Advertisement

ಒಟ್ಟಾರೆ ಚೆನ್ನಾಗಿ ಬದುಕಿ!

09:38 PM Apr 14, 2019 | Sriram |

ಆಸ್ಟ್ರೇಲಿಯದ ಒಂದು ವಿಶ್ವ ವಿದ್ಯಾನಿಲಯದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಒಂದು ಸಂಶೋಧನೆ ಕುತೂಹಲಕಾರಿಯಾಗಿದೆ. ಮನಸ್ಸಿನ ಒತ್ತಡ ವನ್ನು ಕಡಿಮೆ ಮಾಡಿಕೊಳ್ಳು ವುದು ಹೇಗಪ್ಪ ಅಂತ ನಾವೆಲ್ಲ ಮತ್ತದೇ ತಲೆಯನ್ನು ಕೆಡಿಸಿ ಕೊಳ್ಳುವುದುಂಟು.ಈ ಸಂಶೋಧನೆ ಪ್ರಕಾರ ನಮ್ಮ ಸುತ್ತ ಮುತ್ತಲೂ ಇರುವ ಹಸಿರನ್ನು ಪ್ರಜ್ಞಾಪೂರ್ವಕವಾಗಿ ಹೆಚ್ಚು ಹೆಚ್ಚು ವೀಕ್ಷಿಸುತ್ತಾ ಇದ್ದರೆ ಒತ್ತಡ ನೀಗಿಕೊಳ್ಳುವುದಂತೆ. ಅದ ಕ್ಕಾಗಿ ಎಲ್ಲೋ ದಟ್ಟ ಹರಿದ್ವರ್ಣದ ಮಳೆಕಾಡನ್ನು ಹುಡುಕಿ ಹೋಗಬೇಕಾಗಿಲ್ಲ; ಮನೆ ಸುತ್ತಮುತ್ತ ಇರುವ ಮಾವಿನ ಮರವೋ ಬಿದಿರ ಹಿಂಡೋ ಕೊನೆಗೆ ಹಸಿರು ಹುಲ್ಲಾದರೂ ಸಾಕು ಎನ್ನುತ್ತದೆ ಸಂಶೋಧನೆ.

Advertisement

ಆಸ್ಟ್ರೇಲಿಯಾದ ಸಂಶೋಧನೆಗೆ ಪೂರಕವಾಗಿ ನಾವು ಅನು ಸರಿಸಬಹುದಾದ ಒಂದೆರಡು ಹವ್ಯಾಸಗಳು ಒತ್ತಡ ಕಡಿಮೆ ಮಾಡಿಕೊಳ್ಳುವಲ್ಲಿ ಮತ್ತು ತಾಳ್ಮೆ, ಏಕಾಗ್ರತೆ ಗಳಿಸಿಕೊಳ್ಳುವುದಕ್ಕೆ ನಿಮಗೂ ಸಹಕಾರಿ ಆಗಬಹುದು.

ಜೀವ ಜಗತ್ತಿಗೆ ಗಮನ
ಇದು ಪುಟಾಣಿ ನನ್ನ ಮಗಳ ಜತೆಗೂಡಿ ನಾನು ಬೆಳೆಸಿಕೊಂಡ ಹವ್ಯಾಸ. ನಮ್ಮ ಮನೆಯ ಹಿಂಭಾಗದಲ್ಲಿ ಒಂದು ರೆಂಜೆ ಹೂವಿನ ಮರ ಇದೆ. ಅದರಿಂದ ಉದುರಿದ ರೆಂಜೆ ಹೂವುಗಳನ್ನು ಆರಿಸಲು ನಾವಿಬ್ಬರೂ ಹೋಗುವುದಿದೆ. ಆಗ ತರಗೆಲೆಗಳ ಅಡಿಯಲ್ಲಿ, ಹುಲ್ಲಿನಲ್ಲಿ ಇರುವ ಜೀವಿಗಳನ್ನು ಗಮನಿಸುತ್ತೇವೆ. ದಪ್ಪ ಚಿಪ್ಪಿರುವ ಕುರುವಾಯಿ ಜಾತಿಯ ಕೀಟಗಳು, ಹುಳಗಳು, ನೆಲಗುಬ್ಬಿ, ಕಡ್ಡಿಹುಳ ಅಥವಾ ಪ್ರೇಯಿಂಗ್‌ ಮ್ಯಾಂಟಿಸ್‌, ಬಗೆಬಗೆಯ ಜೇಡಗಳು, ಇರುವೆಗಳು- ಓಹ್‌ ಅದೆಷ್ಟು ಜೀವವೈವಿಧ್ಯ ನಮ್ಮ ಸುತ್ತಮುತ್ತ ಇರುತ್ತದೆ! ಕೇವಲ ಒಂದು ಚದರ ಮೀಟರ್‌ ಜಾಗವನ್ನು ದಿಟ್ಟಿಸಿದರೆ ಕಣ್ಣಿಗೆ ಬೀಳುವ ಕ್ರಿಮಿಕೀಟಗಳು ನೂರಾರು. ಇವೆಲ್ಲವೂ ಸೃಷ್ಟಿಯ ಚೆಲುವು, ಅವೆಲ್ಲವುಗಳ ಜತೆಗೆ ನಮ್ಮದು ಸಹಬಾಳ್ವೆ ಎಂಬ ದೃಷ್ಟಿಯಿಂದ ಆ ಜೀವಿಗಳನ್ನು ಗಮನಿಸಿ. ತೊಂದರೆ ಮಾಡದೆ ಏಕಾಗ್ರತೆಯಿಂದ ನೋಡುತ್ತಾ ಇರಿ. ಈ ಅಭ್ಯಾಸ ಏಕಾಗ್ರತೆ, ತಾಳ್ಮೆ, ವಿಶಾಲ ಸೃಷ್ಟಿಯಲ್ಲಿ ಇತರೆಲ್ಲ ಜೀವಿಗಳಂತೆ ನಾವು ಎಂಬುದನ್ನು ಕಲಿಸುತ್ತದೆ.

