Advertisement

ಒಡೆಯನಿಲ್ಲದೆ “ದೇವಗೀತ’ದಲ್ಲಿ ನೀರವ ಮೌನ

12:38 PM Jan 04, 2017 | |

ಮೈಸೂರು: ಅದು ಸಾಂಸ್ಕೃತಿಕ ನಗರಿ ಮೈಸೂರು ನಗರದ ಪ್ರತಿಷ್ಠಿತ ಬಡಾವಣೆ ಕುವೆಂಪು ನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿನ ನಿವಾಸ ‘ದೇವಗೀತ’. ಆ ಮನೆಯ ಒಡೆಯ ಮನೆಯಲ್ಲಿದ್ದರೆ ಬೆಳಗ್ಗೆ 6 ಗಂಟೆಗೇ ಅಕ್ಕಪಕ್ಕದ ಮನೆಯವರ ಜತೆಗೆ ಒಂದು ಸುತ್ತು ವಾಯುವಿಹಾರ ನಡೆಸಿ, ಉಭಯ ಕುಶಲೋಪರಿ ವಿಚಾರಿಸಿ, ಮನೆಗೆ ಹಿಂತಿರುಗಿದ ಬಳಿಕ ಎಂದಿನಂತೆ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು.

Advertisement

ಆದರೆ, ಮಂಗಳವಾರ ಬೆಳಗ್ಗೆ ಆ ಮನೆಯ ಒಡೆಯ ಇಲ್ಲದ್ದರಿಂದ ನೆರೆಹೊರೆಯವರು ಎಂದಿನಂತೆ ವಾಯುವಿಹಾರ ಮುಗಿಸಿ ತಂತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇತ್ತ ‘ದೇವಗೀತ’ದ ನಿವಾಸಿಗಳೂ ಸಹ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಆದರೆ, ಬೆಳಗ್ಗೆ 9.40ರ ಸುಮಾರಿಗೆ ಬರ ಸಿಡಿಲಿನಂತೆ ಅಪ್ಪಳಿಸಿದ ದೂರವಾಣಿ ಕರೆಯೊಂದು ಆ ಮನೆಯಲ್ಲಿ ನೀರವ ಮೌನ ಆವರಿಸುವಂತೆ ಮಾಡಿತ್ತು.

ಇದಕ್ಕಿದ್ದಂತೆ ಮನೆಯ ಟಿ.ವಿ. ಸ್ತಬ್ಧವಾಯಿತು. ಆದರೂ ಆ ಮನೆಯ ಒಡತಿಗೆ ಈ ಯಾವ ವಿಷಯವನ್ನೂ ಆ ಕ್ಷಣಕ್ಕೆ ತಿಳಿಸಿರಲಿಲ್ಲ. 10 ಗಂಟೆ ನಂತರ ಮಾಧ್ಯಮದವರು ಒಬ್ಬೊಬ್ಬರಾಗಿ ಆ ಮನೆಯತ್ತ ಬರತೊಡಗಿದಾಗ ಅಚ್ಚರಿಗೊಂಡ ಮನೆಯೊಡತಿ ಗೀತಾ ಮಹದೇವಪ್ರಸಾದ್‌, ಅವರಿಲ್ಲ. ಚಿಕ್ಕಮಗಳೂರಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಎಂದು ಮುಗªವಾಗಿ ಉತ್ತರಿಸಿದ್ದವರಿಗೆ, ವಾಸ್ತವ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಕಡೆಗೂ ಪತಿಯ ಸಾವಿನ ಸುದ್ದಿ ತಿಳಿದ ಗೀತಾ ಅವರ ರೋದ‌ನ ಮುಗಿಲುಮುಟ್ಟಿತ್ತು.

ಅಷ್ಟಕ್ಕೂ ಸೋಮವಾರ ಬೆಳಗ್ಗೆ ಚಾಮರಾಜ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ನಂತರ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ 17ನೇ ರಾಷ್ಟ್ರೀಯ ಜಾಂಬೂರಿಯ ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದ ಅವರು, ಅಲ್ಲಿಂದ ಮನೆಗೆ ಬಂದವರೆ ಊಟ ಮುಗಿಸಿ, ಜಾಂಬೂರಿಯಲ್ಲಿ ತಮಗೆ ಹಾಕಿದ್ದ ಸ್ಕೌಟ್ಸ್‌ನ ಸ್ಕಾಫ್ì ಅನ್ನು ಮೊಮ್ಮಗುವಿಗೆ ಹಾಕಿ, ಎತ್ತಿ ಮುದ್ದಾಡಿ, ಬೇಗ ಬರುತ್ತೇನೆ ಕಂದಾ ಎಂದು ಹೊರಟಿದ್ದವರು,

