ವಿಜಯಪುರ: ತನ್ನಲ್ಲಿರುವ ಐತಿಹಾಸಿಕ ವಿಭಿನ್ನ ವಾಸ್ತು ಶೈಲಿಯ ಅಪರೂಪದ ಸ್ಮಾರಕಗಳಿಂದಾಗಿ ವಿಶ್ವದಾದ್ಯಂತ ಗಮನ ಸೆಳೆದಿರುವ ವಿಜಯಪುರ ಜಿಲ್ಲೆಯ ಎಲ್ಲ ಸ್ಮಾರಕಗಳು ಪ್ರವಾಸಿ ಆಸಕ್ತ ಹಾಗೂ ಐತಿಹಾಸಿಕ ಅಧ್ಯಯನಕಾರರ ವೀಕ್ಷಣೆಗೆ ಮುಕ್ತವಾಗಿಲ್ಲ. ಬದಲಾಗಿ ರಾಜ್ಯ ಸರ್ಕಾರದ ಸಂರಕ್ಷಿತ ಸ್ಮಾರಕಗಳಲ್ಲೇ ಜಿಲ್ಲಾಮಟ್ಟದಲ್ಲಿರುವ ಜಿಲ್ಲಾಧಿಕಾರಿ ಕಚೇರಿದಂತೆ ಹಲವು ಸರ್ಕಾರಿ ಕಚೇರಿಗಳನ್ನು ತೆರೆದಿದೆ. ಇದರೊಂದಿಗೆ ಸಾರ್ವಜನಿಕರಿ ಸರ್ಕಾರಿ ಆಸ್ತಿ ಕಬಳಿಕೆ ಆರೋಪಿಸಿ ಪ್ರಕರಣ ದಾಖಲಿಸುವ ಸರ್ಕಾರ, ತಾನೇ ಐತಿಹಾಸಿಕ ಸ್ಮಾರಕಗಳ ಅತಿಕ್ರಮಣ ಮಾಡಿಕೊಂಡು ಕುಳಿತಿದೆ ಎಂದು ಕುಹಕವಾಡುವಂತೆ ಮಾಡಿದೆ.
ವಿಜಯಪುರ ಜಿಲ್ಲಾ ಕೇಂದ್ರದಲ್ಲಿರುವ ಬಹುತೇಕ ಕಚೇರಿಗಳು ಅದರಲ್ಲೂ ಜಿಲ್ಲಾಧಿಕಾರಿ ಹಾಗೂ ಅದರ ಅಧೀನದಲ್ಲಿ ಬಹರುವ ಬಹುತೇಕ ಕಚೇರಿಗಳಿಗೆ ಸ್ವಂತ ಕಚೇರಿಗಳಿಲ್ಲ, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಬಹುತೇಕ ಅಧಿಕಾರಿಗಳಿಗೆ ಐತಿಹಾಸಿಕ ಸ್ಮಾರಕಗಳೇ ಸರ್ಕಾರದ ಅಧಿಕೃತ ನಿವಾಸಗಳು. ಆದಿಲ್ ಶಾಹಿ ಅರಸರು ಕಟ್ಟಿಸಿದ ಸ್ಮಾರಕಗಳಲ್ಲೇ ಸರ್ಕಾರಿ ಕಚೇರಿಗಳು ಕೆಲಸ ನಿರ್ವಹಿಸುತ್ತಿವೆ.
