Advertisement

ಉಕ್ಕಿ ಹರಿದ ಜಡತಡಿಹಳ್ಳ: ಸಾರ್ವನಿಕರ ಪರದಾಟ

09:41 PM Oct 22, 2019 | Team Udayavani |

ಹನೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಅರಣ್ಯ ಪ್ರದೇಶ, ಬೈಲೂರು ಅರಣ್ಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಹಳ್ಳ ಕೊಳ್ಳಗಳೆಲ್ಲಾ ಉಕ್ಕಿ ಹರಿಯುತ್ತಿದ್ದು ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 38ರಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Advertisement

ಉಕ್ಕಿ ಹರಿದ ಜಡತಡಿಹಳ್ಳ: ಕೊಳ್ಳೇಗಾಲ – ಹಸನೂರು ಘಾಟ್‌ ನಡುವಿನ ರಾಜ್ಯ ಹೆದ್ದಾರಿ 38ರ ಬೋರೆದೊಡ್ಡಿ ಸಮೀಪದ ಜಡತಡಿಹಳ್ಳ ಬೆಳಗ್ಗಿನ ಜಾವ 5 ಗಂಟೆ ವೇಳೆಗೆ ಉಕ್ಕಿ ಹರಿಯುತಿತ್ತು. ನೀರು ಯಥೇತ್ಛ ಪ್ರಮಾಣದಲ್ಲಿ ಹರಿಯುತ್ತಿದ್ದುದರಿಂದ ಹಳ್ಳದ ಎರಡೂ ಬದಿಯ ವಾಹನಗಳು ಅಲ್ಲಲ್ಲಿಯೇ ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪ್ರಯಾಣಿಕರ ಪರದಾಟ: ಸುಮಾರು 8 ಗಂಟೆ ವೇಳೆಗೆ ನೀರಿನ ಹರಿವು ಕಡಿಮೆಯಾದ ಬಳಿಕ ಬಸ್‌, ಲಾರಿ ಇನ್ನಿತರ ವಾಹನಗಳ ಸಂಚಾರ ಪ್ರಾರಂಭ ವಾಯಿತು. ಕಾರು, ಇನ್ನಿತರ ಲಘು ವಾಹನಗಳ ಸಂಚಾರ ಬೆಳಗ್ಗೆ 9:30ರ ಬಳಿಕ ಪ್ರಾರಂಭವಾಯಿತು. ಆದರೆ ದ್ವಿಚಕ್ರ ವಾಹನ ಸವಾರರು ಕಳ್ಳವನ್ನು ದಾಟದ ಪರಿಸ್ಥಿತಿ ನಿರ್ಮಾಣವಾಗಿ 11 ಗಂಟೆ ತರುವಾಯ ಓಡಾಡಲು ಸಾಧ್ಯವಾಯಿತು. ಆದರೆ ನೀರಿನ ಹರಿವು ಹೆಚ್ಚಾಗಿಯೇ ಇದ್ದುದರಿಂದ ದ್ವಿಚಕ್ರ ವಾಹನದ ಸವಾರರು ಮಧ್ಯಾಹ್ನ 2 ಗಂಟೆಯವರೆಗೂ ಪ್ರಯಾಸದಿಂದಲೇ ರಸ್ತೆ ದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ತೂತುಹಳ್ಳದಲ್ಲೂ ಹೆಚ್ಚಿನ ನೀರು: ಅಲ್ಲದೆ ರಾಜ್ಯ ಹೆದ್ದಾರಿ 38ರಲ್ಲಿಯೇ ಬರುವ ತೂತುಹಳ್ಳದಲ್ಲಿಯೂ ಸಹ ನೀರಿನ ಹರಿವು ಹೆಚಾಗಿದ್ದ ಪರಿಣಾಮ ವಾಹನ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿತ್ತು. ನೆರೆ ತಮಿಳುನಾಡು ರಾಜ್ಯದ ಅರಣ್ಯ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗಿದ್ದರ ಹಿನ್ನೆಲೆ ತೂತುಹಳ್ಳದಲ್ಲಿಯೂ ಸಹ ನೀರು ಯಥೇತ್ಛವಾಗಿ ಹರಿಯುತಿತ್ತು.

ಪರಿಣಾಮ ಈ ಮಾರ್ಗದಲ್ಲಿಯೂ ಸಹ ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೇ ಈ ಭಾಗದ ಮಸಗತ್ತಿಹಳ್ಳ, ಉಡುತೊರೆಹಳ್ಳ, ಮಾಳಿಗನತ್ತ ಹಳ್ಳ ಸೇರಿದಂತೆ 12ಕ್ಕೂ ಹೆಚ್ಚು ಹಳ್ಳಗಳು ಉಕ್ಕಿ ಹರಿಯುತ್ತಿದ್ದವು. ಗ್ರಾಮಸ್ಥರ ಅಂದಾಜಿನ ಪ್ರಕಾರ ಈ ವರ್ಷದ ದೊಡ್ಡ ಮಳೆ ಇದಾಗಿದ್ದು ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿರುವುದರಿಂದ ಎಲ್ಲಾ ಹಳ್ಳಗಳು ಒಟ್ಟಿಗೆ ಹರಿಯುತ್ತಿವೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

