Advertisement

ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಆಕ್ಸಿಜನ್‌

06:25 PM Oct 07, 2021 | Team Udayavani |

ಹಾಸನ: ಜಿಲ್ಲಾ ಕೇಂದ್ರದ ಹಾಸನ ವೈದ್ಯಕೀಯ ಕಾಲೇಜು ( ಹಿಮ್ಸ್‌) ಆಸ್ಪತ್ರೆ ಸೇರಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳೂ ಈಗ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಿವೆ. ಈಗಾಗಲೇ ಅರಸೀಕೆರೆಯಲ್ಲಿ ಆಮ್ಲಜನಕ ಘಟಕ ಉದ್ಘಾಟನೆಯಾಗಿದ್ದು, ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ, ಬೇಲೂರು, ಅರಕಲಗೂಡು ತಾಲೂಕು ಆಸ್ಪತ್ರೆಗಳ ಆಮ್ಲಜನಕ ಘಟಕಗಳು ಅ.7ರ ಗುರುವಾರದಂದು ಉದ್ಘಾಟನೆಯಾಗಲಿವೆ.

Advertisement

ಕೊರೊನಾ 2ನೇ ಅಲೆಯಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ ತುರ್ತು ಚಿಕಿತ್ಸೆ ಅನಿವಾರ್ಯವಾಗಿತ್ತು. ಹಾಸನದ ಹಿಮ್ಸ್‌ ಆಸ್ಪತ್ರೆ ಹೊರತುಪಡಿಸಿ ಇನ್ನುಳಿದ ಯಾವ ತಾಲೂಕು ಆಸ್ಪತ್ರೆಗಳಲ್ಲೂ ಆಮ್ಲಜನಕ ಉತ್ಪಾದನಾ ಘಟಕಗಳಿಲ್ಲದೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯ ಸಿಬ್ಬಂದಿ ಪರದಾಡಿದ್ದರು.

ಈ ಹಿನ್ನೆಲೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿವುದು ಹಾಗೂ ಅಗತ್ಯದಷ್ಟು ಐಸಿಯು ಹಾಸಿಗೆಗಳ ವ್ಯವಸ್ಥೆ ಮಾಡುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅಧ್ಯಕ್ಷತೆಯಲ್ಲಿ 4 ತಿಂಗಳ ಹಿಂದೆ ನಡೆದ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಈಗ ಹಾಸನದ ಹಿಮ್ಸ್‌ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಬಳಕೆಗೆ ಸಜ್ಜಾಗಿವೆ.

ಹಿಮ್ಸ್‌ ಆಸ್ಪತ್ರೆಯಲ್ಲಿ ಈ ಮೊದಲು 1,300 ಲೀಟರ್‌ ಆಮ್ಲಜನಕ ಸಂಗ್ರಹ ಸಾಮರ್ಥ್ಯದ ಘಟಕವಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದಿಂದ ಟ್ಯಾಂಕರ್‌ನಲ್ಲಿ ಲಿಕ್ವಿಡ್‌ ಆಮ್ಲಜನಕರನ್ನು ಹಿಮ್ಸ್‌ ಆಸ್ಪತ್ರೆಯ ಸಂಗ್ರಹ ಘಟಕಕ್ಕೆ ತಂದು ತುಂಬಿಸಲಾಗುತ್ತಿತ್ತು. ಆದರೆ, ಈಗ ಒಟ್ಟು 750 ಹಾಸಿಗೆಗಳ ಸಾಮರ್ಥ್ಯದ ಹಿಮ್ಸ್‌ ಆಸ್ಪತ್ರೆ ಆವರಣದಲ್ಲಿ ನಿಮಿಷಕ್ಕೆ 1,000 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣವಾಗಿದೆ. ಈ ಆಸ್ಪತ್ರೆಯ 400 ಹಾಸಿಗೆಗೆ ಆಮ್ಲಜನಕ ಪೂರೈಕೆಯ ವ್ಯವಸ್ಥೆಯೂ ಆಗಿದೆ. ಜೊತೆಗೆ ಈ ಆಸ್ಪತ್ರೆಯಲ್ಲಿ 45 ವೆಂಟಿಲೇಟರ್ ಸೌಲಭ್ಯವೂ ಇದೆ.

