Advertisement

ಉಕ್ಕಿಹರಿದ ಪಯಸ್ವಿನಿ; ನದಿ ತಟದಲ್ಲಿಪ್ರವಾಹ ಭೀತಿ,ರಾಜ್ಯಹೆದ್ದಾರಿಬಂದ್

11:17 AM Aug 17, 2018 | Team Udayavani |

ಸುಳ್ಯ: ಕೊಡಗಿನ ಭಾಗಮಂಡಲದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಸುಳ್ಯದಲ್ಲಿ ಹಾದು ಹೋಗಿರುವ ಪಯಸ್ವಿನಿ ನದಿ ಉಕ್ಕಿ ಹರಿದಿದೆ. ನದಿ ತಟದ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ! ತಾಲೂಕಿನ ಇತರೆ ಭಾಗಗಳಲ್ಲಿ ಸೋಮವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದೆ. ಕುಮಾರಧಾರಾ ನದಿ, ಗೌರಿ, ಕಂದಡ್ಕ ಹೊಳೆ ಸಹಿತ ಹಳ್ಳ, ತೋಡು ತುಂಬಿ ತುಳುಕಿದೆ. ಹಲವು ಕೃಷಿ ತೋಟ, ಮನೆ ಪರಿಸರಗಳು ಜಲಾವೃತಗೊಂಡಿವೆ. ಸುಮಾರು 20 ವರ್ಷಗಳ ಬಳಿಕ ನದಿ ನೀರಿನ ಮಟ್ಟ ಈ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಮಳೆ ಹತೋಟಿಗೆ ಬಾರದಿರುವ ಕಾರಣ ಆತಂಕ ಮೂಡಿದೆ.

Advertisement

ಹೆದ್ದಾರಿ ಬಂದ್‌
ಸುಳ್ಯ-ಸಂಪಾಜೆ ರಾಜ್ಯ ಹೆದ್ದಾರಿಯ ಅರಂಬೂರು ಪಾಲಡ್ಕದಲ್ಲಿ ಪಯಸ್ವಿನಿ ನದಿ ನೀರು ರಸ್ತೆಗೆ ನುಗ್ಗಿತ್ತು. ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಗೃಹರಕ್ಷಕ ದಳದ ಸಿಬಂದಿ, ಸಾರ್ವಜನಿಕರು ಬೋಟ್‌ ಸಹಾಯದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದರು. ಸ್ಥಳೀಯ ಕಾರ್ಯಕರ್ತರ ಜತೆಗೆ ಎಸ್ಕೆಎ ಸ್ಸೆ ಸೆ ಫ್, ಎಸ್ಸೆಸೆಫ್ ಸದಸ್ಯರು ನೆರವಿನಲ್ಲಿ ಕೈ ಜೋಡಿಸಿದರು. ಮಧ್ಯಾಹ್ನ ವೇಳೆ ರಸ್ತೆಗೆ ನುಗ್ಗಿದ ನೆರೆ ನೀರು ಇಳಿಕೆ ಆಗಿ ಸಂಚಾರ ಪುನರಾರಂಭಗೊಂಡಿತ್ತು.

ಪಂಪ್‌ಹೌಸ್‌ ಬಳಿ ಏರಿಕೆ
ನಗರಕ್ಕೆ ಕುಡಿಯುವ ನೀರೋದಗಿಸುವ ಕಲ್ಲುಮುಟ್ಲು ಪಂಪ್‌ಹೌಸ್‌ ಬಳಿ ನೀರು ಅಪಾಯದ ಮಟ್ಟದಲ್ಲಿತ್ತು. ನದಿ ಸನಿಹದಲ್ಲಿರುವ ಈ ಘಟಕಕ್ಕೆ ನೆರೆ ಹಾವಳಿ ಭೀತಿ ಮೂಡಿಸಿದೆ. ಅರಂತೋಡುನಿಂದ ಕೇರಳ ಪ್ರವೇಶಿಸುವ ಮುರೂರು ತನಕವೂ ಪಯಸ್ವಿನಿ ನದಿ ಆಸುಪಾಸಿನ ಕೃಷಿ ತೋಟಗಳಿಗೆ ನೀರು ನುಗ್ಗಿದೆ.

