Advertisement
ಈ ಟ್ಯಾಂಕ್ ಶಿಥಿಲಗೊಂಡು ಹಲವು ವರ್ಷ ಕಳೆದರೂ ದುರಸ್ತಿಯೂ ನಡೆದಿಲ್ಲ, ತೆರವು ಕಾರ್ಯವೂ ನಡೆದಿಲ್ಲ. ಸಂಪೂರ್ಣ ಹಾನಿಗೊಂಡ ಟ್ಯಾಂಕ್ ಬೀಳುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಸುಮಾರು 50 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಟ್ಯಾಂಕ್, 50 ಸಾವಿರ ಲೀ. ನೀರು ಶೇಖರಣೆ ಸಾಮರ್ಥ್ಯವನ್ನು ಹೊಂದಿದೆ. ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 520 ಮನೆಗಳಿಗೆ ಈ ಟ್ಯಾಂಕ್ ಮೂಲಕವೇ ಕುಡಿಯುವ ನೀರು ಒದಗಿಸಲಾಗುತ್ತದೆ. ಹಾನಿ ಭೀತಿ
ಪಂಚಾಯತ್ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಈ ಟ್ಯಾಂಕ್ ಕುಸಿತಗೊಂಡಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಜತೆಗೆ ಜೀವ ಹಾನಿಗೂ ಕಾರಣವಾಗುವ ಸಾಧ್ಯತೆ ಇದೆ. ಸುಮಾರು 50 ಅಡಿ ಎತ್ತರದಲ್ಲಿರುವ ಈ ಟ್ಯಾಂಕ್ ಕುಸಿತಗೊಂಡರೆ ಸಮೀಪದಲ್ಲಿರುವ ಸುಮಾರು 30,000 ಲೀಟರ್ ಸಾಮರ್ಥ್ಯದ ಇನ್ನೊಂದು ಓವರ್‌ಹೆಡ್ ಟ್ಯಾಂಕ್, ಪಂಚಾಯತ್ ಕಟ್ಟಡ, ಪಂಚಾಯತ್ ವಾಣಿಜ್ಯ ಮಳಿಗೆಗಳು, ಗ್ರಾಮಕರಣಿಕರ ಕಟ್ಟಡಗಳಿಗೆ ಭಾರೀ ಪ್ರಮಾಣದ ಹಾನಿಯಾಗಲಿದೆ.
Related Articles
Advertisement
ಟ್ಯಾಂಕ್ ಬಿದ್ದರೆ ನೀರೂ ಇಲ್ಲ!ಒಂದು ವೇಳೆ ಟ್ಯಾಂಕ್ ಕುಸಿದರೆ ಪಂಚಾಯತ್ ವ್ಯಾಪ್ತಿಯ ಅಜೆಕಾರು ಪೇಟೆ, ಕೊಂಬಗುಡ್ಡೆ, ಕೈಕಂಬ, ನೂಜಿ ವಠಾರ, ಕುರ್ಪಾಡಿ ಪ್ರದೇಶ, ಪ.ಜಾತಿ, ಪ.ಪಂಗಡದ ಹಲವು ಕಾಲೊನಿಗಳ ಗ್ರಾಮಸ್ಥರಿಗೆ ಕುಡಿಯುವ ನೀರಿಗೂ ಸಂಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಹೊಸ ಟ್ಯಾಂಕ್ ನಿರುಪಯುಕ್ತ
ಕುಸಿಯುವ ಭೀತಿಯಲ್ಲಿರುವ ಟ್ಯಾಂಕ್ ಬಳಿಯಲ್ಲಿಯೇ ಸುಮಾರು 10 ವರ್ಷಗಳ ಹಿಂದೆ ಇನ್ನೊಂದು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಇದರ ಎತ್ತರವೂ ಕಡಿಮೆ ಇದೆ. ನೀರಿನ ಶೇಖರಣ ಸಾಮರ್ಥ್ಯವೂ ಕಡಿಮೆ ಇದೆ. ಇದರಿಂದ ಸಂಪೂರ್ಣ ನೀರು ಒದಗಿಸುವುದು ಕಷ್ಟಕರ. ಈ ನಿಟ್ಟಿನಲ್ಲಿ ಪಂಚಾಯತ್ ಆಡಳಿತವು ಹಳೆಯ ಟ್ಯಾಂಕನ್ನೇ ಇನ್ನೂ ನೆಚ್ಚಿಕೊಂಡಿದೆ. ಇದರಿಂದಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಹೊಸ ಓವರ್ ಹೆಡ್ ಟ್ಯಾಂಕ್ ನಿಷ್ಪ್ರಯೋಜಕವಾಗಿದೆ. ಹಲವು ಬಾರಿ ನಿರ್ಣಯ
