Advertisement

ಅತಿಕ್ರಮ ಪ್ರವೇಶ

05:31 PM Sep 22, 2019 | Sriram |

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ಹೆಚ್ಚಿನ ವ್ಯಾಜ್ಯಗಳಲ್ಲಿ ಅತಿಕ್ರಮ ಪ್ರವೇಶದ್ದೇ ಬಹುಪಾಲು ಇರುತ್ತದೆ. ಜಮೀನು ಒತ್ತುವರಿಯಾಯಿತೆಂದೋ, ಅತಿಕ್ರಮ ಪ್ರವೇಶ ಆಯಿತೆಂದೋ ಕಲಹ ಉಂಟಾಗಿ, ಕೇಸ್‌ ಆಗಬಹುದು. ಅಥವಾ ಈ ಸಂಬಂಧದ ಜಗಳ ತಾರಕಕ್ಕೇರಿ, ಕಡೆಗೆ ಹೊಡೆದಾಟ ಶುರುವಾಗಿ ಯಾರಾದರೊಬ್ಬನ ಮರಣದಲ್ಲಿ ಪರ್ಯಾವಸಾನವಾಗುವುದು ಈ ದಿನಗಳಲ್ಲಿಯೂ ಸರ್ವೆ ಸಾಮಾನ್ಯ. ಈಗ ಕೆಳಗಿನ ಉದಾಹರಣೆಗಳನ್ನು ಗಮನಿಸಿ.

Advertisement

ನಿಮ್ಮ ಜಮೀನು, ನೀವೇ ಸ್ವಾಧೀನದಲ್ಲಿದ್ದೀರಿ. ನಿಮ್ಮ ಜಮೀನಿನ ಮೇಲೆ ದುರುದ್ದೇಶದಿಂದ ಇನ್ನೊಬ್ಬ ಅತಿಕ್ರಮ ಪ್ರವೇಶ ಮಾಡಿ ಅದನ್ನು ಸ್ವಾಧೀನಕ್ಕೆ ಪಡೆಯಲು ಯತ್ನಿಸುತ್ತಾನೆ. ನಿಮ್ಮ ಮೇಲೆ ಹಲ್ಲೆ ಮಾಡುತ್ತಾನೆ. ಇಂಥ ಸಂದರ್ಭದಲ್ಲಿ, ನಿಮಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ.

ಇನ್ನೊಂದು ಉದಾಹರಣೆ ನೋಡಿ- ಜಮೀನು ನಿಮ್ಮದೇ ಆಗಿರಬಹುದು. ಸ್ವಾಧೀನ ನಿಮ್ಮಲ್ಲಿಲ್ಲ. ಏಕೆಂದರೆ ಇನ್ನೊಬ್ಬ ಅದನ್ನು ಅತಿಕ್ರಮ ಪ್ರವೇಶ ಮಾಡಿ ಬಹಳ ದಿವಸಗಳಿಂದ ಆಕ್ರಮಿಸಿಕೊಂಡಿದ್ದಾನೆ. ಈ ಆಕ್ರಮಣವನ್ನು ನೀವು ಕಾನೂನು ರೀತ್ಯ ತೆರವುಗೊಳಿಸಬೇಕೇ ಹೊರತು, ಜಮೀನಿಗೆ ನುಗ್ಗಿ ಅತಿಕ್ರಮ ಪ್ರವೇಶ ಮಾಡಿದವನ ಮೇಲೆ ಆಕ್ರಮಣ ನಡೆಸುವ ಹಾಗಿಲ್ಲ. ಹಾಗೆ ನೀವು ಅವನ ಮೇಲೆ ಹಲ್ಲೆ ಮಾಡಿದ್ದೇ ಆದರೆ, ಹಾಗೆ ಮಾಡಿ ಅವನಿಗೆ ಪ್ರಾಣಭಯವನ್ನು ಉಂಟುಮಾಡಿದರೆ, ಆ ವ್ಯಕ್ತಿ ತನ್ನ ರಕ್ಷಣೆಗಾಗಿ ನಿಮಗೆ ಪೆಟ್ಟು ಕೊಡಬಹುದು, ಗಾಯ ಮಾಡಬಹುದು. ಇಲ್ಲ ಮರಣವೇ ಸಂಭವಿಸಬಹುದು. ಆದರೆ ಆ ವ್ಯಕ್ತಿ ಅಪರಾಧ ಮಾಡಿದ ಹಾಗಾಗುವುದಿಲ್ಲ. ಅವನು ಏನೇ ಮಾಡಿದರೂ ಅದು ಆತ್ಮರಕ್ಷಣೆಗಾಗಿ ಎನ್ನಿಸಿಕೊಳ್ಳುತ್ತದೆ.

