Advertisement

ಓವರ್ to ಲೇಡೀಸ್

10:36 PM Jun 26, 2019 | mahesh |

ಹೆಣ್ಣೀಗ ಆಸಕ್ತಿಯ ಹಿಂದೋಡುವ ಅರಸಿ. ಅವಳ ಕಣ್ಣಿನ ಗೊಂಬೆಯಲ್ಲಿ ಕ್ರಿಕೆಟಿನ ಚೆಂಡೂ ಮೂಡುತಿದೆ. ನಿನ್ನೆಯ ಸೀರಿಯಲ್‌ನಲ್ಲಿ ಹಾಗಾಯ್ತು, ಹೀಗಾಯ್ತು ಎಂದು ಹರಟುತ್ತಿದ್ದ ಅವಳೀಗ ಕ್ರಿಕೆಟ್‌ ವರ್ಲ್ಡ್ ಕಪ್‌ನ ಹೊತ್ತಿನಲ್ಲಿ, “ಏಯ್‌ ನಿನ್ನೆ ಮ್ಯಾಚ್‌ ನೋಡಿದ್ಯಾ?’ ಎನ್ನುತ್ತಾ, ಗೆಳತಿಯನ್ನು ಮಾತಿನ ಕ್ರೀಸಿಗೆ ಎಳೆಯುತ್ತಿದ್ದಾಳೆ. ಆಸಕ್ತಿ, ಆಲೋಚನೆಗಳಲ್ಲಿ ಪುರುಷರನ್ನು ಹೋಲುವುದು, ಅವರನ್ನು ಮೀರಿ ಪ್ರಪಂಚದ ಆಸಕ್ತಿಯೊಂದಿಗೆ ಒಂದಾಗುವುದು ಅವಳ ಈ ದಿನಗಳ ಅನುಚರಣೆ. ಈಗಿನ ಹುಡುಗಿಯರು ಕ್ರಿಕೆಟ್‌ಗೆ ಹೇಗೆ ತಮ್ಮ ಮನದ ವಿಕೆಟ್‌ ಒಪ್ಪಿಸಿದ್ದಾರೆ ಎಂಬುದಕ್ಕೆ ಇಲ್ಲಿನ ಎರಡು ತಾಜಾ ಬರಹಗಳೇ ಸಾಕ್ಷಿ…

Advertisement

ಟಿ-20 ವರ್ಲ್ಡ್ ಕಪ್‌ನ ಭಾರತ- ಪಾಕ್‌ ನಡುವಿನ ಮ್ಯಾಚ್‌ನ ಕೊನೆಯ ಓವರ್‌ನಲ್ಲಿ ನಾನು ಮ್ಯಾಚ್‌ ನೋಡುವುದನ್ನು ಬಿಟ್ಟು, ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟು, ಭಾರತದ ಗೆಲುವಿಗಾಗಿ ಬೇಡುತ್ತಾ ಕುಳಿತಿದ್ದುದು ನನಗಿನ್ನೂ ನೆನಪಿದೆ. ಅವತ್ತಿನಿಂದ, ಭಾರತ ಗೆಲ್ಲುವುದು ಡೌಟ್‌ ಅನ್ನಿಸಿದಾಗೆಲ್ಲಾ, ಮನೆಯಲ್ಲಿ ಎಲ್ಲರೂ ನನ್ನನ್ನು ತುಪ್ಪದ ದೀಪ ಹಚ್ಚಲು ಕಳುಹಿಸುತ್ತಿದ್ದರು!

– ಮಂದಾರ ಭಟ್‌, ಶೃಂಗೇರಿ
ಕ್ರಿಕೆಟ್ಟು ಬರೀ ಆಟವಷ್ಟೇ ಅಲ್ಲ, ಅದು ನಮ್ಮ ಮನೆಯ ಆರಾಧ್ಯ ದೈವ. ನನ್ನ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಜ್ಜ ಎಲ್ಲರೂ ಕ್ರಿಕೆಟ್‌ನ ಆರಾಧಕರು. ನಮ್ಮೂರಿನಲ್ಲಂತೂ ಕ್ರಿಕೆಟ್‌ ಗೆಲುವಿನ ಹೊತ್ತಿನಲ್ಲಿಯೇ ಜಾತ್ರೆಯಂತೆ ಸಂತಸ ಕಳೆಗಟ್ಟುತ್ತಿತ್ತು. ಇವತ್ತಿನ ಮ್ಯಾಚ್‌ ಏನಾಯೊ¤à..? ಸ್ಕೋರ್‌ ಎಷ್ಟಾಯೊ¤à…? ಸಚಿನ್‌ ಸೆಂಚುರಿ ಹೊಡೆದ್ನಾ?… ಹೀಗೆ ಅಕ್ಕಪಕ್ಕದ ಮನೆಯವರ ಸಂಭಾಷಣೆಯ ಭಾಗವಾಗಿತ್ತು, ಕ್ರಿಕೆಟ್‌. ಒಮ್ಮೆ ಕ್ರಿಕೆಟ್‌ನ ವಿಷಯ ಶುರು ಆದ್ರೆ, ಸಮಯದ ಪರಿವೆಯೇ ಇಲ್ಲದೆ ಚರ್ಚೆ ನಡೆಯುತ್ತಿತ್ತು. ಮಾತಿನ ಮಧ್ಯದಲ್ಲಿ ಹೆಂಡತಿ ತಂದುಕೊಟ್ಟ ಕಾಫಿಯಲ್ಲಿ ಸಕ್ಕರೆ ಸ್ವಲ್ಪ ಕಡಿಮೆ ಇದ್ದರೂ, ಇವರಿಗೆ ತಿಳಿಯುತ್ತಿರಲಿಲ್ಲ!