Advertisement

ಜಲಾಶಯಗಳಿಗೆ ಹೆಚ್ಚಿದ ಒಳಹರಿವು: ಪಿ.ಜಿ.ಪಾಳ್ಯ ವನ್ಯಜೀವಿ ವಲಯ, ಬೈಲೂರು ವನ್ಯಜೀವಿ ವಲಯ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಜಡತಡಿಹಳ್ಳದ ನೀರು ಹುಬ್ಬೇಹುಣಸೇ ಜಲಾಶಯಕ್ಕೆ ಹರಿದುಬರುತ್ತಿದ್ದು, ಹುಯ್ಯಲನತ್ತದ ಉಡುತೊರೆಹಳ್ಳದ ನೀರು ಉಡುತೊರೆಹಳ್ಳ ಜಲಾಶಯಕ್ಕೆ ಹರಿದು ಬರುತ್ತಿದೆ. ಆದುದ್ದರಿಂದ ತಾಲೂಕಿನ ಹುಬ್ಬೇಹುಣಸೇ ಜಲಾಶಯ ಮತ್ತು ಅಜ್ಜೀಪುರ ಸಮೀಪದ ಉಡುತೊರೆಹಳ್ಳ ಜಲಾಶಯ ಹಳ್ಳಗಳಿಗೆ ನೀರಿನ ಒಳಹರಿವು ಹೆಚ್ಚಾಗಿವೆ.

7 ಲಕ್ಷ ರೂ.ಗೂ ಹೆಚ್ಚು ಬೆಳೆ ನಾಶ: ಲೊಕ್ಕನಹಳ್ಳಿ ಹೋಬಳಿಯ 12 ಹಳ್ಳ ಕೊಳ್ಳಗಳು ಉಕ್ಕಿ ಹರಿದಿರುವ ಹಿನ್ನೆಲೆ ಹಳ್ಳದ ಬದಿಯ ಜಮೀನುಗಳಲ್ಲಿನ ಫ‌ಸಲುಗಳು ಭಾಗಶಃ ಜಲಾವೃತವಾಗಿವೆ. ಹಳ್ಳಗಳ ಇಕ್ಕೆಲಗಳ ಜಮೀನುಗಳಲ್ಲಿ ಹಾಕಲಾಗಿದ್ದ ಜೋಳ, ಬೆಳ್ಳುಳ್ಳಿ, ಬದನೆಕಾಯಿ, ಆಲೂಗೆಡ್ಡೆ ಫ‌ಸಲುಗಳು ಜಲಾವೃತವಾಗಿದೆ. ಈ ಘಟನೆಯಿಂದಾಗಿ ಅಂದಾಜು ಸುಮಾರು 7 ಲಕ್ಷಕ್ಕೂ ಅಧಿಕ ಮೌಲ್ಯದ ಫ‌ಸಲು ಜಲಾವೃತವಾಗಿದೆ. ಆದುದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಆಂಡಿಪಾಳ್ಯ ರೈತರಾದ ರಂಗಸ್ವಾಮಿ, ಚಿನ್ನದೊರೈ, ದೊರೆಸ್ವಾಮಿ. ಬೋರೆದೊಡ್ಡಿಯ ರಂಗಶೆಟ್ಟಿ ಆಗ್ರಹಿಸಿದ್ದಾರೆ.

ಕೊಳ್ಳೇಗಾಲ – ಹಸನೂರು ಘಾಟ್‌ ಅಂತಾರಾಜ್ಯ ಹೆದ್ದಾರಿಯಲ್ಲಿ ಇರುವ ಬಹುತೇಕ ಸೇತುವೆಗಳು ಮುಳುಗು ಸೇತುವೆ ಗಳಾಗಿವೆ. 30-35 ವರ್ಷ ಹಳೆ ಸೇತುವೆಗಳಾಗಿವೆ. ಅಲ್ಲದೆ ಈ ಸೇತುವೆ ಬೊಂಬುಗಳಲ್ಲಿ ಕಸ ಕಡ್ಡಿಗಳು ಸಿಲುಕಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ನೀರು ರಸ್ತೆ, ಅಕ್ಕ-ಪಕ್ಕದ ಜಮೀನುಗಳಿಗೆ ನುಗ್ಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಬೇಕು. ಒಂದೊಮ್ಮೆ ಈ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ತರ್ತು ಸಂದರ್ಭಗಳಲ್ಲಿ ಕೊಳ್ಳೇಗಾಲಕ್ಕೆ ತೆರಳಬೇಕಾದಲ್ಲಿ 150 ಕಿ.ಮೀ. ನಷ್ಟು ಸುತ್ತು ಹಾಕಿ ಬರಬೇಕಾದ ಪರಿಸ್ಥಿತಿಯಿದೆ.
-ಸೋಮಣ್ಣ, ಹೊಸದೊಡ್ಡಿ

ಬೇಸಿಗೆ ವೇಳೆ ಈ ಭಾಗದಲ್ಲಿ ಅಂತರ್ಜಲ ಕಡಿಮೆಯಾಗಿ ಬೋರ್‌ವೆಲ್‌ಗ‌ಳಲ್ಲಿ ನೀರಿನ ಸಮಸ್ಯೆಯಾಗುತ್ತದೆ. ಅಲ್ಲದೆ ಕೆಲ ಸಂದರ್ಭಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸುತ್ತದೆ. ಮಳೆಗಾಲದ ಸಂದರ್ಭದಲ್ಲಿ ಉತ್ತಮ ಮಳೆಯಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿದು ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿಯೇ ಒಂದು ಜಲಾಶಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮವಹಿಸಬೇಕು.
-ಕೃಷ್ಣ, ಪಿ.ಜಿ.ಪಾಳ್ಯ, ಗ್ರಾಪಂ ಸದಸ್ಯ

* ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next