ಬೆಳಗಾಗುವಷ್ಟರಲ್ಲಿ ಬಾರದ ಲೋಕಕ್ಕೆ ಹೊರಟಿದ್ದರು. ವಿವಿಧ ಪಕ್ಷಗಳ ಶಾಸಕರು, ರಾಜಕೀಯ ನಾಯಕರು, ಮುಖಂಡರು, ಅಭಿಮಾನಿಗಳು ಅವರ ನಿವಾಸದತ್ತ ಬರ ತೊಡಗಿದರು. ಮಧ್ಯಾಹ್ನ 3.20ರ ವೇಳೆಗೆ ಸಚಿವ ಸಹದ್ಯೋಗಿಗಳಾದ ಕೆ.ಜೆ.ಜಾರ್ಜ್‌, ಡಿ.ಕೆ.ಶಿವಕುಮಾರ್‌, ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರೊಂದಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹದೇವಪ್ರಸಾದ್‌ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

Advertisement

ಸಂಜೆ 4.18ರ ಸುಮಾರಿಗೆ ಪಾರ್ಥಿವ ಶರೀರವನ್ನು ಮನೆಗೆ ತಂದು 10 ನಿಮಿಷಗಳ ಕಾಲ ಮನೆಯೊಳಗಿರಿಸಿ, ಕುಟುಂಬದವರ ಅಂತಿಮ ದರ್ಶನದ ನಂತರ ಸಂಜೆ 4.30ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಸಾವಿರಾರು ಜನರು ಸರತಿಯಲ್ಲಿ ನಿಂತು ಬಂದು ಅಗಲಿದ ನಾಯಕನ ಅಂತಿಮ ದರ್ಶನ ಪಡೆದು, ಪುಷ್ಪ$ಗುತ್ಛವಿರಿಸಿ ಕಂಬನಿ ಮಿಡಿದರು.

ಸತತ 2ಗಂಟೆ 20 ನಿಮಿಷಗಳ ಕಾಲ ಸಾರ್ವಜನಿಕ ದರ್ಶನದ ನಂತರ ಸಂಜೆ 6.55ಕ್ಕೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಗುಂಡ್ಲುಪೇಟೆಗೆ ಕೊಂಡೊಯ್ಯಲಾಯಿತು.
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸೇರಿದಂತೆ ರಾಜ್ಯಸರ್ಕಾರದ ಅನೇಕ ಮಂತ್ರಿಗಳು, ವಿವಿಧ ಪಕ್ಷಗಳ ಶಾಸಕರು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಮುಖಂಡರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು.

ಬಿಕ್ಕಿ ಬಿಕ್ಕಿ ಅತ್ತ ಸಚಿವ ಎಚ್‌.ಸಿ. ಮಹದೇವಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರಾದ ಡಾ. ಎಚ್‌.ಸಿ. ಮಹದೇವಪ್ಪ ಮತ್ತು ಎಚ್‌.ಎಸ್‌. ಮಹದೇವಪ್ರಸಾದ್‌ ಅತ್ಯಾಪ್ತರು. ಅದಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯ ಅವರ ರೈಟು-ಲೈಫ‌ುr ಎಂದೇ ಜನಜನಿತ. ಇಂತಹ ಸ್ನೇಹಿತನನ್ನು ಕಳೆದುಕೊಂಡ ಸಚಿವ ಮಹದೇವಪ್ಪ, ಮಹದೇವಪ್ರಸಾದ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬಂದಾಗ ಒತ್ತರಿಸಿ ಬರುತ್ತಿದ್ದ ದುಃಖವನ್ನು ಸಾಕಷ್ಟು ಅದುಮಿದರಾದರೂ ಕಡೆಗೂ ಅವರಿಂದ ತಡೆಯಲಾಗಲಿಲ್ಲ.

ಪಾರ್ಥಿವ ಶರೀರ ಇರಿಸಿದ್ದ ವೇದಿಕೆ ಮೇಲೆ ಹೋದವರೇ ಬಿಕ್ಕಿ ಬಿಕ್ಕಿ ಅತ್ತು, ಸ್ನೇಹಿತನ ಅಗಲಿಕೆಗೆ ಕಣ್ಣೀರುಗರೆದರು. ಮಾಜಿ ಸಚಿವ ಅಮರೇಗೌಡ ಬಯ್ನಾಪುರ ಅವರಂತು ಅಯ್ಯೋ… ಎಂದು ಗೋಳಾಡುತ್ತಿದ್ದುದನ್ನು ಕಂಡು ಅವರನ್ನು ಸಂತೈಸಲು ಹಲವರು ಪ್ರಯತ್ನಿಸಬೇಕಾಯಿತು.

ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ ಅವರ ಅಕಾಲಿಕ ಮರಣ ಅತ್ಯಂತ ದುಃಖದ ಸಂಗತಿ. ಸರ್ಕಾರಕ್ಕೆ ತುಂಬಲಾರದ ನಷ್ಟವಾಗಿದೆ. ಸರಳ, ಸಜ್ಜನಿಕೆ, ತಾಳ್ಮೆಯನ್ನು ಹೊಂದಿದ್ದ ಅವರು ಯಾವುದೇ ಸಮಸ್ಯೆ ಎದುರಾದಾಗ ಅದನ್ನು ಸುಲಭವಾಗಿ ಬಗೆಹರಿಸುವ ಶಕ್ತಿ ಹೊಂದಿದ್ದರು.
-ಯು.ಟಿ.ಖಾದರ್‌, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು

ಮಹದೇವ ಪ್ರಸಾದ್‌ ಅವರ ಸಾವಿನ ವಿಷಯ ತಿಳಿದು ನಂಬಲು ಆಗಲಿಲ್ಲ. ಎಂದಿಗೂ ಸಭ್ಯತೆಯನ್ನು ಮೀರಿ ಮಾತನಾಡುತ್ತಿರಲಿಲ್ಲ. ಸಜ್ಜನಿಕೆಯ ರಾಜಕಾರಣಿ ಯಾಗಿದ್ದ ಅವರು ತಮ್ಮ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಂಡಿದ್ದ ಕಾರಣದಿಂದ ಸತತ 5 ಬಾರಿ ಶಾಸಕರಾಗಿದ್ದರು. ನಾನು ರಾಜಕೀಯಕ್ಕೆ ಹೊಸಬನಾಗಿದ್ದರೂ ಅತ್ಯಂತ ಪ್ರೀತಿ, ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು.
-ಪ್ರತಾಪ್‌ಸಿಂಹ, ಸಂಸದ

ಮಹದೇವ ಪ್ರಸಾದ್‌ ಅವರು ಆತ್ಮೀಯರು ಹಾಗೂ ಒಳ್ಳೆಯ ಸ್ನೇಹಿತರಾಗಿದ್ದರು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ತಮ್ಮ ಆರೋಗ್ಯ ದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡುಬಂದರೂ ವೈದ್ಯರನ್ನು ಸಂಪರ್ಕಿಸುತ್ತಿದ್ದರು. ಹತ್ತು ವರ್ಷದ ಹಿಂದೆ ಬೈಪಾಸ್‌ ಚಿಕಿತ್ಸೆ ಆದ ಬಳಿಕ ಆರೋಗ್ಯದ ವಿಷಯ ದಲ್ಲಿ ಎಚ್ಚರಿಕೆ ವಹಿಸಿದ್ದರು. ಅವರ ಸಾವಿನ ದುಃಖ ವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ.
-ಕೆ.ವೆಂಕಟೇಶ್‌, ಶಾಸಕ

ಮಹದೇವಪ್ರಸಾದ್‌ ಅವರ ಸಾವು ದಿಗ್ಬಮೆ ಮೂಡಿಸಿದೆ. ಸದಾ ಲವಲವಿಕೆಯಿಂದ ಓಡಾಡು ತ್ತಿದ್ದರು. ಮೈಸೂರು – ಚಾಮರಾಜನಗರ ಭಾಗದಲ್ಲಿ ಅತ್ಯಂತ ಪ್ರಭಾವ ಹೊಂದಿದ್ದರು. ಇವರ ಈ ಸಾವು ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ.
-ಎಂ.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ.

ಮಹದೇವ ಪ್ರಸಾದ್‌ ಅಕಾಲಿಕ ಮರಣ ತುಂಬ ಲಾರದ ನಷ್ಟವನ್ನುಂಟು ಮಾಡಿದೆ. ಜೆಎಸ್‌ಎಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಎನ್‌ಎಸ್‌ಎಸ್‌ ವಿದ್ಯಾರ್ಥಿಯಾಗಿದ್ದ ಅವರು ಅಂದಿನಿಂದಲೂ ರಾಜಕೀಯ ನಾಯಕನಾಗುವ ಗುಣವನ್ನು ಹೊಂದಿದ್ದರು. ರಾಜಕೀಯದಲ್ಲಿ ಸೋಲು-ಗೆಲುವನ್ನು ಕಂಡಿದ್ದ ಅವರು ಸಜ್ಜನ ರಾಜಕಾರಣಿಯಾಗಿದ್ದರು. ಕಾಲೇಜು ಸ್ನೇಹಿತನನ್ನು ಕಳೆದುಕೊಂಡ ದುಃಖ ನನ್ನನ್ನು ಕಾಡಲಿದೆ.
-ಎಸ್‌.ಎ.ರಾಮದಾಸ್‌, ಮಾಜಿ ಸಚಿವ

ಎಚ್‌.ಎಸ್‌.ಮಹದೇವಪ್ರಸಾದ್‌ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅಪರೂಪದ ರಾಜಕಾರಣಿಯಾಗಿದ್ದರು. ಅಜಾತ ಶತ್ರುವಾಗಿಜಾತ್ಯತೀತ ಮನೋಭಾವ ಹೊಂದಿದ್ದ ಅವರು ರಾಜಕೀಯದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಇವರ ಅಕಾಲಿಕ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.
-ಎಂ.ಕೆ.ಸೋಮಶೇಖರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next