ಇದನ್ನೂ ಓದಿ;- ಧೂಳೆಬ್ಬಿಸಿದ “ಕೋಟಿಗೊಬ್ಬ 3” ಟ್ರೈಲರ್  

Advertisement

ಯಂತ್ರದ ಅಳವಡಿಕೆ ಪ್ರಕ್ರಿಯೆ: ಹೊಳೆನರಸೀಪುರದಲ್ಲಿ 280 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 500 ಲೀಟರ್‌ ಆಮ್ಲಜನಕ ಉತ್ಪಾದನೆಯ 2 ಘಟಕಗಳು ಅಂದರೆ ಒಟ್ಟು 1,000 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕಗಳು ನಿರ್ಮಾಣವಾಗಿವೆ. ಈ ಆಸ್ಪತ್ರೆಗೆ 2 ಕೋಟಿ ರೂ. ಅಂದಾಜಿನ ಸಿಟಿ ಸ್ಕ್ಯಾನ್‌ ಯಂತ್ರ ಅಳವಡಿಕೆಗೂ ಮಂಜೂರಾತಿ ಸಿಕ್ಕಿದ್ದು ಯಂತ್ರದ ಅಳವಡಿಕೆ ಪ್ರಕ್ರಿಯೆ ನಡೆದಿದೆ.

ಅರಸೀಕೆರೆ ತಾಲೂಕು ಆಸ್ಪತ್ರೆ 100 ಹಾಸಿಗೆಗಳ ಸೌಲಭ್ಯವನ್ನು ಹೊಂದಿದ್ದು, ಈ ಆಸ್ಪತ್ರೆಯ ಆವರಣದಲ್ಲಿ 500 ಲೀಟರ್‌ ಮತ್ತು 135 ಲೀಟರ್‌ನ ಎರಡು ಆಮ್ಲಜನಕ ಘಟಕಗಳು ನಿರ್ಮಾಣವಾಗಿ ಈಗಾಗಲೇ ಕಾರ್ಯಾರಂಭ ಮಾಡಿವೆ. ಈ ಆಸ್ಪತ್ರೆಗೆ ಸಿಟಿಸ್ಕ್ಯಾನ್‌ ಬೇಡಿಕೆಯೂ ಇದೆ. ಅರಕಲಗೂಡು

ತಾಲೂಕಿನ 100 ಹಾಸಿಗೆಗಳ ಆಸ್ಪತ್ರೆ ಆವರಣದಲ್ಲಿ 500 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣವಾಗಿದ್ದು, ಬಳಕೆಗೆ ಸಜ್ಜಾಗಿದೆ. ಕೊಣನೂರು ಸಮುದಾಯ ಆಸ್ಪತ್ರೆಯಲ್ಲಿಯೂ ಆಮ್ಲಜನಕ ಪೂರೈಕೆಯ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.

ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ಯಂತ್ರದ ಬೇಡಿಕೆ: ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಅಲ್ಲಿಯೂ 390 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಪೂರ್ಣಗೊಂಡಿದ್ದು ಬಳಕೆ ಲಭ್ಯವಿದೆ. ಈ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳದ ಬೇಡಿಕೆಯೂ ಇದೆ. ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ 100 ಹಾಸಿಗೆ ಸೌಲಭ್ಯವಿದ್ದು, 390 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕಗಳ ಪೈಕಿ ಒಂದು ಯಂತ್ರದ ಅಳವಡಿಕೆಯಾಗಿದೆ.

ಇನ್ನೊಂದು ಯಂತ್ರದ ಅಳವಡಿಕೆಯಾಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯು ಸಕಲೇಶಪುರದಲ್ಲಿ ಹಾದು ಹೋಗಿರುವುದರಿಂದ ಅಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಹಾಗಾಗಿ, ಸಕಲೇಶಪುರ ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ಯಂತ್ರದ ಬೇಡಿಕೆ ಬಹಳ ದಿನಗಳಿಂದಲೂ ಇದೆ. ಬೇಲೂರು ತಾಲೂಕು ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಈಗ ಅಲ್ಲಿ 300 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕ ಆರಂಭವಾಗಿದೆ.

