ಹನೂರು: ತಾಲೂಕು ಕೇಂದ್ರವಾದ ಹನೂರು ಮತ್ತು ರಾಮಾಪುರ ರೈತ ಸಂಪರ್ಕ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇದನ್ನು ಮನಗಂಡು ಹನೂರು ಪಟ್ಟಣದಲ್ಲಿ 50 ಲಕ್ಷ ರೂ. ಮತ್ತು ರಾಮಾಪುರದಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ತಾಲೂಕಿನ ರಾಮಾಪುರ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿ, ರೈತರಿಗೆ ಅಗತ್ಯವಾದ ಮಾಹಿತಿ ನೀಡಲು, ಸಬಿಡಿ ದರದಲ್ಲಿ ಬಿತ್ತನೆ ಬೀಜ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ವಿತರಿಸಲು ಈ ಹಿಂದೆಯೇ ರೈತ ಸಂಪರ್ಕ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ, ಈ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಮಗಾರಿ ಗುಣಮಟ್ಟ ಅವಶ್ಯ: ರೈತ ಸಂಪರ್ಕ ಕೇಂದ್ರ ಕಟ್ಟಡದ ಕಾಮಗಾರಿಯುನಿಗದಿತ ಕಾಲಮಿತಿಯೊಳಗೆ ಪೂರ್ಣಗೊಂಡು ಸೇವೆಗೆ ದೊರಕುವಂತಾಗಬೇಕು. ಅಲ್ಲದೆ, ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಉತ್ತಮ ಕಟ್ಟಡವನ್ನು ನಿರ್ಮಾಣ ಮಾಡಬೇಕು. ನಿರ್ಮಾಣದ ಹೊಣೆಹೊತ್ತ ಸಂಸ್ಥೆಯ ಅಭಿಯಂತರರು ಅಗತ್ಯ ಮೇಲುಸ್ತುವಾರಿ ವಹಿಸಬೇಕು ಎಂದು ಸೂಚನೆ ನೀಡಿದರು.
ಜಲಾಶಯ ನೀರಿನ ಮಟ್ಟದ ಬಗ್ಗೆ ಮಾಹಿತಿ: ಇದೇ ವೇಳೆ ಸ್ಥಳದಲ್ಲಿ ಹಾಜರಿದ್ದ ಮುಖಂಡರ ಜೊತೆ ಚರ್ಚೆ ನಡೆಸಿದ ಶಾಸಕರು, ಉಡುತೊರೆಹಳ್ಳ ಜಲಾಶಯ ಮತ್ತು ಹೂಗ್ಯಂ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವಿನ ಬಗ್ಗೆ ಮಾಹಿತಿ ಪಡೆದರು. ಉಡುತೊರೆಹಳ್ಳ ಜಲಾಶಯಕ್ಕೆ ಪ್ರತಿನಿತ್ಯ ನೀರಿನ ಮಟ್ಟ ಏರಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದು, ಕಳೆದ 3-4 ದಿನಗಳಿಂದ ಬೀಳುತ್ತಿರುವ ಮಳೆಯ ಪ್ರಮಾಣದಲ್ಲಿಯೇ ಮಳೆಯಾದಲ್ಲಿ ಮುಂದಿನ ಒಂದು ವಾರದೊಳಗಾಗಿ 2 ಜಲಾಶಯಗಳು ಭರ್ತಿಯಾಗುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಜೊತೆಗೆ ರೈತರಿಗೆ ಮುಂಬರುವ ಬೇಸಿಗೆಯ ಬೆಳೆ ತೆಗೆಯಲು ಅನುಕೂಲವಾಗುವ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜೇಂದ್ರ, ತಾಪಂ ಸದಸ್ಯ ನಟರಾಜು, ಗ್ರಾಪಂ ಅಧ್ಯಕ್ಷೆ ನಲ್ಲಮ್ಮ, ಮುಖಂಡರಾದ ಶಿವಕುಮಾರ್,ದಿನ್ನಳ್ಳಿ ರವಿ, ಅಭಿಯಂತರ ಸಿದ್ದಪ್ಪಾಜಿಗೌಡ, ಕೃಷಿ ಅಧಿಕಾರಿ ರಘುವೀರ ಹಾಜರಿದ್ದರು.