Advertisement

ಆಕ್ಸಿಜನ್‌ ಎಮರ್ಜೆನ್ಸಿ ! ಸರಕಾರ ಊಹಿಸಿದ್ದಕ್ಕೂ ಭೀಕರವಾಗಿದೆ ಪರಿಸ್ಥಿತಿ!

10:48 PM Apr 24, 2021 | Team Udayavani |

ದೇಶದಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಕಾಣಿಸಿಕೊಂಡಿದೆ. ಬೇಡಿಕೆಗೆ ತಕ್ಕಷ್ಟು ಆಮ್ಲಜನಕ ಉತ್ಪಾದನೆಯಾಗದಿರುವುದು ಮತ್ತು ಲಭ್ಯವಿರುವ ಆಮ್ಲಜನಕದ ಸಾಗಾಟದ ಸಮಸ್ಯೆ ಬಿಗಡಾಯಿಸಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಆಮ್ಲಜನಕ ಪೂರೈಸಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ಆಮ್ಲಜನಕ ಉತ್ಪಾದನೆ, ಸಾಗಾಟಕ್ಕೆ ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆಯಾದರೂ ಏಕಾಏಕಿ ಬೇಡಿಕೆ ಹೆಚ್ಚಾದ್ದರಿಂದ ಇಷ್ಟೊಂದು ಭಾರೀ ಪ್ರಮಾಣದ ಆಮ್ಲಜನಕವನ್ನು ಪೂರೈಸುವುದು ಬಲುದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ಇದರ ಬೆನ್ನಲ್ಲೇ ಕೆಲವು ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕ ಕಳವಾಗುತ್ತಿರುವ ಕುರಿತು ವರದಿಗಳು ಬರುತ್ತಿವೆ. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡಲೆಂದು ಮೀಸಲಿರಿಸಲಾದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಲೂಟಿ ಮಾಡಲಾಗುತ್ತಿದೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

Advertisement

50,000 ಮೆ. ಟ. ಬ್ಯಾಕಪ್‌
ವೈದ್ಯಕೀಯ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ತುಂಬಲು ಭಾರತ ಪ್ರಸ್ತುತ ಬ್ಯಾಕಪ್‌ ಇರುವ 50,000 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಬಳಸಲಾರಂಭಿಸಿದೆ. ಆದರೆ ಪ್ರಸ್ತುತ ಬೇಡಿಕೆಯನ್ನು ನೋಡಿದರೆ ಇದು ಏನೇನೂ ಸಾಲದು. ಆಮ್ಲಜನಕದ ಎಲ್ಲ ಕೈಗಾರಿಕ ಬಳಕೆಯನ್ನು ನಿಲ್ಲಿಸಿ ವೈದ್ಯಕೀಯ ಉದ್ದೇಶಗಳಿಗೆ ಬಳಸಬೇಕೆಂದು ದಿಲ್ಲಿ ಹೈಕೋರ್ಟ್‌ ಬುಧವಾರ ಕೇಂದ್ರ ಸರಕಾರಕ್ಕೆ ಮೌಖೀಕವಾಗಿ ಸೂಚಿಸಿತ್ತು.

ಬೇಡಿಕೆ ಹೆಚ್ಚು
ದೇಶದ ಒಟ್ಟು ದೈನಂದಿನ ಆಮ್ಲಜನಕದ ಉತ್ಪಾದನೆಯಲ್ಲಿ ಹೆಚ್ಚಿನ ಭಾಗವನ್ನು ಕ್ರಯೋಜೆನಿಕ್‌ ಏರ್‌ ಸೆಪರೇಟರ್‌ ಘಟಕಗಳಲ್ಲಿ ಉತ್ಪಾದಿಸಲಾಗುತ್ತದೆ. ಅದು ಹೆಚ್ಚಿನ ಶುದ್ಧತೆಯ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಆದರೆ ಕ್ರಯೋಜೆನಿಕ್‌ ಏರ್‌ ಸೆಪರೇಟರ್‌ ಘಟಕಗಳಿಂದ ಉತ್ಪತ್ತಿಯಾಗುವ ಎಲ್ಲ ಆಮ್ಲಜನಕವು ವೈದ್ಯಕೀಯ ಬಳಕೆಗಾಗಿ ಅಲ್ಲ. ಇದರಿಂದ ಕೈಗಾರಿಕ ಬಳಕೆಗಾಗಿ ಹೆಚ್ಚಿನ ಭಾಗವನ್ನು ಮೀಸಲಿಡಲಾಗಿದೆ. ಎಪ್ರಿಲ್‌ 18 ರಂದು, ಕೇಂದ್ರ ಸರಕಾರವು ವೈದ್ಯಕೀಯೇತರ ಬಳಕೆಗಾಗಿ ಆಮ್ಲಜನಕವನ್ನು ಪೂರೈಸುವುದನ್ನು ನಿಷೇಧಿಸಿತು. ಆದರೆ ಒಂಬತ್ತು ಕೈಗಾರಿಕೆಗಳಿಗೆ ವಿನಾಯಿತಿ ನೀಡಲಾಗಿತ್ತು.

