Advertisement

ಎಲ್ಲ ಸಿನಿಮಾ ಕಲಾವಿದರಿಗೆ ಸ್ವಂತ ಸೂರು: ಸಿಎಂ ಎಚ್‌ಡಿಕೆ ಭರವಸೆ

11:44 AM Jun 22, 2018 | Team Udayavani |

ಬೆಂಗಳೂರು: ಸಿನಿಮಾ ಕಲಾವಿದರು, ಸಹ ಕಲಾವಿದವರು ಸೇರಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಒದಗಿಸುವ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲಾಕುಲದ ಅಭಿನಂದನಾ ಸಿಂಚನ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಚಿತ್ರರಂಗದಿಂದಲೇ ಬಂದಿರುವ ನನಗೆ ಚಿತ್ರರಂಗದ ಸಮಸ್ಯೆ, ಕಲಾವಿದರು, ಸಹ ಕಲಾವಿದರು ಎದುರಿಸುತ್ತಿರುವ ಸವಾಲುಗಳನ್ನು ಅರಿತಿದ್ದೇನೆ. ನಗರದಲ್ಲಿರುವ ಪ್ರತಿಯೊಬ್ಬರು ಸ್ವಂತ ಮನೆ ಹೊಂದಬೇಕು.

ಚಲನಚಿತ್ರ ಕಲಾವಿದರಲ್ಲಿ ಅನೇಕರಿಗೆ ಸ್ವಂತ ಮನೆ ಇಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಸಂಬಂಧ ಅಗತ್ಯ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೊಡುಗೆ ನೀಡುತ್ತೇನೆ. ರಾಮನಗರದಲ್ಲಿ 500 ಎಕರೆ ಜಾಗದಲ್ಲಿ ಫಿಲಂ ಸಿಟಿ ನಿರ್ಮಿಸುವ ಕನಸಿದೆ. ಇದರಿಂದ 2 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

ಹಿಂದಿನ ಸರ್ಕಾರ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 150 ಎಕರೆ ಜಮೀನು ಮೀಸಲಿಟ್ಟಿದೆ. ಚಿತ್ರರಂಗದ ಸಮಗ್ರ ಅಭಿವೃದ್ಧಿಗೆ ಬೇಕಾದ ನೀಲನಕ್ಷೆಯನ್ನು ಸಿದ್ಧಪಡಿಸಿ. ಅದಕ್ಕೆ ಅಗತ್ಯವಾದ ಸಹಾಯ, ಸಹಕಾರ ನೀಡುತ್ತೇನೆ. ಇದರ ಮುಂದಾಳತ್ವವನ್ನು ಮಾಜಿ ಸಚಿವರೂ ಆದ ಹಿರಿಯ ನಟ ಅಂಬರೀಷ್‌ ಅವರು ವಹಿಸಿಕೊಳ್ಳಲಿ ಎಂದರು.

ಮೈಸೂರು ನಗರವನ್ನು ಪ್ರವಾಸೋದ್ಯಮ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕು. ರೈತರ ಸಾಲ ಮನ್ನಾ ಮೊದಲ ಆದ್ಯತೆಯಾಗಿದೆ. ರೈತರು ಕನ್ನಡ ಚಲನಚಿತ್ರವನ್ನು ಪ್ರೀತಿಯಿಂದ ನೋಡುತ್ತಾರೆ. ಸಿನಿಮಾಕ್ಕೆ ಸಂಬಂಧಿಸಿದ ರಾಜ್ಯ ಜಿಎಸ್‌ಟಿ ಕಡಿತಗೊಳಿಸುವ ಬಗ್ಗೆಯೂ ಚಿಂತನೆ  ನಡೆದಿದೆ. ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಬಿಡುಗಡೆಯಾಗಬೇಕಿರುವ ಸುಮಾರು 40 ಕೋಟಿ ರೂ. ಸಬ್ಸಿಡಿಯನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕಾಂಪಿಟೇಷನ್‌ ಕಮಿಷನ್‌ ಆಫ್ ಇಂಡಿಯಾ (ಸಿಸಿಐ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 1.50 ಕೋಟಿ ರೂ. ದಂಡ ವಿಧಿಸಿದೆ. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ದಂಡ ಶುಲ್ಕ ಕಡಿತಗೊಳಿಸಬೇಕು. ಮಲ್ಟಿಫ್ಲೆಕ್ಸ್‌ಗಳಲ್ಲಿ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಿನಿಮಾದ ಮೇಲಿನ ಜಿಎಸ್‌ಟಿಯಲ್ಲಿ ರಾಜ್ಯದ ಪಾಲನ್ನು ಮನ್ನಾಮಾಡಬೇಕು ಎಂದು ಮನವಿ ಮಾಡಿದರು.

ಕಲಾವಿದರ ಕ್ಷೇಮಾಭಿವೃದ್ಧಿ ನಿಧಿಗೆ 10 ಕೋಟಿ ರೂ. ಅನುದಾನ ನೀಡಬೇಕು. ಹಿಂದಿನ ಸರ್ಕಾರ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಮೀನನ್ನು ಆದಷ್ಟು ಬೇಗ ಮಂಜೂರು ಮಾಡಬೇಕು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸರ್ಕಾರದ ಮಾನ್ಯತೆ ನೀಡಬೇಕು ಎಂದು ಕೋರಿದರು.

ಇದೇ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಹಿರಿಯ ನಟ ಅಂಬರೀಷ್‌, ಹಿರಿಯ ನಟಿ ಬಿ.ಸರೋಜಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ.ಜಯಮಾಲಾ, ನಟ ದರ್ಶನ್‌ ಸೇರಿದಂತೆ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next