ಮುಂಬೈ: ಭಾರತದಲ್ಲಿ ಕೋಟ್ಯಾಂತರ ಮುಸ್ಲಿಂಮರು ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರ. ಪಾಕಿಸ್ಥಾನ ಭಾರತದ ಏಕತೆಯನ್ನು ಕಂಡು ಅಸೂಯೆ ಪಡುತ್ತಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ರ ಮುಗ್ಧತೆಯ ಮುಖವಾಡ ಕಳಚುವ ಸಮಯ ಬಂದಿದೆ ಎಂದು ಏಐಎಂಐಂ ಅದ್ಯಕ್ಷ ಅಸಾವುದ್ದೀನ್ ಓವೈಸಿ ಗುಡುಗಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ತೀವ್ರವಾಗಿ ಖಂಡಿಸಿದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕ್ಯಾಮೆರಾ ಎದುರು ಕುಳಿತು ಭಾರತಕ್ಕೆ ಸಂದೇಶ ನೀಡುವುದನ್ನು ಮೊದಲು ನಿಲ್ಲಿಸಲಿ. ಇದೇನು ಮೊದಲ ದಾಳಿಯಲ್ಲ. ಪಠಾಣ್ ಕೋಟ್, ಉರಿ ಈಗ ಪುಲ್ವಾಮಾ ದಾಳಿ. ತನ್ನ ಮುಗ್ಧತೆಯ ಮುಖವಾಡವನ್ನು ಕಳಚುವಂತೆ ಪಾಕ್ ಪ್ರಧಾನಿಗೆ ಭಾರತದ ಪರವಾಗಿ ಹೇಳುತ್ತೇನೆ ಎಂದರು.
ಭಾರತದಲ್ಲಿ ಮುಸ್ಲಿಂಮರು ಅವರ ಆಯ್ಕೆಯ ಮೇರೆಗೆ ಬದುಕುತ್ತಿದ್ದಾರೆ. 1947ರಲ್ಲಿ ಮೊಹಮ್ಮದ್ ಆಲಿ ಜಿನ್ನಾರೊಂದಿಗೆ ಸೇರಲಿಚ್ಚಿಸದೆ ಕೋಟ್ಯಾಂತರ ಮುಸ್ಲಿಂಮರು ಭಾರತದಲ್ಲಿ ಇದ್ದಾರೆ. ಇದನ್ನು ಕಂಡು ಪಾಕಿಸ್ಥಾನಕ್ಕೆ ಅಸೂಯೆಯಾಗುತ್ತಿದೆ ಎಂದರು.
ಪಾಕಿಸ್ಥಾನದಲ್ಲಿನ ಹಿಂದೂ ದೇವಸ್ಥಾನಗಳ ಪ್ರಾರ್ಥನಾ ಘಂಟೆಯನ್ನು ನಿಲ್ಲಿಸುತ್ತೇವೆ ಎಂಬ ಪಾಕ್ ಮಂತ್ರಿಯೋರ್ವನ ಹೇಳಿಕೆಗೆ ಉತ್ತರಿಸಿದ ಓವೈಸಿ, ಪಾಕ್ ಸಚಿವನಿಗೆ ಭಾರತದ ಬಗ್ಗೆ ಗೊತ್ತಿಲ್ಲ. ಭಾರತದಲ್ಲಿ ಮುಸ್ಲಿಂಮರು ಇರುವವರೆಗೆ ದೇಗುಲಗಳ ಘಂಟೆ ಮತ್ತು ಮಸೀದಿಯ ಆಜಾನ್ ಮೊಳಗುತ್ತಿರುತ್ತದೆ. ಇದು ಭಾರತದ ಏಕತೆಯ ಸೌಂದರ್ಯ, ಇದನ್ನು ಕಂಡು ನೆರೆ ರಾಷ್ಟ್ರ ಅಸೂಯೆ ಪಡುತ್ತಿದೆ ಎಂದು ಲೇವಡಿ ಮಾಡಿದರು.
ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಬಗ್ಗೆ ಕಿಡಿಕಾರಿದ ಓವೈಸಿ, ಯಾರು ಪ್ರವಾದಿ ಮೊಹಮ್ಮದರನ್ನು ಯಾರು ಅನುಸರಿಸುತ್ತಾರೋ ಅವರು ಮನುಷ್ಯರನ್ನು ಕೊಲ್ಲುವುದಿಲ್ಲ ಎಂದರು. ಭಾರತದ ಪ್ರಜೆಯಾಗಿ ಹೇಳುತ್ತೇನೆ. ಪುಲ್ವಮಾ ದಾಳಿ ಪಾಕಿಸ್ಥಾನ ಸರಕಾರ, ಸೇನೆ ಮತ್ತು ಐಎಸ್‌ಐನ ಯೋಜನೆಯಂತೆ ಮಾಡಲಾಗಿದೆ.
40 ಜನರನ್ನು ಕೊಂದ ಅವರು ಜೈಶ್ ಎ ಮೊಹಮ್ಮದ್ ಅಲ್ಲ, ಜೈಶ್ ಎ ಸೈತಾನ ಎಂದರು. ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಒಬ್ಬ ಮೌಲಾನ ಅಲ್ಲ ಆತ ದೆವ್ವದ ಶಿಷ್ಯ ಎಂದು ಜರಿದರು.