Advertisement
ಸಾಹಿತ್ಯದ ಯಾವುದೇ ಪ್ರಕಾರ ರೂಪಕಗಳಲ್ಲಿ ಅಭಿವ್ಯಕ್ತಗೊಳ್ಳಬೇಕು. ಆಗ ಅದರ ಸಾಂದ್ರತೆ ಹೆಚ್ಚುತ್ತದೆ. ಆಗ ಮಾತ್ರ ವಿಮರ್ಶಕರ ಕಣ್ಣುಗಳು ಆ ಕೃತಿಗಳ ಕಡೆಗೆ ಹೊರಳುತ್ತದೆ. ನಂತರ ಅದನ್ನು ಗ್ರಹಿಸಬೇಕಾದ ಕ್ರಮ, ಅದರ ಡಿಕನ್ಸ್‌ಸ್ಟ್ರಕ್ಷನ್ ಇತ್ಯಾದಿ ನಡೆಯುತ್ತದೆ. ಕೆಲವು ಸೃಜನಶೀಲ ಬರಹಗಾರರು, ವಿಮರ್ಶಕರು ತಮ್ಮನ್ನು ತಾವು ಗಟ್ಟಿ ಎಂದುಕೊಳ್ಳುತ್ತಿರುತ್ತಾರೆ. ಕೃತಿಗಳನ್ನು ವಾಚ್ಯಗೊಳಿಸಿದವರ ಬಗ್ಗೆ ಅವರ ಅವರವರ ನೆಲೆ ಮತ್ತು ಮನೋಧರ್ಮಗಳ ಅನುಸಾರದಲ್ಲಿ ಕಾಲೆಳೆಯುತ್ತಿರುತ್ತಾರೆ.
Related Articles
Advertisement
“ಏಕವಚನ ಇಲ್ಲವಾಗಿಸಿದರೆ, ಬಹುವಚನ ಹುಟ್ಟಿಕೊಳ್ಳುತ್ತದೆ, ನಮ್ಮದೊಂದು ಹಾಳೆ ತೆಗೆದುಕೊಂಡು ಹೋದರೆ ನಮ್ಮದೇನೂ ಕಿತ್ಕೊಳ್ಳೋಕೆ ಆಗಲ್ಲ’- ನಾಟಕದಲ್ಲಿರುವ ಇಂಥ ಮಾತುಗಳು ನಾಟಕಕಾರರಲ್ಲಿರುವ ಸಿಟ್ಟನ್ನು ಕಾಣಿಸುತ್ತವೆ ಎನ್ನುವುದು ನಿಜವಾದರೂ ಬಹಳ ಕಡೆ ಗೇಲಿಯ ಮಾತುಗಳಾಗಿ, ಕೇವಲ ರಿಯಾಕ್ಷನ್‌ಗಳ ನೆಲೆಯಲ್ಲೇ ಉಳಿದು ವಾಚ್ಯ ಅನಿಸಲು ಆರಂಭಿಸಿದವು.
ಇದು ಒಟ್ಟಾರೆಯಾಗಿ ನಾಟಕ ನೋಡಿದ ಮೇಲೆ ಕಟ್ಟಿಕೊಂಡ ಚಿತ್ರ. ಆದರೆ, ಕೆಲವು ಅಪಾಯಗಳು ನಾಟಕದ ರಚನೆಯ ಒಳಗೇ ಅಡಕಗೊಂಡಿವೆ. ಕೃತಿಯೊಂದರ ನಿರ್ಮಾಣಕ್ಕೆ ಆಳವಾದ ಅಧ್ಯಯನ ಬೇಕು ನಿಜ; ನಾಟಕದಲ್ಲಿ ಈ ಅಧ್ಯಯನ ವಿಪರೀತವಾಗಿಯೇನೋ ಇದೆ. ಆದರೆ, ಇದೇ ತೊಡಕೂ ಆಗಿ ಪರಿಣಮಿಸಿದೆ. ಈ ಆಳವಾದ ಅಧ್ಯಯನ ನಟರಾಜ್ ಹುಳಿಯಾರ್‌ರಿಂದ ವಿಪರೀತ ನೋಟ್ಸ್ ಮಾಡಿಸಿದಂತಿದೆ.
