ಮಹಾನಗರ: ಕಾಯಕಲ್ಪಗೊಂಡು ಹೊಸ ಸ್ವರೂಪ ಪಡೆಯುತ್ತಿರುವ ಗುಜ್ಜರಕೆರೆಯನ್ನು ಮುಂದೆ ಸಂರಕ್ಷಿಸಿ ಕೊಂಡು ಮಲಿನಮುಕ್ತಗೊಳಿಸುವ ನಿಟ್ಟಿನಲ್ಲಿ “ಆಕ್ಸಿಡೇಶನ್ ಪಾಂಡ್’ ವ್ಯವಸ್ಥೆ ಅಳವ ಡಿಸಲು ನಿರ್ಧರಿಸಲಾಗಿದೆ. ಆ ಮೂಲಕ, ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕೆರೆಯೊಂದರ ನೀರಿನ ಮಾಲಿನ್ಯ ತಡೆಗೆ ಈ ರೀತಿಯ ವಿಧಾನ ಅಳವಡಿಸಲಾಗುತ್ತಿದೆ.
ಕೆಲ ತಿಂಗಳ ಹಿಂದೆ ಸ್ಮಾರ್ಟ್‌ಸಿಟಿ ಯೋಜನೆಯ ಮುಖೇನ ಗುಜ್ಜರಕೆರೆಯ ಕಾಯಕಲ್ಪ ಆರಂಭವಾಗಿದೆ. ಆದರೆ ಎರಡು ತಿಂಗಳಿನಿಂದ ಸ್ಮಾರ್ಟ್‌ಸಿಟಿ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡು ಇದರಿಂದಾಗಿ ಸಮಸ್ಯೆ ಉಂಟಾಗಿದೆ. ಇನ್ನೇನು ಕೆಲವು ತಿಂಗಳುಗಳಲ್ಲಿಯೆ ಮಳೆಗಾಲ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕೆರೆಯ ಪ್ರಮುಖ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಹಿಡಿದಿಡಲು ಪೂರಕ ಕ್ರಮವಾಗಿ ಈಗಿರುವ ನೀರನ್ನು ಶುದ್ಧೀಕರಿಸುವ ಅಗತ್ಯವಿದೆ.
ಗುಜ್ಜರಕೆರೆಯಲ್ಲಿ ಸದ್ಯ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದು, ಶುದ್ದ ನೀರು ಸಂಗ್ರಹಕ್ಕೆಂದು ಈಗಿರುವ ನೀರು ಆವಿ ಮಾಡುವುದು ಕಷ್ಟ. ಇದೇ ಕಾರಣಕ್ಕೆ ಗುಜ್ಜರಕೆರೆ ನೀರು ಶುದ್ಧೀಕರಿಸಲು ಆಕ್ಸಿಡೇಶನ್ ಪಾಂಡ್ ವ್ಯವಸ್ಥೆ ಅಳವಡಿಕೆಗೆ ನಿರ್ಧರಿಸಲಾಗಿದೆ. ಕೆರೆಯ ನೀರನ್ನು ಈ ಘಟಕದ ಮುಖೇನ ಶುದ್ಧೀಕರಿಸಿ ಮತ್ತೆ ಕೆರೆಗೆ ಬಿಡುವ ಯೋಜನೆ ಇದಾಗಿದೆ. ಈಗಿರುವ ನೀರಿನ ಜತೆಗೆ ಭವಿಷ್ಯದಲ್ಲಿ ಮಳೆಗಾಲದ ನೀರು ಕೂಡ ಸಂಗ್ರಹ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು.
ಸ್ಮಾರ್ಟ್ ಸಿಟಿ ಯೋಜನೆಯ ಸುಮಾರು 4 ಕೋ.ರೂ. ವೆಚ್ಚದಲ್ಲಿ ಗುಜ್ಜರಕೆರೆ ಸಂಪೂರ್ಣ ಅಭಿವೃದ್ಧಿ ನಡೆಯುತ್ತಿದೆ. ಈ ಪೈಕಿ 15 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಈಗಾ ಗಲೇ ನಡೆದಿದೆ. ಮುಂದಿನ ದಿನಗಳಲ್ಲಿ ಗುಜ್ಜರಕೆರೆಯ ಮಧ್ಯೆ ಪುಷ್ಕರಣಿ ನಿರ್ಮಿಸ ಲಾಗುತ್ತದೆ. ಕೆರೆಯ ಸುತ್ತಲೂ ಆವರಣ ಗೋಡೆ, ಸ್ಟೀಲ್ ರೇಲಿಂಗ್, ಫುಟ್‌ಪಾತ್, ಜಾಗಿಂಗ್ ಟ್ರ್ಯಾಕ್, ಸೈಕ್ಲಿಂಗ್ ಟ್ರ್ಯಾಕ್, ರಸ್ತೆ, ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ, ಟೇಬಲ್, ಕುಳಿತುಕೊಳ್ಳುವ ಆಸನ, ವಿದ್ಯುತ್ ದೀಪ, ಶೌಚಾಲಯ ಬ್ಲಾಕ್ ಸಹಿತ ಮೂಲಸೌಕರ್ಯ ವ್ಯವಸ್ಥೆ ಆಗಬೇಕಿದೆ.
