ಜೋಯಿಡಾ: ಏಷ್ಯಾದ ಎರಡನೇ ಅತಿ ಎತ್ತರದ ಹಿರಿಮೆಯ ಸೂಪಾ ಜಲಾಶಯ ಈ ಬಾರಿ ತುಂಬಿ ಹರಿಯುವ ಮೂಲಕ ತನ್ನೊಡಲಿನಿಂದ ಈಗ ಮೂರನೇ (1994, 2006, 2018) ಬಾರಿ ತುಂಬಿ ಹರಿದ ದಾಖಲೆ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಆ.29 ರಿಂದ ಸೆ.2 ವರೆಗೆ ಕ್ರಿಸ್‌ಗೇಟ್ ಮೂಲಕ ಹೊರಹರಿದು ಸಾವಿರಾರು ಪ್ರವಾಸಿಗರಿಗೆ ತನ್ನ ಸೌಂದರ್ಯ ದರ್ಶನ ಮಾಡಿ ಮನತಣಿಸಿತ್ತು. ದಿನನಿತ್ಯ 7 ಕ್ಯೂಸೆಕ್ ನೀರು ಹಾಲನೊರೆಯಂತೆ ಹರಿಯುವ ದೃಶ್ಯ ಮನಮೋಹಕವಾಗಿತ್ತು. ಮೂರೂ ಗೆಟ್‌ಗಳಿಗೆ ಕೆಸರಿ, ಬಿಳಿ, ಹಸಿರು ಮೂರೂ ಬಣ್ಣದ ವಿದ್ಯುತ್ ದ್ವೀಪವನ್ನಳವಡಿಸಿದ್ದು, ರಾತ್ರಿವೇಳೆ ತುಂಬಾ ಸುಂದರವಾಗಿ ರಾಷ್ಟ್ರಧ್ವಜದ ಬಣ್ಣಾಲಂಕಾರವನ್ನು ಚಿತ್ರಿಸುವ ಮೂಲಕ ಪ್ರವಾಸಿಗರ ಮನ ಸೊರೆಗೊಂಡಿತು.
ಆ.15 ರಂದು ಹಿನ್ನೀರಿನ ಒಳಹರಿವಿನ ಪ್ರಮಾಣ 35 ರಿಂದ 40 ಸಾವಿರ ಕ್ಯೂಸೆಕ್ ದಾಟುವ ಹಂತದಲ್ಲಿದ್ದ ಸಂದರ್ಭದಲ್ಲಿ ಜಲಾಶಯದ ನೀರಿನ ಎತ್ತರ 557 ಮೀ. ರಷ್ಟಿರುವಾಗಲೇ ಜಲಾಶಯ ತುಂಬಿ ಹರಿಯುವ ಸಾಧ್ಯತೆಯನ್ನು ಮನಗಂಡು ಉಸ್ತುವಾರಿ ಸಚಿವ ದೇಶಪಾಂಡೆ ಕಾಳಿ ನದಿಗೆ ಸೂಪಾ ಜಲಾಶಯದ ಮೂಲಕ ಭಾಗಿನ ಅರ್ಪಿಸಿದ್ದರು.
ಇದಾದ ನಂತರ ಹಂತಹಂತವಾಗಿ ಏರುತ್ತಾ ಬಂದ ಜಲಾಶಯದ ನೀರಿನ ಮಟ್ಟ ಕಳೆದ ಆ.29 ರಂದು 562.75 ಮೀ. ದಾಟುತ್ತಿದಂತೆ ಸಂಗ್ರಹ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಮಧ್ಯಾಹ್ನ 3 ಗಂಟೆಯಿಂದ 7 ಸಾವಿರ ಕ್ಯೂಸೆಕ್ ನಷ್ಟು ಮೇಲ್ಭಾಗದ ಕ್ರಿಸ್‌ಗೇಟ್‌ನಿಂದ ಬಿಡಲಾರಂಭಿಸಿದ್ದರು. ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ಸೆ.2 ರ ರಾತ್ರಿ 8 ಗಂಟೆಯಿಂದ ಹೊರಹರಿವನ್ನು ನಿಲ್ಲಿಸಲಾಯಿತು.
ಸದ್ಯ ಸೆ.3 ರಂದು ಸೂಪಾ ಡ್ಯಾಂ ಲೆವೆಲ್ 562.74 ಆಗಿದ್ದು, ಒಳಹರಿವಿನ ಪ್ರಮಾಣ 5600 ಕ್ಯೂಸೆಕ್ ಆಗಿದ್ದರೆ, ಪ್ರತಿನಿತ್ಯ ವಿದ್ಯುತ್ ಉತ್ಪಾದನೆಗಾಗಿ ಹೊರಹರಿವಿನ ಪ್ರಮಾಣ 4.300 ಕ್ಯೂಸೆಕ್ ಆಗಿದೆ. ಹೊರಹರಿವಿನಂದಾಗಿ ನಿತ್ಯ 2.4 ಮಿಲಿಯನ್ ಯುನಿಟ್ ಪವರ್ ಜನರೇಟ್ ಮಾಡಲಾಗುತ್ತಿದೆ. ಈಗಾಗಲೆ 5 ದಿನಗಳಿಂದ ಸೂಪಾ ಜಲಾಶಯದಿಂದ ಹೊರಹರಿದು ಬಿಡಲಾಗಿದ್ದ ಒಟ್ಟು 1.9 ಟಿಎಂಸಿ ನೀರನ್ನು ಅಂಬಿಕಾನಗರ ಡ್ಯಾಮ್‌ನಲ್ಲಿ ಶೇಖರಿಸಿಡಲಾಗಿದ್ದು, ವಿದ್ಯುತ್ ಉತ್ಪಾದನಾ ಬೇಡಿಕೆಗನುಗುಣವಾಗಿ ಬಳಸಿಕೊಳ್ಳಲಾಗುತ್ತಿದ್ದಾಗಿ ಅಧಿಕಾರಿಗಳು ತಿಳಿಸಿರುತ್ತಾರೆ.
ಸೂಪಾ ಹಿನ್ನೀರಿನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಒಳಹರಿವಿನ ಪ್ರಮಾಣ ಇಳಿದಿದ್ದರಿಂದ ಮೇನ್‌ಗೇಟ್ ಬಂದ್ ಮಾಡಿದ್ದು, ಹೊರಹರಿವು ನಿಲ್ಲಿಸಲಾಗಿದೆ. ಹಿನ್ನೀರಿನ ಪ್ರಮಾಣಕ್ಕನುಗುಣವಾಗಿ ಜನರೇಟ್ ಮಾಡಲಾಗುತ್ತಿದ್ದು, 4.300ಕ್ಯೂಸೆಕ್ ನೀರನ್ನು ಹೊರಹರಿವಿದ್ದು, 2.4 ಮಿಲಿಯನ್ ಯುನಿಟ್ ಪವರ್ ಜನರೇಟ್ ಮಾಡಲಾಗುತ್ತಿದೆ.
ಅಬ್ದುಲ್ ಮಜೀದ್
ಸ.ಕಾ.ನಿ. ಅಭಿಯಂತರ ಗಣೇಶಗುಡಿ