾದಲ್ಲಿ ಶೇ.7ರಷ್ಟು ಮಾತ್ರ ಲಭ್ಯವಿದೆ. ಕೋವಿಡ್‌ನಿಂದಾಗಿ ಕೊರತೆ ಇತರ ದೇಶಗಳಲ್ಲೂ ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next