ರಾಣಿಬೆನ್ನೂರ: ಕೊರೊನಾ 2ನೇ ಅಲೆ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ದಿನೇ ದಿನೆ ಹೆಚ್ಚಾಗಿ ಹರಡುತ್ತಿದೆ. ಸಾವಿನ ಸಂಖ್ಯೆಯೂ ಅಷ್ಟೇ ವೇಗವಾಗುತ್ತಿದೆ. ಸೋಂಕಿತರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆಗಾಗಲೇ ರೋಗ ಉಲ್ಬಣಗೊಂಡು ಮೃತಪಡುವಂತಾಗಿದೆ ಎಂದು ದೇವರಗುಡ್ಡ ಮಾಲತೇಶಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಬೇಸರ ವ್ಯಕ್ತಪಡಿಸಿದರು.
ಸೋಮವಾರ ತಾಲೂಕಿನ ದೇವರಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1.5 ಲಕ್ಷ ರೂ. ಮೌಲ್ಯದ ತಮ್ಮ ಸ್ವಂತ ವೆಚ್ಚದಲ್ಲಿ 10ಮತ್ತು7 ಲೀಟರ್‌ನ 2 ಆಕ್ಸಿಜನ್ ಸಿಲಿಂಡರ್‌ಗಳನ್ನು ಶಾಸಕ ಅರುಣಕುಮಾರ ಪೂಜಾರ ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಮತ್ತು ವೆಂಟಿರೇಟರ್ ಸೇರಿದಂತೆ ಅಗತ್ಯ ಔಷಧಗಳ ವ್ಯವಸ್ಥೆ ಕಲ್ಪಿಸಿದಲ್ಲಿ ಸಾವಿನ ಪ್ರಮಾಣ ಇಳಿಮುಖವಾಗಲಿದೆ ಎಂದರು.
ದೇವರಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿನ ಕೊರೊನಾ ಸೋಂಕಿತರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳುವಾಗ ಈ ಆಕ್ಸಿಜನ್ ಅಳವಡಿಸಿದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲಿದೆ. ಈ ಉದ್ದೇಶದಿಂದ ಆಕ್ಸಿಜನ್ ಸಿಲಿಂಡರ್ ಅನ್ನು ದಾನವಾಗಿ ನೀಡಲಾಗಿದ್ದು, ಇದು ನನ್ನ ಅಳಿಲು ಸೇವೆಯಾಗಿದೆ.
ಕೊರೊನಾ ವೈರಸ್ ಹರಡುವ ಕುರಿತು ಗ್ರಾಪಂ ಸಿಬ್ಬಂದಿ, ಆರೋಗ್ಯ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದಿನೇ ದಿನೆ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಇದರಿಂದ ರೋಗಿಗಳ ಆರೋಗ್ಯ ರಕ್ಷಣೆ ಮಾಡಲು ಸರ್ಕಾರದ ಜತೆ ಕೈಜೋಡಿಸಲು ಮುಂದಾಗಿ 10 ಮತ್ತು 7 ಲೀಟರ್‌ನ 2 ಆಕ್ಸಿಜನ್ ಸಿಲಿಂಡರ್ ನೀಡಿರುವ ದೇವರಗುಡ್ಡ ಮಾಲತೇಶಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಅವರ ಮಾನವೀಯ ಸೇವೆ ಶ್ಲಾಘನೀಯ ಎಂದರು.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ತಡೆಗಟ್ಟಲು ಸರ್ಕಾರ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಂಡು ಮೇ 24 ವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಿದೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸಹಕಾರ ನೀಡಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು. ಅತಿ ಅವಶ್ಯವಿದ್ದವರು ಮಾತ್ರ ಮಾಸ್ಕ್ ಧರಿಸಿಕೊಂಡು ಹೊರಗಡೆ ಬರಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಮಾಲತೇಶ ನಾಯರ, ಪಿಡಿಒ ಬಸವರಾಜ, ಡಾ| ದಾದಾಸಾಬ್, ರಾಜು ಮಾಲದಾಸ, ಪವನಕುಮಾರ ಮಲ್ಲಾಡದ, ಪವನ ದೇಸಾಯಿ, ಉದಯಕುಮಾರ ವರಗೇರಿ, ಹನುಮಂತಪ್ಪ, ಪಕ್ಕೀರಪ್ಪ ಐಗಳ, ಹನುಮಂತಪ್ಪ ನಾಯರ, ದೇವಪ್ಪ ವಾಸರದ, ನಾಗರಾಜ ಸಂಶಿ ಇತರರು ಹಾಜರಿದ್ದರು.