ಗ್ರಾಮಸ್ಥರ ಮನವಿಯಂತೆ ಹಲವು ಬಾರಿ ಗ್ರಾಮಸಭೆಗಳಲ್ಲಿ ಓವರ್ ಹೆಡ್ ಟ್ಯಾಂಕ್ ದುರಸ್ತಿ ಅಥವಾ ತೆರವುಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡು ಕಾರ್ಕಳ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳಿಗೆ ಪಂಚಾಯತ್ ಆಡಳಿತ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲವಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಶೀಘ್ರ ಇನ್ನೊಂದು ಟ್ಯಾಂಕ್ ನಿರ್ಮಾಣ ಮಾಡಿ ಕುಸಿಯುವ ಹಂತದಲ್ಲಿರುವ ಟ್ಯಾಂಕ್ ಅನ್ನು ತೆರವುಗೊಳಿಸುವುದು ತುರ್ತು ಅಗತ್ಯವಾಗಿದೆ. ಜತೆಗೆ ನಿರುಪಯುಕ್ತ ಟ್ಯಾಂಕ್ ಅನ್ನು ಪರ್ಯಾಯವಾಗಿ ಬಳಕೆ ಮಾಡಲೂ ಚಿಂತಿಸಬೇಕಿದೆ. ಪ್ರತಿಕ್ರಿಯೆ ಬಂದಿಲ್ಲ
ಪಂಚಾಯತ್ ಕಟ್ಟಡದ ಸಮೀಪದಲ್ಲಿಯೇ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
-ದಿನೇಶ್ ಕುಮಾರ್, ಅಧ್ಯಕ್ಷರು, ಮರ್ಣೆ ಗ್ರಾ.ಪಂ. ಮತ್ತೆ ಮನವಿ
ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಓವರ್‌ಹೆಡ್ ಟ್ಯಾಂಕನ್ನು ಪರಿಶೀಲಿಸುವಂತೆ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಕಳೆದ 5 ವರ್ಷಗಳ ಹಿಂದೆ ಸ್ವಲ್ಪ ಮಟ್ಟಿನ ದುರಸ್ತಿ ಕಾರ್ಯ ನಡೆದಿದ್ದು ತ್ವರಿತವಾಗಿ ಟ್ಯಾಂಕ್ ಪರಿಶೀಲನೆ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.
-ತಿಲಕ್‌ರಾಜ್, ಪಿಡಿಒ, ಮರ್ಣೆ ಗ್ರಾಮ ಪಂಚಾಯತ್ ಸೂಕ್ತ ಕ್ರಮ
ಪಂಚಾಯತ್ ಆಡಳಿತದ ಮನವಿಯಂತೆ ಈ ಹಿಂದೆಯೇ ಪರಿಶೀಲನೆ ಮಾಡಲಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಸಮೀಪ ಹಲವು ಕಟ್ಟಡಗಳು ಇರುವ ಬಗ್ಗೆ ನೀರು ನೈರ್ಮಲ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅನುಮತಿ ಸಿಕ್ಕ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸತ್ಯನಾರಾಯಣ, ಸ.ಕಾ. ಎಂಜಿನಿಯರ್,
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಕಾರ್ಕಳ -ಜಗದೀಶ ಅಜೆಕಾರು