ಜಿಲ್ಲೆಯಲ್ಲಿ ಸುಮಾರು 5 ರಿಂದ 7 ಶತಮಾನ ಕಂಡಿರುವ ಐತಿಹಾಸಿಕ ಸ್ಮಾರಕಗಳು ಜಿಲ್ಲಾ ಕೇಂದ್ರದಲ್ಲಿವೆ. ಈ ಸ್ಮಾರಕಗಳು ಆದಿಲ್ ಶಾಹಿ ಅರಸರು, ನವಾಬರ ಕಾಲದಲ್ಲಿ ನಿರ್ಮಾಣಗೊಂಡು, ದೇಶವನ್ನಾಳಿದ ಬ್ರಿಟಿಷ ಆಡಳಿತದಲ್ಲಿ ನವೀಕರಣಗೊಂಡು ಇದೀಗ ರಾಜ್ಯ ಸರ್ಕಾರಿ ಅಧಿಕಾರಿಗಳ ಅತಿಕ್ರಮಣದಲ್ಲಿವೆ.
ಆದಿಲ್ ಶಾಹಿಗಳ ಬಳಿಕ ಕಲಾದಗಿ ಜಿಲ್ಲಾ ಕೇಂದ್ರವನ್ನು ವಿಜಯಪುರಕ್ಕೆ ಸ್ಥಳಾಂತರಿಸಿದ ಬ್ರಿಟಿಷರಿಗೆ ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ದುರಸ್ತಿ ಮಾಡಿಕೊಂಡು ನೆಲೆಸಿದ್ದರು. ದಕ್ಷಿಣ ಭಾಗದ ಸುಪರಿಂಟೆಂಡೆಂಟ್ ಇಂಜಿನೀಯರ್ ಆಗಿದ್ದ ಕರ್ನಲ್ ಸೇಂಟ್ ಕ್ಲೇರ್ ವಿಲ್ಕಿನ್ಸ್ ಎಂಬ ಅಧಿಕಾರಿ ಕಲಾದಗಿ ಪಟ್ಟಣದಿಂದ ಜಿಲ್ಲಾ ಕೇಂದ್ರವನ್ನು ವಿಜಯಪುರ ನಗರಕ್ಕೆ ಸ್ಥಳಾಂತರಿಸಲು 1873ರಲ್ಲಿ ಶಿಫಾರಸನ್ನು ಮಾಡಿದ್ದ. ಇದನ್ನು ಒಪ್ಪಿದ ಬ್ರಿಟಿಷ ಸರ್ಕಾರ 1885ರಲ್ಲಿ ಇಲ್ಲಿನ ಬಹುತೇಕ ಐತಿಹಾಸಿಕ ಸ್ಮಾರಕಗಳನ್ನು ದುರಸ್ತಿ ಮಾಡಿಸಿ ತನ್ನ ಕಚೇರಿ, ಅಧಿಕಾರಿಗಳ ನಿವಾಸಗಳಾಗಿ ಮಾಡಿಕೊಂಡಿತ್ತು.
ಒಂದನೇ ಯೂಸೂಫ್ ಆದಿಲ್ ಖಾನ್ ನಿರ್ಮಿಸಿದ್ದ ಫಾರೂಕ್ ಮಹಲ್ ಎಂಬ ಅರಮನೆ ಇದೀಗ ಜಿಲ್ಲಾಧಿಕಾರಿಗಳ ಅಧಿಕೃತ ಕಚೇರಿಯಾಗಿದೆ. ಎರಡನೇ ಇಬ್ರಾಹಿಂ ನಿರ್ಮಿಸಿದ್ದ ಹಾಗೂ ಶಾಹಿ ಅರಸರ ಮೇಲೆ ದಾಳಿ ನಡೆಸಿದ್ದ ಮೊಘಲ್ ದೊರೆ ಔರಂಗಜೇಬ ವಿಜಯಪುರ ರಾಜ್ಯವನ್ನು ವಶಕ್ಕೆ ಪಡೆದು ವಾಸ ಮಾಡಿದ್ದ ಐತಿಹಾಸಿಕ ಸ್ಮಾರಕದ ಹೆಸರು ಅದಾಲತ್ ಮಹಲ್. ಈ ಸ್ಮಾರಕ ಇದೀಗ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ. ಔರಂಗಜೇಬನ ಕಾಲದ ಈದ್ಗಾ ಮೈದಾನ ಇದೀಗ ಪೊಲೀಸ್ ಹೆಡ್‌ಕ್ವಾಟರ್.