ತನ್ನ ನಾಟಕದ ಕೇಂದ್ರವನ್ನು ರೂಪಕದಲ್ಲಿ ಹೇಳಲಿಕ್ಕೆ ಅಗತ್ಯವಿರುವಷ್ಟನ್ನು ಹೆಕ್ಕಿ ಹೇಳಲು ಈ ನೋಟ್ಸ್ ಬಿಟ್ಟಿಲ್ಲ ಎನ್ನುವುದು ಪ್ರತಿ ಹಂತದಲ್ಲಿ ಸ್ಪಷ್ಟವಾಗುತ್ತಿತ್ತು. ಎಲ್ಲ ವಿವರಗಳಿಗೂ ಜಾಗ ಕಲ್ಪಿಸುವ ಭರದಲ್ಲಿ ನಟರಾಜ್ ಹುಳಿಯಾರ್‌ರಿಗೆ ನಾಟಕದಲ್ಲಿ ದೃಶ್ಯಗಳನ್ನು ಕಟ್ಟಲು ಸಾಧ್ಯವಾಗಿಲ್ಲ. ಕಟ್ಟಿರುವ ದೃಶ್ಯಗಳಲ್ಲಿ ವಾಚ್ಯ ಮೀರಲು ಸಾಧ್ಯವಾಗಿಲ್ಲ. ನೋಟ್ಸ್‌ನ ವಿವರಗಳು ಒತ್ತಾಯಿಸಿರುವ ಪರಿಣಾಮವಾಗಿ ಅವು ದೃಶ್ಯಗಳನ್ನು ಅತಿಕ್ರಮಿಸಲು ಮುಂದಾಗಿವೆ.
ಕ್ಲಾಸ್ ರೂಮಿನ ಪಾಠದಂತೆ ವಿವರಣೆಗೆ ನಿಲ್ಲುತ್ತವೆ. ಇಂಥ ಕಡೆ ನಾಟಕವನ್ನು ಸಹಿಸಿಕೊಳ್ಳುವುದು ಕಷ್ಟವಾಯಿತು. ಕೆಲವರಿಗೆ ಸೂಚ್ಯ ಹೆಸರುಗಳಿಟ್ಟು ಅವರನ್ನು ತಮ್ಮ ಶೈಲಿಯಲ್ಲಿ ಗೇಲಿಗೆ ಒಳಪಡಿಸಿದ್ದು ಕೆಲವರಿಗೆ ಕನೆಕ್ಟ್ ಆಗಿ ಚಪ್ಪಾಳೆ ಮತ್ತು ಶಿಳ್ಳೆಯ ಸದ್ದು ಧ್ವನಿಸಿದ ಮಾತ್ರಕ್ಕೆ ಒಳ್ಳೆಯ ನಾಟಕ- ಅದರಲ್ಲೂ ವಿಮರ್ಶಕರ ಪರಿಭಾಷೆಯಲ್ಲೇ ಹೇಳುವುದಾದರೆ,
ರೂಪಕಗಳನ್ನು ಅಡಕಗೊಳಿಸಿಕೊಂಡಿರುವ ನಾಟಕ ಎಂದು ಕರೆಯಲು ಬರುವುದಿಲ್ಲ. ಈ ಎಲ್ಲಕ್ಕಿಂತ ಮತ್ತೂ ಆಶ್ಚರ್ಯದ ಸಂಗತಿಯೆಂದರೆ, ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿಯವರಿಗೂ ಪ್ರಯೋಗದಲ್ಲಿ ಇಲ್ಲಿನ ವಾಚ್ಯಗಳನ್ನು ದೂರ ಸರಿಸಲು ಸಾಧ್ಯವಾಗಿಲ್ಲ. ಆದರೆ, ವಾಚ್ಯದ ನಿರೂಪಣೆಗಳನ್ನೂ ಅವರು ಕೆಲವು ಜನಪದ ಪ್ರಕಾರದ ಕಲೆಗಳ ಮೂಲಕ ಹೇಳಿಸಿ ಚೂರು ತಿಳಿಮಾಡಿದರು. ನಾಟಕದ ಹೈಲೈಟ್ ವಿನ್ಯಾಸದ್ದು.
* ಎನ್.ಸಿ. ಮಹೇಶ್