ಇವೆರಡೂ ಉದಾಹರಣೆಗಳಲ್ಲಿ ಎಚ್ಚರಿಕೆಯಿಂದ ಗಮನಿಸಬೇಕಾದುದು ಏನೆಂದರೆ, ಮೊದಲನೇ ಸಂದರ್ಭದಲ್ಲಿ ಜಮೀನಿನ ಮಾಲೀಕರು ನೀವು, ಜಮೀನು ನಿಮ್ಮ ಸುಪರ್ದಿಯಲ್ಲೇ ಇದೆ. ಅತಿಕ್ರಮ ಪ್ರವೇಶ ಮಾಡಿದವನ ಮೇಲೆ ನಿಮಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ಆದರೆ ಅವಶ್ಯಕತೆಗಿಂತ ಹೆಚ್ಚಾಗಿ ಪೆಟ್ಟು ಕೊಡಬೇಡಿ. ಅತಿಕ್ರಮ ಪ್ರವೇಶವನ್ನು ತಡೆಗಟ್ಟಿ, ಅವನನ್ನು ಜಮೀನಿನಿಂದ ತೆರವುಗೊಳಿಸಿದ ಮೇಲೂ ಅವನನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯಬೇಡಿ.

ಎರಡನೆಯ ಉದಾಹರಣೆಯಲ್ಲಿಯೂ ಜಮೀನು ನಿಮ್ಮದೇ. ಆದರೆ ಸ್ವಾಧೀನ ನಿಮ್ಮಲ್ಲಿಲ್ಲ. ಹೇಗೋ, ಬಹಳ ದಿವಸಗಳಿಂದ ನಿಮ್ಮ ಕೈತಪ್ಪಿಹೋಗಿದೆ. ಅತಿಕ್ರಮಣಕಾರ ತಳ ಊರಿದ್ದಾನೆ. ಇಂಥವನನ್ನು ಹೊರದಬ್ಬಬೇಕಾದರೆ ಕಾನೂನು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ನೀವೇ ನುಗ್ಗಿ ಬಲಪ್ರಯೋಗ ಮಾಡುವ ಹಾಗಿಲ್ಲ. ಇವೆಲ್ಲಾ ಸಂಗತಿಗಳನ್ನು ನೆನಪಿಟ್ಟುಕೊಂಡು, ಕಾನೂನಿನ ಮೊರೆ ಹೋದರೆ, ಗದ್ದಲ, ಗಲಭೆ, ಹೊಡೆದಾಟ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಜಗಳ ವಿಕೋಪಕ್ಕೆ ಹೋಗಿಬಿಟ್ಟರೆ ಪರಿಣಾಮ ಏನು ಬೇಕಾದರೂ ಆಗಿಬಿಡಬಹುದು. ಅಂತ ಸಂದರ್ಭದಲ್ಲಿ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ಅವರ ಅತಿಥಿಗಳಾಗುವುದು ತಪ್ಪುತ್ತದೆ.

Advertisement

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement

Udayavani is now on Telegram. Click here to join our channel and stay updated with the latest news.

Next