Advertisement
ಇತ್ತೀಚಿನ ದಿನಗಳಲ್ಲಿ ನಕಲಿ ಪೋಸ್ಟ್‌ಗಳು ಮತ್ತು ಮಾನಹಾನಿ ಮಾಡುವಂತಹ ಸಂದೇಶಗಳ ಹರಿದಾಟ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತವಾಗುತ್ತಿದೆ. ಈ ಬೆಳವಣಿಗೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ “ಮಕ್ಕಳ ಕಳ್ಳರ’ ಸುಳ್ಳು ಸುದ್ದಿಯಿಂದಾಗಿ ದೇಶಾದ್ಯಂತ ಸಂಭವಿಸಿದ ಸಮೂಹ ಥಳಿತ, ಸಾವುಗಳೇ ಇದಕ್ಕೆ ಸಾಕ್ಷಿ.
Related Articles
Advertisement
ಪೇಯ್ಡ ನಕಲಿ ಸುದ್ದಿಗಳು ಇಂದು ಪೇಯ್ಡ ನಕಲಿ ಸುದ್ದಿಗಳು ಎಂಬ ಅತೀ ಅಪಾಯದ ವಹಿವಾಟು ಆರಂಭವಾಗಿದೆ. ಇವುಗಳು ಸಾಮಾಜಿಕ ಜಾಲಾತಾಣಗಳಲ್ಲಿ ಅತ್ಯಂತ ಹೆಚ್ಚು ಸಕ್ರಿಯವಾಗಿ ತನ್ನ “ಟಾರ್ಗೆಟ್ ಆಡಿಯನ್ಸ್’ ಅನ್ನು ತಲುಪುವ ಕೆಲಸ ಮಾಡುತ್ತಿವೆ. ಇದರಿಂದ ಯಾವುದು ನೈಜ ಸುದ್ದಿ, ಯಾವುದು ನಕಲಿ ಸುದ್ದಿ ಎಂದು ಓದುಗ ದೃಢ ನಿರ್ಧಾರಕ್ಕೆ ಬರಲಾಗದೇ ಅದರ ದಾಸನಾಗಿ ಬಿಡುತ್ತಾನೆ. ಪದೇ ಪದೇ ಆ ನಿರ್ದಿಷ್ಟ ಸುದ್ದಿಯ ಖಾತೆಗೆ ಭೇಟಿ ನೀಡಿ ಅಲ್ಲಿರುವ ಒಂದಷ್ಟು ಸುದ್ದಿಗಳನ್ನು, ಅವುಗಳ ಲಿಂಕ್‌ಗಳನ್ನು ಶೇರ್ ಮಾಡುತ್ತಾನೆ. ಇದರಿಂದ ಓದುಗರ ಅಭಿರುಚಿ ನೈಜತೆಗಿಂತ ಕಪೋಲಕಲ್ಪಿತವಾಗುತ್ತದೆ ಹಾಗೂ ಬಾಹ್ಯ ಮೂಲಗಳಿಂದ ಪ್ರಭಾವಿತ ಸುದ್ದಿಗಳು ಹೆಚ್ಚು ಕಲರ್‌ಫುಲ್ ಆಗಿ ಕಾಣಿಸುತ್ತವೆ. ಅಜಮಾಸು 60 ಪ್ರತಿಶತದಷ್ಟು ನಕಲಿ ಸುದ್ದಿಗಳು ರಾಜಕೀಯ ಪಕ್ಷಗಳ ಖಾತೆಗಳಿಂದಲೇ ಹರಿದಾಡುತ್ತಿವೆ. ರಾಜಕೀಯ ಪಕ್ಷಗಳ ಐಟಿ ಸೆಲ್‌ಗಳೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಫೇಕ್ ಸುದ್ದಿಗಳನ್ನು ಹೆಚ್ಚು ಪ್ರಸಾರ ಮಾಡುತ್ತಿವೆ. ಆಡಳಿತ ಪಕ್ಷ ವಿಪಕ್ಷಗಳ ಮೇಲೆ, ವಿಪಕ್ಷಗಳು ಆಡಳಿತದ ವಿರುದ್ಧ ಬಹಳಷ್ಟು ನಕಲಿ ಸುದ್ದಿಯನ್ನು ಸೃಷ್ಟಿಸಿ ಹರಿಬಿಡುತ್ತವೆ. ಆದರೆ ಮುಗª ಬಳಕೆದಾರರಿಗೆ ಸುಳ್ಳೆಲ್ಲವೂ ಸತ್ಯವೆನಿಸಿಬಿಡುತ್ತದೆ. ಬಹುತೇಕ ನ್ಯೂಸ್ ಚಾನೆಲ್‌ಗಳು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಕಾರ್ಯಕ್ರಮಗಳನ್ನು “ಲೈವ್ ಸ್ಟ್ರೀಮ್’ ಮಾಡುತ್ತಿವೆ. ರಾಜಕೀಯ ಪಕ್ಷಗಳ ಸುದ್ದಿಗಳು ಬಂದ ಸಂದರ್ಭದಲ್ಲಿ ಸಾಮಾಜಿಕ ತಾಣಗಳಲ್ಲಿ ಮೆಸೇಜ್‌ಗಳು, ವೃಥಾರೋಪಗಳು, ನಕಲಿ, ಇಲ್ಲಸಲ್ಲದ ಆರೋಪಗಳು ಹರಿದಾಡುತ್ತಿವೆ. ಇಂತಹ ಚಟುವಟಿಕೆಯಲ್ಲಿ ಯುವಕರೇ, ಅದರಲ್ಲೂ ವಿದ್ಯಾವಂತ ಯುವಕರೇ ಹೆಚ್ಚಿರುವುದು ಶಿಕ್ಷಣ ವ್ಯವಸ್ಥೆಯನ್ನು ನಾಚುವಂತೆ ಮಾಡಿದೆ. ವಿದ್ಯಾವಂತರಿಗೂ ಅವಿದ್ಯಾವಂತರಿಗೂ ಸಾಮಾಜಿಕ ಜಾಲತಾಣಗಳು ಭಿನ್ನವಾಗಿಲ್ಲ. ಈ ಇಬ್ಬರು ಬಳಸುವ ವಿಧಾನಗಳಲ್ಲೂ ವ್ಯತ್ಯಾಸ ಇಲ್ಲ. ಇದೊಂದು ಗಂಭೀರ ವಿಷಯವಾಗಿದ್ದು, ರಾಜಕೀಯ ಲಾಭಕ್ಕಾಗಿ, ಪೂರ್ವಗ್ರಹ ಪೀಡಿತರಾಗಿ ಇಂತಹ ಹಿತಾಸಕ್ತಿಯನ್ನು ಅಪ್ಪಿಕೊಂಡರೆ ಮುಂದೊಂದು ದಿನ ಅದು ಸೃಷ್ಟಿದವನನ್ನೇ ಸುಡುವ ಭಸ್ಮಾಸುರನಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು? 1.ರಾಜಕೀಯ ಪಕ್ಷಗಳ ಹೆಸರಿನಿಂದ ಹರಿಯುವ ನಕಲಿ ಸುದ್ದಿಗಳ ಮೇಲೆ ಸೈಬರ್ ವಿಭಾಗ ಕಣ್ಣಿಡಬೇಕು. ಸೈಬರ್ ಇಲಾಖೆಗೆ ಸಹಕಾರ ಆಗುವಂತಹ ಕಾನೂನಿನ ಅವಕಾಶಗಳನ್ನು ಸರಕಾರಗಳು ಮಾಡಿಕೊಡಬೇಕು. ಈಗಿರುವ ಕಾನೂನಿನ ತೊಡಕನ್ನು ನಿವಾರಿಸಬೇಕು. 2.ಟ್ರೋಲ್‌ಗಳ ಮೇಲೆ ಕಣ್ಣಿಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಮಾತು ಕೇಳಿಬಂದರೆ, ಆಯಾ ತಾಣಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಬಳಕೆದಾರಿಗೆ ಮನವರಿಕೆ ಮಾಡಿಕೊಡಬೇಕು. 3.ಸುದ್ದಿ ನೀಡುವ ಹೆಸರಿನೊಂದಿಗೆ ಸ್ಥಾಪಿತ ವಾದ ಕೆಲವು ಸಂಸ್ಥೆಗಳು ಬರೀ ನಕಲಿ ಸುದ್ದಿಗಳನ್ನೇ ಬಿತ್ತರ ಮಾಡುತ್ತಿವೆ. ಇಂಥವುಗಳಿಗೆ ಕಡಿವಾಣ ಬೀಳಬೇಕು. ಮುಖ್ಯವಾಗಿ ನಕಲಿ ಸುದ್ದಿಗಳು ಹೊರಬೀಳುವುದೇ ಇಂಥ ವೆಬ್‌ಸೈಟ್‌ಗಳಿಂದ. ಇವುಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತಾಗಬೇಕು. ಕಾರ್ತಿಕ್ ಅಮೈ