ಗುಜ್ಜರಕೆರೆ ತೀರ್ಥ ಸಂರಕ್ಷಣ ವೇದಿಕೆ ಪ್ರ.ಕಾರ್ಯದರ್ಶಿ ನೇಮು ಕೊಟ್ಟಾರಿ ಅವರು ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಭವಿಷ್ಯದಲ್ಲಿ ನಗರಕ್ಕೆ ನೀರಿನ ಸಮಸ್ಯೆ ಎದುರಾಗದಂತೆ ಗುಜ್ಜರಕೆರೆಯ ಸಂರಕ್ಷಣೆ ಅತೀ ಅಗತ್ಯ. ಈ ನಿಟ್ಟಿನಲ್ಲಿ ಕೆರೆಯ ನೀರಿನ ಶುದ್ಧತೆ ಕಾಪಾಡಿಕೊಳ್ಳಬೇಕಿದೆ. ಕೆರೆಗೆ ಯಾವುದೇ ರೀತಿಯ ಕೊಳಚೆ ನೀರು ಬಿಡದಂತೆ ಸ್ಥಳೀಯಾಡಳಿತ ಕ್ರಮಕೈಗೊ ಳ್ಳಬೇಕು. ಇನ್ನೇನು ಕೆಲವು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮಳೆ ನೀರು ಕೆರೆ ಸೇರ ದಂತೆ ನೋಡಿಕೊಳ್ಳಬೇಕು. ಗುಜ್ಜರಕೆರೆ ಅಭಿವೃದ್ಧಿಗೆ ಈ ವರೆಗೆ ಸುಮಾರು 6 ಕೋ.ರೂ. ವ್ಯಯಿಸಲಾಗಿದೆ. ಸ್ಥಳೀಯ ಶಾಸಕರ ಮುತುವರ್ಜಿಯಿಂದ ಕಾಮಗಾರಿ ಆರಂಭವಾಗಿದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಮ್ಮ ವೇದಿಕೆ 18 ವರ್ಷಗಳಿಂದ ಕೆರೆ ಸಂರಕ್ಷಣೆಗೆ ಹೋರಾಟ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.
ಏನಿದು ಆಕ್ಸಿಡೇಶನ್ ಪಾಂಡ್?
“ನೀರು ಕಲುಷಿತಗೊಂಡಿದ್ದರೆ ಆ ನೀರನ್ನು ಬಳಕೆ ಮಾಡಲು ಶುದ್ದೀಕರಿಸುವುದು ಅಗತ್ಯ. ಆದರೆ ಬಳಕೆ ಮಾಡದ ಕೆರೆಯ ನೀರು ಅಂದ ಮೇಲೆ ಅಲ್ಲಿ ಪಾಚಿ, ಕೊಳಚೆ ತುಂಬಿಕೊಂಡಿರುವುದು ಸಾಮಾನ್ಯ. ಹೀಗಿದ್ದಾಗ ಆ ನೀರಿನಲ್ಲಿ ಆಮ್ಲಜನಕದ ಅಂಶ ಕಡಿಮೆ ಇರುತ್ತದೆ. ಈ ವೇಳೆ ನೀರನ್ನು ಶುದ್ಧೀಕರಿಸುವ ವಿಧಾನಕ್ಕೆ ಆಕ್ಸಿಡೇಶನ್ ಪಾಂಡ್ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಕೆರೆಯಲ್ಲೇ ನಡೆಸಲಾಗುತ್ತದೆ. ನೀರನ್ನು ಕಾರಂಜಿ ರೀತಿ ಚಿಮ್ಮಿಸಿ ವಾತಾವರಣದಲ್ಲಿರುವ ಆಮ್ಲಜನಕ ಹೀರಿ ಮತ್ತೆ ನೀರನ್ನು ಕೆರೆಗೆ ಬಿಡಲಾಗುತ್ತದೆ” ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು.
ಕೆರೆ ಸಂರಕ್ಷಣೆಗೆ ಕ್ರಮ
ಗುಜ್ಜರಕೆರೆಯನ್ನು ಸಂರಕ್ಷಿಸಲು ಮನಪಾ ಆದ್ಯತೆ ನೀಡುತ್ತದೆ. ಅದರಂತೆ ಸ್ಮಾರ್ಟ್ ಸಿಟಿಯಿಂದ ಈಗಾಗಲೇ ಕೆರೆ ಪುನರುಜ್ಜೀವನಗೊಳಿಸುವ ಕೆಲಸ ನಡೆಯುತ್ತಿದೆ. ಆಕ್ಸಿಡೇಶನ್ ಪಾಂಡ್ ಮುಖೇನ ಕೆರೆಯ ನೀರಿನ ಶುದ್ಧತೆ ಕಾಯ್ದುಕೊಳ್ಳಲಾಗುವುದು. ಈ ಮೂಲಕ ಕೆರೆಯ ನೀರು ಶುದ್ಧೀಕರಿಸಿದ ಬಳಿಕ ಮತ್ತೆ ಕೆರೆಗೆ ಬಿಡಲಾಗುತ್ತದೆ. ಅದೇ ರೀತಿ, ಮಳೆ ನೀರು, ಕೊಳಚೆ ನೀರು ಕೆರೆ ಸೇರ ದಂತೆ ಕ್ರಮ ಕೈಗೊಳ್ಳುತ್ತೇವೆ.
– ಪ್ರೇಮಾನಂದ ಶೆಟ್ಟಿ,, ಮನಪಾ ಮೇಯರ್