ಇಂಥ ಕ್ರಿಕೆಟ್‌ ಭಕ್ತರ ಕುಟುಂಬದಲ್ಲಿ ಬೆಳೆದ ನಾನು, ಆ ವಿಷಯದಲ್ಲಿ ನಾಸ್ತಿಕಳಾಗಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ನಾನು ಕ್ರಿಕೆಟ್‌ ನೋಡಲು ಶುರುಮಾಡಿದ್ದು ಸಚಿನ್‌- ಸೆಹ್ವಾಗ್‌ ಕಾಲದಲ್ಲಿ! ಅದರಲ್ಲೂ ಸಚಿನ್‌ ತೆಂಡೂಲ್ಕರ್‌ನ ಕಟ್ಟಾ ಅಭಿಮಾನಿ ನಾನು. ಆದರೆ, ಅಪ್ಪಂಗೆ ದ್ರಾವಿಡ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಅಪ್ಪ ಯಾವಾಗಲೂ, “ದ್ರಾವಿಡ್‌ ಥರ ಬೇರೆ ಯಾರಿಗೂ ಆಡೋಕೆ ಸಾಧ್ಯ ಇಲ್ಲ. ಅವನು ಅಸಾಮಾನ್ಯ ಆಟಗಾರ…’ ಅಂತೆಲ್ಲಾ ನಮ್ಮ ಮುಂದೆ ಹೇಳಿದಾಗ, ನಾನು ಕೂಡಾ- “ಸಚಿನ್ನೇ ಎಲ್ಲಾರಿಗಿಂತ ಗ್ರೇಟ್‌. ಎಲ್ಲಾ ಬೌಲರ್ಗಳೂ ಅವನನ್ನ ಕಂಡ್ರೆ ಹೆದರಿ ಕಂಗಾಲಾಗ್ತಾರೆ. ಅವನು ಪ್ರತಿ ಮ್ಯಾಚ್‌ನಲ್ಲೂ ಸೆಂಚುರಿ ಬಾರಿಸ್ತಾನೆ…’ ಹಾಗೆ ಹೀಗೆ ಅಂತೆಲ್ಲ ಹೇಳಬೇಕು ಅನ್ನಿಸಿದರೂ, ಅಪ್ಪನ ದ್ರಾವಿಡ್‌ ಪ್ರೇಮದ ಮುಂದೆ ನನ್ನ ಸಚಿನ್‌ ಪ್ರೇಮವನ್ನು ಬದಿಗಿಟ್ಟು ಸುಮ್ಮನಾಗುತ್ತಿದ್ದೆ. ದ್ರಾವಿಡ್‌ ಕೂಡಾ ನಮ್ಮವನೇ ಅಲ್ವಾ? ಹಾಗಂತ, ಬೇರೆಯವರು ಇಷ್ಟವಿಲ್ಲ ಅಂತಲ್ಲ. ಮುದ್ದು ಮುಖದ ರಿಕಿ ಪಾಂಟಿಂಗ್‌, ಕೂದಲು ಅಲ್ಲಾಡಿಸುತ್ತಾ ಬಾಲು ತಂದು ಎಲ್ಲೆಂದರಲ್ಲಿ ಎಸೆಯುವ ಮಾಲಿಂಗ, ಸಿಡಿಲ ಮರಿ ಎಬಿಡಿ ಇವರೆಲ್ಲ ನನ್ನ ಕ್ರಿಕೆಟ್‌ ಜಗತ್ತನ್ನು ಆಳಿದವರೇ.