ತಲೆ ಬಾಚುವುದು
ನಮ್ಮದೇ ತಲೆಯನ್ನಲ್ಲ; ಗಂಡಸರಾದರೆ ಹೆಂಡತಿ, ಮಗಳು, ಅಕ್ಕ ಅಥವಾ ತಂಗಿಯ ತಲೆ ಬಾಚಿ ಜಡೆ ಹೆಣೆಯುವುದು ತಾಳ್ಮೆ ಮತ್ತು ಏಕಾಗ್ರತೆಯನ್ನು ಕಲಿಸುತ್ತದೆ. ನಗಬೇಡಿ; ನಾನು ನನ್ನ ಹೆಂಡತಿಯ ತಲೆ ಬಾಚುವುದುಂಟು. ಮೊದಮೊದಲಿಗೆ ಸಿಕ್ಕು ಬಿಡಿಸುವಾಗ, ಜಡೆ ಹಾಕುವಾಗ ಕಿರಿಕಿರಿ ಆಗುತ್ತಿತ್ತು. ಬಳಿಕ ಈ ಪ್ರಕ್ರಿಯೆ ನನಗೆ ತುಂಬಾ ತಾಳ್ಮೆ,ಅಚ್ಚುಕಟ್ಟುತನವನ್ನು ಕಲಿಸಿತು.

ಇಂತಹ ಸಣ್ಣಸಣ್ಣ ಕ್ರಿಯೆಗಳು, ಚಟುವಟಿಕೆಗಳು ನಮ್ಮಲ್ಲಿ ತಾಳ್ಮೆ, ಏಕಾಗ್ರತೆಗಳನ್ನು ಹುಟ್ಟು ಹಾಕುವುದಲ್ಲದೆ ಲವ ಲವಿಕೆ, ಜೀವಂತಿಕೆಯನ್ನು ತುಂಬುತ್ತವೆ. ಇಂತಹ ನೂರಾರು ಚಟುವಟಿಕೆಗಳಿವೆ. ನನ್ನ ಹವ್ಯಾಸಗಳನ್ನು ನೀವು ಯಥಾವತ್‌ ಅನುಸರಿಸಬೇಕೆಂದಿಲ್ಲ; ಇವು ಆಹಾರಶೈಲಿ, ಉಡುಗೆ ತೊಡುಗೆಯ ಇಷ್ಟಾನಿಷ್ಟಗಳಂತೆ ವ್ಯಕ್ತಿ ನಿರ್ದಿಷ್ಟ. ನಾನೊಂದೆರಡು ಉದಾಹರಣೆಗಳನ್ನು ಕೊಟ್ಟೆನಷ್ಟೆ. ಮಾರ್ಪಾಟುಗಳನ್ನು ಮಾಡಿಕೊಳ್ಳಿ ಅಥವಾ ಹೊಸವನ್ನು ಕಂಡುಕೊಳ್ಳಿ. ಒಟ್ಟಿನಲ್ಲಿ ಚೆನ್ನಾಗಿ ಬದುಕಿ!

Advertisement

–  ಚಾರು

Advertisement

Udayavani is now on Telegram. Click here to join our channel and stay updated with the latest news.

Next