ಮಧ್ಯಪ್ರದೇಶ : ದೇಶದಾದ್ಯಂತ ಕೋವಿಡ್ ಸೋಂಕಿನ ಸಂಖ್ಯೆ ಶರ ವೇಗದಲ್ಲಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ನೀಡಲಾಗುವ ಆಕ್ಸಿಜನ್ ಸಿಲಿಂಡರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಮಧ್ಯ ಪ್ರದೇಶದ ಆಸ್ಪತ್ರೆಗೆ ತರಲಾಗಿದ್ದ ಆಕ್ಸಿಜನ್ ಸಿಲಿಂಡರ್ ಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಇಲ್ಲಿನ ದಾಮೋ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ತರಲಾಗಿದ್ದು, ದುಷ್ಕರ್ಮಿಗಳು ಅವುಗಳನ್ನ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಆಮ್ಲಜನಕ ಸಿಲಿಂಡರ್ ಗಳು ಇದ್ದ ವಾಹನವು ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿದ್ದಂತೆ ಟ್ರಕ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಸಿಲಿಂಡರ್ ಗಳನ್ನು ಹೊತ್ತೊಯ್ದಿದ್ದಾರೆ. ಈ ಕುರಿತಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ದಾಮೋ ಜಿಲ್ಲಾ ವರಿಷ್ಠಾಧಿಕಾರಿಗಳು, ಆಕ್ಸಿಜನ್ ಸಿಲಿಂಡರ್ ಗಳ ಲೂಟಿಯಾಗಿರುವುದು ನಿಜ, ಆದರೆ ಇದರಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ. ಆಸ್ಪತ್ರೆಯಲ್ಲಿ ಸಾಕಷ್ಟು ಆಕ್ಸಿಜನ್ ಸಿಲಿಂಡರ್ ಗಳು ಇದೆ. ಹೀಗಾಗಿ ರೋಗಿಗಳು ಆತಂಕ ಪಡುವ ಅವ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಆಕ್ಸಿಜನ್ ಸಿಲಿಂಡರ್ ಕದ್ದಿರುವ ಆರೋಪಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ದೋಮಾ ಜಿಲ್ಲಾಧಿಕಾರಿ, ಆಕ್ಸಿಜನ್ ಟ್ರಕ್ ಬಂದ ಕೂಡಲೇ ದುಷ್ಕರ್ಮಿಗಳು ಸಿಲಿಂಡರ್ ಗಳನ್ನು ಲೂಟಿ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಆರೋಪಿಗಳನ್ನು ಗುರುತಿಸಿದ್ದು, ಈ ಸಂಬಂಧ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.