ಕೃಷಿ ಕೆಲಸಗಳಿಗೆ ತಾಲೂಕಿನ ಯಾವುದೇ ಗ್ರಾಮದಲ್ಲಿ ನೋಡಿದರೂ ಈಗ ಟ್ರ್ಯಾಕ್ಟರ್ ಸೇರಿದಂತೆ ಇತರೆ ಯಂತ್ರಗಳನ್ನೇ ಕೃಷಿ ಕೆಲಸಕ್ಕೆ ಬಳಕೆ ಮಾಡುವುದು ಕಾಣುತ್ತಿದೆ. ಇಷ್ಟು ದಿನ ಕಳೆ ತೆಗೆಯಲು, ಬೆಳೆ ಕಟಾವು, ಔಷಧಿ ಸಿಂಪರಣೆ ಮಾಡಲು ಯಂತ್ರಗಳನ್ನು ಬಳಕೆ ಮಾಡಲಾಗುತಿತ್ತು. ಆದರೆ, ಈಗ ತಾಲೂಕಿನ ಬೀಡಿಕೆರೆ ರೈತ ಮಂಜುನಾಥ್ ಅವರು ತಮ್ಮ ರಾಗಿ ಹೊಲದಲ್ಲಿ ಒತ್ತಾಗಿ ಬೆಳೆದ ಕಳೆ ತೆಗೆಯಲು ಹೊಡೆಯಲಾಗುವ ಗುಂಟೆಯನ್ನು ತಮ್ಮ ಟಿವಿಎಸ್ ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ಕಳೆ ತೆಗೆಯುತ್ತಿದ್ದರು. ಈ ಬಗ್ಗೆ ಮಾಹಿತಿ ನೀಡಿದ ರೈತ ಮಂಜುನಾಥ್, ಒಂದು ಎಕರೆ ಹೊಲದಲ್ಲಿ ಗುಂಟೆ ಹೊಡೆಯಲು ಎತ್ತುಗಳಿಗೆ 700 ರಿಂದ 800 ರೂ.ಗಳನ್ನು ನೀಡಬೇಕು. ಇಷ್ಟು ಹಣ ನೀಡಿ, ಅಡ್ವಾನ್ಸ್ ನೀಡಿದರೂ ಎತ್ತುಗಳು ಸೂಕ್ತ ಸಮಯಕ್ಕೆ ದೊರೆಯುತ್ತಿಲ್ಲ. ಇಡೀ ಗ್ರಾಮದಲ್ಲಿ ಒಂದು ಜೊತೆ ಎತ್ತುಗಳು ಇವೆ. ಉಳಿದ ಯಾರೊಬ್ಬ ರೈತರು ಎತ್ತುಗಳನ್ನು ಸಾಕಿಕೊಂಡಿಲ್ಲ. ಹೊರಗಿನಿಂದ ಕರೆಸಬೇಕೆಂದರೆ ಹೆಚ್ಚಿನ ಹಣ ವ್ಯಯವಾಗುತ್ತದೆ. ಹೀಗಾಗಿ ಟಿವಿಎಸ್ ಬೈಕ್‌ಗೆ ಗುಂಟೆ ಕಟ್ಟಿಕೊಂಡು ಹೆಚ್ಚುವರಿಯಗಿ ಬೆಳೆದಿರುವ ರಾಗಿ ಪೈರನ್ನು ಕಿತ್ತುಹಾಕಲಾಗುತ್ತಿದೆ. ಇದಕ್ಕೆ 250ರೂ. ಖರ್ಚಾಗುತ್ತದೆ ಎಂದು ತಿಳಿಸಿದರು.
Advertisement