ಇನ್ನು ಆದಿಲ್ ಶಾಹಿ ಅರಸರ ಕಾಲದಲ್ಲಿ ವಾಸ್ತು ಶಾಸ್ತದಲ್ಲಿ ಅತ್ಯಂತ ತಾಂತ್ರಿಕ ಜ್ಞಾನ ಹೊಂದಿದ್ದ ಇಂಜಿನಿಯರ್ ವಾಸವಾಗಿದ್ದ ಮನೆ ಹಿಂದೆ ಪ್ರವಾಸಿ ಮಂದಿರವಾಗಿತ್ತು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ವರೆಗೆ ಇದೇ ಕಟ್ಟಡದಲ್ಲಿ ಆಡಳಿತ ನಡೆಸಿತ್ತು. ವಿಶ್ವವಿದ್ಯಾಲಯದ ಕುಲಪತಿಗಳ ನಿವಾಸವೂ ಇಲ್ಲೇ ಇತ್ತು. ಇದೀಗ ಈ ಕಟ್ಟಡ ಸಂಸದರು, ಸಚಿವರು, ಶಾಸಕರು ಹಾಗೂ ವಿವಿಧ ಕಚೇರಿಗಳಿಗೆ ಸೂರು ಒದಗಿಸಿದೆ.
ಆದಿಲ್ ಶಾಹಿ ಅರಸರ ರಾಜಧಾನಿ ಕಾವಲು ಮುಖ್ಯಸ್ಥ ವಾಸವಾಗಿದ್ದ ಚೀನಿ ಮಹಲ್ ಎಂದು ಕರೆಸಿಕೊಳ್ಳುವ ಸ್ಮಾರಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧಿಕೃತ ನಿವಾಸವಾಗಿದೆ. 1626-56 ರ ವರೆಗೆ ವಿಜಯಪುರ ರಾಜ್ಯಭಾರ ಮಾಡಿದ್ದ ಮೊಹ್ಮದ್ ಆದಿಲ್ ಶಹಾನ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದ ಮುಸ್ತಫಾ ಖಾನ್‌ನ ಸರಾಯಿ ಎಂದೇ ಕರೆಸಿಕೊಂಡಿದ್ದ ವಿಶ್ರಾಂತಿ ಗೃಹವಾಗಿದ್ದ ಸ್ಮಾರಕ ಇದೀಗ ಜಿಲ್ಲಾ ಕೇಂದ್ರ ಕಾರಾಗೃಹವಾಗಿದೆ. ವಿಜಯಪುರ ಶಾಹಿ ಆರಸರ ವಿದೇಶಿ ರಾಯಭಾರಿಗಳನ್ನು ಸ್ವಾಗತಿಸಲು ನಿರ್ಮಿಸಿದ್ದ ಆನಂದ ಮಹಲ್ ಹಿಂದೆ ಜಿಪಂ ಕಚೇರಿ ಅಗಿತ್ತು. ನಂತರ ಸಂಸದರ ಕಚೇರಿ, ರೇಷ್ಮೆ ಇಲಾಖೆ, ಜಲಾನಯನ ಕಚೇರಿ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳಾಗಿದ್ದವು. ಇದೀಗ ಕೆಲವು ಕಚೇರಿಗಳಲ್ಲಿ ಕೆಲವು ತೆರವುಗೊಂಡಿವೆ. ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಮಾತ್ರ ಇನ್ನೂ ಇದೇ ಸ್ಮಾರಕದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಾರ್ವಜನಿಕರಿಗೆ ಐತಿಹಾಸಿಕ ಆಸ್ತಿ ಹಾಗೂ ಸ್ಮಾರಕಗಳ ಸಂರಕ್ಷಣೆ ಕುರಿತು ಪಾಠ ಮಾಡಬೇಕಾದ ಸರ್ಕಾರ ತನ್ನ ಇಲಾಖೆಗಳಿಗೆ ಕಚೇರಿ ಕಟ್ಟಿಕೊಡುವ ಹಾಗೂ ಅಧಿಕಾರಿಗಳಿಗೆ ನಿವಾಸದ ವ್ಯವಸ್ಥೆ ಮಾಡಿಕೊಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ವಿಜಯಪುರ ನಗರದಲ್ಲಿರುವ ಹಲವು ಸ್ಮಾರಕಗಳು ಪ್ರವಾಸಿಗರ ವೀಕ್ಷಣಾ ತಾಣಗಳಾಗುವ ಬದಲು ಸರ್ಕಾರಿ ಅತಿಕ್ರಮಣ ಎನಿಸಿಕೊಂಡಿವೆ. ಇದು ವಿಜಯಪುರ ಮಟ್ಟಿಗೆ ನಿಜಕ್ಕೂ ಸೋಜಿಗ ಎನಿಸಿದೆ.
