ನವದೆಹಲಿ: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರ ನಡುವೆ ಟ್ವಿಟರ್ ವಾಗ್ವಾದ ನಡೆದಿತ್ತು. ಇದೀಗ ಭಾಷೆಗಳ ನಡುವೆ ವಿವಾದ ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 20) ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಮೂಡಲಗಿಯ ಐದು ಸೇತುವೆಗಳು ಸಂಪೂರ್ಣ ಮುಳಗಡೆ: ಸಂಚಾರ ಸ್ಥಗಿತ
“ಹಿಂದಿ ಭಾಷೆಯ ಕುರಿತು ನಾನು ಯಾವುದೇ ಜಗಳ ಅಥವಾ ಯಾವುದೇ ರೀತಿಯ ಚರ್ಚೆ ಹುಟ್ಟುಹಾಕಬೇಕೆಂಬ ಉದ್ದೇಶ ಹೊಂದಿರಲಿಲ್ಲ. ಇದೊಂದು ಅಜೆಂಡಾ ಇಲ್ಲದ ಪ್ರತಿಕ್ರಿಯೆಯಾಗಿತ್ತು. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಹೇಳಿರುವ ಮಾತುಗಳನ್ನು ಕೇಳಿಸಿಕೊಳ್ಳುವುದು ನಮಗೊಂದು ಗೌರವ ಮತ್ತು ಸೌಭಾಗ್ಯವಾಗಿದೆ” ಎಂದು ಕಿಚ್ಚ ಸುದೀಪ್ ಎನ್ ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಮ್ಮ ಮಾತೃಭಾಷೆಯನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಪ್ರಧಾನಿಯವರ ಹೇಳಿಕೆಯಿಂದ ಅತೀವ ಸಂತಸ ತಂದಿದೆ ಎಂದು ಸುದೀಪ್ ಹೇಳಿದರು.
ಎಲ್ಲಾ ಪ್ರಾದೇಶಿಕ ಭಾಷೆಗಳು ಪೂಜನೀಯ ಎಂಬ ಪ್ರಧಾನಿಯವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಾನು ಕೇವಲ ಕನ್ನಡ ಭಾಷೆಯನ್ನು ಪ್ರತಿನಿಧಿಸುತ್ತಿಲ್ಲ. ನಾನು ಪ್ರತಿಯೊಬ್ಬರ ಮಾತೃಭಾಷೆಯನ್ನು ಗೌರವಿಸುವ ನೆಲೆಗಟ್ಟಿನಲ್ಲಿ ಮಾತನಾಡಿದ್ದೆ. ನಾನು ಅಂದು ನೀಡಿದ್ದ ಹೇಳಿಕೆಗೆ ಇಂದು ಪ್ರಧಾನಿಯರು ನೀಡಿರುವ ಹೇಳಿಕೆ ಅರ್ಥಪೂರ್ಣವಾಗಿದೆ. ನಾವು ಪ್ರಧಾನಿ ಮೋದಿ ಅವರನ್ನು ಕೇವಲ ರಾಜಕಾರಣಿಯನ್ನಾಗಿ ನೋಡುತ್ತಿಲ್ಲ, ನಾವೆಲ್ಲ ಅವರನ್ನು ನಾಯಕನನ್ನಾಗಿ ನೋಡುತ್ತೇವೆ” ಎಂದು ಸುದೀಪ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?
ನಾವು ಭಾರತದ ಎಲ್ಲಾ ಸ್ಥಳೀಯ ಭಾಷೆಗಳನ್ನು ಗೌರವಿಸುತ್ತೇವೆ, ಆ ಭಾಷೆಗಳಲ್ಲಿ ದೇಶದ ಸಂಸ್ಕೃತಿ ಪ್ರತಿಫಲನಗೊಳ್ಳುತ್ತದೆ. ಅವುಗಳನ್ನೆಲ್ಲ ಬಿಜೆಪಿ ಪೂಜನೀಯವಾಗಿ ಕಾಣುತ್ತದೆ. ಅಷ್ಟು ಮಾತ್ರವಲ್ಲ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲ ಸ್ಥಳೀಯ ಭಾಷೆಗಳಿಗೂ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಹಿಂದಿ ಭಾಷೆ ಕುರಿತು ಟ್ವೀಟ್ ವಾಗ್ವಾದ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.