ಇನ್ನು ಆಲೂರು ತಾಲೂಕು ಆಸ್ಪತ್ರೆಯಲ್ಲಿ 380 ಲೀಟರ್‌ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣದ ಸಿವಿಲ್‌ ಕಾಮಗಾರಿ ನಡೆಯುತ್ತಿವೆ. ಇನ್ನೆರಡು ತಿಂಗಳಲ್ಲಿ ಆಮ್ಲಜನಕ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. 18 ಜಂಬೋ ಸಿಲಿಂಡರ್‌ ಅಗತ್ಯ: ತಲಾ 30 ಹಾಸಿಗೆಗಳ ಸಾಮರ್ಥ್ಯದ 15 ಸಮುದಾಯ ಆರೋಗ್ಯ ಕೇಂದ್ರಗಳು ಜಿಲ್ಲೆಯಲ್ಲಿದ್ದು, ಈ ಎಲ್ಲ ಆಸ್ಪತ್ರೆಗಳಲ್ಲೂ ಆಮ್ಲಜನಕ ಪೂರೈಕೆಯ ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ.

ಈ ಆರೋಗ್ಯ ಕೇಂದ್ರಗಳಿಗೆ ಜಂಬೋ ಸಿಲಿಂಡರ್‌ಗಳ ಮೂಲಕ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 18 ಜಂಬೋ ಸಿಲಿಂಡರ್‌ಗಳ ಅಗತ್ಯವಿದೆ. ಅದರ ವ್ಯವಸ್ಥೆಯನ್ನೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡಿದೆ. ಒಟ್ಟು  2,030 ಹಾಸಿಗೆ ಸೌಲಭ್ಯ ಜಿಲ್ಲೆಯ ಕೇಂದ್ರ ಸ್ಥಾನದ ಹಿಮ್ಸ್‌ ಆಸ್ಪತ್ರೆ, 7 ತಾಲೂಕು ತಾಲೂಕು ಆಸ್ಪತ್ರೆ, 15 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 2,030 ಹಾಸಿಗೆಗಳ ಸೌಲಭ್ಯವಿದ್ದು, ಆ ಪೈಕಿ 110 ಐಸಿಯು ಹಾಸಿಗೆ, 55 ವೆಂಟಿಲೇಟರ್‌ ಹಾಸಿಗೆಗಳ ಸೌಲಭ್ಯವಿದೆ.

ಈ ಆಸ್ಪತ್ರೆಗಳ ಜೊತೆಗೆ 138 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜಿಲ್ಲೆಯಲ್ಲಿ ಆರೋಗ್ಯ ಸೇವೆ ಒದಗಿಸುತ್ತಿವೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಆರೋಗ್ಯ ಕೇಂದ್ರಗಳು ಹಾಸನ ಜಿಲ್ಲೆಯಲ್ಲಿವೆ ಎಂದು ಹೇಳಲಾಗುತ್ತಿದೆ. ತಾಲೂಕು ಆಸ್ಪತ್ರೆ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿದ್ದ ವೈದ್ಯರ ಹುದ್ದೆಗಳ ಭರ್ತಿ ಇತ್ತೀಚೆಗೆ ನಡೆದಿದೆ. ಆದರೆ, ಕೆಲವು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಈಗಲೂ ಇದೆ.

ಜಿಲ್ಲೆಯ ಆಸ್ಪತ್ರೆಗಳು ಈಗ ಸುಸಜ್ಜಿತ: ಡಿಎಚ್‌ಒ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗ ಆಮ್ಲಜನಕದ ಕೊರತೆಯನ್ನು ನಿವಾರಿಸಲಾಗಿದೆ. ಆಲೂರು ತಾಲೂಕು ಆಸ್ಪತ್ರೆ ಹೊರತುಪಡಿಸಿ ಉಳಿದ ಎಲ್ಲ ತಾಲೂಕು ಆಸ್ಪತ್ರೆ ಗಳಲ್ಲೂ ಆಮ್ಲಜನಕ ಉತ್ಪಾದನಾ ಘಟಕಗಳು ಬಳಕೆಗೆ ಸಜ್ಜಾಗಿವೆ.

ಅಗತ್ಯ ವೈದ್ಯ ಸಿಬ್ಬಂದಿಯೂ ಇದ್ದಾರೆ. ಕೆಲವು ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ವೈದ್ಯರ ಕೊರತೆ ಇದೆ.

ಹಂತ, ಹಂತವಾಗಿ ಹುದ್ದೆಗಳು ಭರ್ತಿಯಾಗಲಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ

ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next