ಮೂಲ ಸ್ವರೂಪ ಕಳೆದುಕೊಂಡ ಸ್ಮಾರಕಗಳು: ಇದಲ್ಲದೇ ಜಿಲ್ಲಾಧಿಕಾರಿ ಕಚೇರಿ ಇರುವ ಪ್ರದೇಶದ ಸುತ್ತಲೂ ಇರುವ ಸ್ಮಾರಕದಲ್ಲಿ ಖಜಾನೆ ಇಲಾಖೆ, ಸರ್ಕಾರಿ ಭೂ ದಾಖಲೆಗಳ ಕಚೇರಿ, ಆಹಾರ ಇಲಾಖೆ ಹೀಗೆ ಹಲವು ಇಲಾಖೆಗಳ ಕಚೇರಿಗಳು ಈ ಸ್ಮಾರಕವನ್ನು ಆವರಿಸಕೊಂಡಿವೆ. ಇನ್ನು ಸರ್ಕಾರಿ ಕಚೇರಿ-ಅಧಿಕಾರಿಗಳ ನಿವಾಸವಾಗಿರುವ ಬಹುತೇಕ ಕಚೇರಿಗಳು ಆಯಾ ಅಧಿಕಾರಿಗಳ ಮನೋಆಸಕ್ತಿಗೆ ತಕ್ಕಂತೆ ಐತಿಹಾಸಿಕ ಸ್ಮಾರಕಗಳು ಮೂಲ ಸ್ವರೂಪ ಕಳೆದುಕೊಂಡು ವಿರೂಪಗೊಂಡಿವೆ. ರಿತ್ವಿಕ್ ರಂಜನ್ ಪಾಂಡೆ ಎಂಬ ಅಧಿಕಾರಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಕಪ್ಪು ಶಿಲೆಯಿಂದ ನಿರ್ಮಾಣಗೊಂಡಿದ್ದ ಫಾರೂಕ್ ಮಹಲ್ ಸುಂದರವಾಗಿ ಕಾಣುವುದಿಲ್ಲ ಎಂದು ಸುಣ್ಣ ಹೊಡೆಸುವ ಮೂಲಕ ಸ್ಮಾರಕ ವಿರೂಪಗೊಳಿಸಿದ್ದರು. ಈ ಕುರಿತು ಸಾರ್ವಜನಿಕರು ಆಕ್ಷೇಪ ಎತ್ತಿದರೂ ನಿರ್ಲಕ್ಷಿಸಿ, ತಮ್ಮ ವರ್ತನೆ ಮುಂದುವರಿಸಿದ್ದರು. ಬಹುತೇಕ ಕಚೇರಿಗಳು ಕಥೆಯೂ ಇದೇ ರೀತಿ ಇದೆ.
•ಜಿ.ಎಸ್. ಕಮತರ