ಕಾರ್ಖಾನೆಗೆ ನುಗ್ಗಿದ ನೀರು
ಅಡ್ಕಾರು ವರುಣ್‌ ಫ್ಯಾಕ್ಟರಿಗೆ ಮಳೆ ನೀರು ನುಗ್ಗಿತ್ತು. ಜಾಲ್ಸೂರಿನ ಬೈದರಕೊಲೆಂಜಿ ಬಾಬು ಗೌಡ ಅವರ ಮನೆ ವಠಾರದಲ್ಲಿ ಮಳೆ ನೀರು ನುಗ್ಗಿತ್ತು. ಅಡ್ಕಾರು ಬಳಿ ಹಳೆಸೇತುವೆ ಸಂಪೂರ್ಣ ಮುಳುಗಿತ್ತು. ನಗರದ ಕಂದಡ್ಕ ಹೊಳೆ ತುಂಬಿ ಹರಿದ ಪರಿಣಾಮ ಜಟ್ಟಿಪಳ್ಳ ರಸ್ತೆಯ ಕೊಡಿಯಾಲಬೈಲಿನಲ್ಲಿ ಸೇತುವೆ ಮುಳುಗುವ ಹಂತಕ್ಕೆ ತಲುಪಿತ್ತು. ಮುಂಜಾಗ್ರತೆ ಕ್ರಮವಾಗಿ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ನೀಡಲಾಯಿತು. ಪಯಸ್ವಿನಿ ನದಿ ಉಕ್ಕಿದ ಕಾರಣ ಮೊಗರ್ಪಣೆ ಮಸೀದಿಗೆ ಸೇರಿದ ದಫ‌ನ ಸ್ಥಳ ಜಲಾವೃತಗೊಂಡಿತ್ತು. ಮೊಗರ್ಪಣೆ ಬಳಿ ಪಯಸ್ವಿನಿಗೆ ಸೇರುವ ಕಂದಡ್ಕ ಹೊಳೆ ತುಂಬಿದ ಕಾರಣ, ಮೊಗರ್ಪಣೆ ಸೇತುವೆ ಬಳಿಯ ಕೆಲ ಖಾಸಗಿ ಕಟ್ಟಡದೊಳಗೂ ಹೊಳೆ ನೀರು ನುಗ್ಗಿತ್ತು.

ಸಹಾಯಕ ಆಯುಕ್ತರ ಭೇಟಿ
ರಾಜ್ಯ ಹೆದ್ದಾರಿ, ಆಶ್ರಮ ಮುಳುಗಡೆ ಸ್ಥಳಕ್ಕೆ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ನದಿ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದರು. ನೆರವಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅವರು, ಈ ಬಗ್ಗೆ ತಾಲೂಕು ದಂಡಾಧಿಕಾರಿ ಕುಂಞಮ್ಮ ಹಾಗೂ ಗ್ರಾಮಕರಣಿಕರಿಗೆ ಸೂಚನೆ ನೀಡಿದರು.

Advertisement

ಅಂತಾರಾಜ್ಯ ಸಂಪರ್ಕ ರಸ್ತೆ
ಸುಳ್ಯ-ಕಾಸರಗೋಡು ಸಂಪರ್ಕ ರಸ್ತೆ ಪರಪ್ಪೆಯಲ್ಲಿ ಪಯಸ್ವಿನಿ ನದಿ ನೀರು ರಸ್ತೆ ನುಗ್ಗಿ ಸಂಚಾರ ಸ್ಥಗಿತಗೊಂಡಿತ್ತು. ಸುಳ್ಯ-ಅಡೂರು ರಸ್ತೆಯ ಕಾಟಿಪಳ್ಳದಲ್ಲಿ ನದಿ ನೀರು ರಸ್ತೆಗೆ ನುಗ್ಗಿ ಸಂಚಾರ ಮೊಟಕುಗೊಂಡಿತ್ತು. ಇದರಿಂದ ಕೇರಳ ಸಂಪರ್ಕದ ಎರಡು ರಸ್ತೆಗಳಲ್ಲಿ ಜನರು ಪರದಾಟ ನಡೆಸಿದರು. ಕಾಟಿಪಳ್ಳದ ಬಾಬು ರಾವ್‌ ಅವರ ಮನೆಗೆ ಮಳೆ ನೀರು ನುಗ್ಗಿತ್ತು. ಗ್ರಾಮಕರಣಿಕ ಶರತ್‌, ಗ್ರಾಮ ಸಹಾಯಕ ಶಿವಣ್ಣ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮಿಥುನ್‌ ಕರ್ಲಪ್ಪಾಡಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next