ನಮ್ಮ ಉತ್ಪಾದನೆ ಸಾಮರ್ಥ್ಯ ಎಷ್ಟು?
ಭಾರತ ಪ್ರತೀ ದಿನ ಸುಮಾರು 7,127 ಮೆಟ್ರಿಕ್‌ ಟನ್‌ಗಳಷ್ಟು ಆಕ್ಸಿಜನ್‌ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕಳೆದ ಎಪ್ರಿಲ್‌ 12ರಂದು ಸರಕಾರದ ಮಾಹಿತಿಯ ಅನುಸಾರ ಪ್ರತೀ ದಿನ ಕೇವಲ 3,842 ಮೆಟ್ರಿಕ್‌ ಟನ್‌ಗಳಷ್ಟು ಆಕ್ಸಿಜನ್‌ ಬಳಕೆಯಾಗಿತ್ತು. ಇದು ಒಟ್ಟು ಉತ್ಪಾದನೆಯ ಶೇ. 54ರಷ್ಟು.

ಬ್ಯಾಕಪ್‌ ಇದ್ದರೂ ಸಾಲದು
ಭಾರತ ಸಂಪೂರ್ಣ ದೈನಂದಿನ ಉತ್ಪಾದನೆಯಾದ 7,127 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ವೈದ್ಯಕೀಯ ಅನಿವಾರ್ಯಕ್ಕೆ ಬಳಸಿಕೊಂಡರೂ ದೇಶದ ಕೊರತೆಯ ಪ್ರಮಾಣ ಅಷ್ಟೇನೂ ಕಡಿಮೆಯಾಗದು. ವೈದ್ಯಕೀಯ ಆಮ್ಲಜನಕದ (8,000 ಮೆಟ್ರಿಕ್‌ ಟನ್‌) ಬೇಡಿಕೆಯ ಮಟ್ಟವು ಈಗಾಗಲೇ ಕೈಗಾರಿಕೆ ಮತ್ತು ವೈದ್ಯಕೀಯ ಆಮ್ಲಜನಕದ (7,127 ಮೆಟ್ರಿಕ್‌ ಟನ್‌) ದೈನಂದಿನ ಉತ್ಪಾದನೆಯನ್ನು ಮೀರಿಸಿದೆ ಎಂದು ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.

Advertisement

2,500 ಮೆಟ್ರಿಕ್‌ ಟನ್‌: ಈ ಒಂಬತ್ತು ಕೈಗಾರಿಕೆಗಳು ಸುಮಾರು 2,500 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಬಳಸುತ್ತವೆ. ಹೀಗಾಗಿ ವೈದ್ಯಕೀಯ ಬಳಕೆಗಾಗಿ ಕೇವಲ 4,600 ಮೆಟ್ರಿಕ್‌ ಟನ್‌ಗಳನ್ನು ಮಾತ್ರ ಉತ್ಪಾದಿಸಲಾಗುತ್ತದೆ‌ ಎಂದು ಸ್ಕ್ರೋಲ್ ವರದಿ ಮಾಡಿದೆ. ಎಪ್ರಿಲ್‌ 12ರಂದು ಭಾರತದ ವೈದ್ಯಕೀಯ ಆಮ್ಲಜನಕದ ಆವಶ್ಯಕತೆ 3,842 ಮೆಟ್ರಿಕ್‌ ಟನ್‌ ಎಂದು ಕೇಂದ್ರ ಸರಕಾರ ಹೇಳಿತ್ತು. ಆ ವೇಳೆ ದೇಶದಲ್ಲಿ ಸುಮಾರು 12,64,000ರಷ್ಟು ಕೊರೊನಾ ಪ್ರಕರಣಗಳಿದ್ದವು. ಆ ಸಂಖ್ಯೆಯು ಈಗ ಶೇ. 70ಕ್ಕಿಂತ ಹೆಚ್ಚಾಗಿದೆ. ಸಹಜವಾಗಿಯೇ ಈಗ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ 8,000 ಮೆಟ್ರಿಕ್‌ ಟನ್‌ಗಳಿಗೆ ಏರಿಕೆಯಾಗಿದೆ. ಅಂದರೆ ಒಟ್ಟು ಉತ್ಪಾದನೆಯಾಗುವ ಆಕ್ಸಿಜನ್‌ಗಿಂತ ಹೆಚ್ಚಾಗಿದ್ದು, ಕೈಗಾರಿಕ ಬಳಕೆಗೆ ಮೀಸಲಾಗಿರುವ ಮೊತ್ತಕ್ಕಿಂತ ಸುಮಾರು ಶೇ. 70ರಷ್ಟು ಹೆಚ್ಚಾಗಿದೆ.

ಶೇ. 60ರಷ್ಟು ಮಾತ್ರ ಬಳಕೆ!
ಕೇಂದ್ರ ಸರಕಾರ ವಾರಗಳ ಹಿಂದೆ ಹೇಳಿದಂತೆ ಒಟ್ಟು ಉತ್ಪಾದನೆಯ ಶೇ. 60ರಷ್ಟು ಆಕ್ಸಿಜನ್‌ ಅನ್ನು ಮಾತ್ರ ಬಳಸಲಾಗುತ್ತಿದೆ. ಉಳಿದ ಶೇ. 40ರಷ್ಟು ಬ್ಯಾಕಪ್‌ ಇದ್ದು, ಸ್ಟಾಕ್‌ನಲ್ಲಿ ಸುಮಾರು 50,000 ಮೆಟ್ರಿಕ್‌ ಟನ್‌ಗಳು ಹಾಗೆ ಇವೆ ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next