ಚಿಕ್ಕಮ್ಮನ ಮಾಸ್ಟರ್‌ ಪ್ಲಾನ್‌
ಈ ಕ್ರಿಕೆಟ್‌ ನಮ್ಮನ್ನು ಸಂಕಷ್ಟಕ್ಕೆ ಈಡು ಮಾಡಿದ್ದೂ ಇದೆ. ಭಾರತದ ಮ್ಯಾಚ್‌ ಇರುವಾಗ ತೋಟಕ್ಕೆ ಹೋಗಲೇಬೇಕಾದ ಸ್ಥಿತಿ ಬಂದ್ರೆ, ಎಷ್ಟು ಕಷ್ಟ ಆಗೋದಿಲ್ಲ ಹೇಳಿ. ಅದಕ್ಕೂ ನಮ್ಮ ಚಿಕ್ಕಮ್ಮ ಒಂದು ಪರಿಹಾರ ಕಂಡುಹಿಡಿದಿದ್ದರು. ನಮ್ಮನೆಯ ರೇಡಿಯೋಗೆ ಒಂದು ಅಂಗಿ ಹೊಲಿದು, ಅಂಗಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ದಪ್ಪದ ಹಾರದ ಥರ ಬಟ್ಟೆಯನ್ನು ಜೋಡಿಸಿ ಚಿಕ್ಕಪ್ಪನಿಗೆ ಕೊಟ್ಟಿದ್ರು. ಈಗಿನವರು ಐ.ಡಿ. ಕಾರ್ಡು ನೇತು ಹಾಕಿಕೊಳ್ಳುವ ಹಾಗೆ, ಚಿಕ್ಕಪ್ಪ ರೇಡಿಯೋವನ್ನು ನೇತು ಹಾಕಿಕೊಂಡು ಗದ್ದೆಗೆ ಹೋಗಿ, ಕ್ರಿಕೆಟ್‌ ಕಾಮೆಂಟರಿ ಕೇಳ್ತಾ ಗದ್ದೆ ಕೆಲಸ ಮಾಡುತ್ತಿದ್ದ. ನಮ್ಮೂರಲ್ಲಿ ಆಗೆಲ್ಲಾ ಪವರ್‌ ಕಟ್‌ ಅನ್ನೋ ಹೆಸರಲ್ಲಿ ದಿನಕ್ಕೆ 6 ಗಂಟೆ ಕರೆಂಟ್‌ ಕಟ್‌ ಮಾಡ್ತಿದ್ದರು. ಭಾರತದ ಮ್ಯಾಚ್‌ ನಡೆಯೋ ಸಮಯದಲ್ಲಿ ಪವರ್‌ ಕಟ್‌ ಆಗಿಬಿಟ್ಟರೆ, ನಮ್ಮ ಹಳ್ಳಿಯ ಪ್ರತೀ ಮನೆಯಿಂದಲೂ ಶೃಂಗೇರಿಯ ಕೆ.ಇ.ಬಿ.ಗೆ ಫೋನು ಹೋಗುತ್ತಿತ್ತು. ಆತ ನಮ್ಮ ಕಷ್ಟ ನೋಡಲಾರದೆ ಮ್ಯಾಚ್‌ ಇರುವಾಗ ಪವರ್‌ ಕಟ್‌ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದ!

Advertisement

ತುಪ್ಪದ ದೀಪ, ಮಸಾಲ್‌ ದೋಸೆ
ಟಿ-20 ವರ್ಲ್ಡ್ ಕಪ್‌ನ ಭಾರತ- ಪಾಕ್‌ ನಡುವಿನ ಮ್ಯಾಚ್‌ನ ಕೊನೆಯ ಓವರ್‌ನಲ್ಲಿ ನಾನು ಮ್ಯಾಚ್‌ ನೋಡುವುದನ್ನು ಬಿಟ್ಟು, ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟು, ಭಾರತದ ಗೆಲುವಿಗಾಗಿ ಬೇಡುತ್ತಾ ಕುಳಿತಿದ್ದುದು ನನಗಿನ್ನೂ ನೆನಪಿದೆ. ಅವತ್ತಿನಿಂದ, ಭಾರತ ಗೆಲ್ಲುವುದು ಡೌಟ್‌ ಅನ್ನಿಸಿದಾಗೆಲ್ಲಾ, ಮನೆಯಲ್ಲಿ ಎಲ್ಲರೂ ನನ್ನನ್ನು ತುಪ್ಪದ ದೀಪ ಹಚ್ಚಲು ಕಳುಹಿಸುತ್ತಿದ್ದರು! ಯುವರಾಜ್‌ ಸಿಂಗ್‌ 6 ಎಸೆತಕ್ಕೆ, 6 ಸಿಕ್ಸರ್‌ ಹೊಡೆದಾಗ, ಯುವಿಯ ಉಗ್ರ ಭಕ್ತನಾಗಿದ್ದ ತಮ್ಮ, ಹಠ ಮಾಡಿ ಮನೆಯಲ್ಲಿ ಮಸಾಲೆ ದೋಸೆ ಪಾರ್ಟಿ ಮಾಡಿಸಿ ಗೆಳೆಯರನ್ನೆಲ್ಲ ಕರೆದಿದ್ದ. ಅವತ್ತು ನಾವೆಲ್ಲರೂ ಯುವರಾಜ್‌ ಸಿಂಗ್‌ ಹೆಸರಲ್ಲಿ ಮಸಾಲೆ ದೋಸೆ ತಿಂದಿದ್ದು ಈಗಲೂ ನೆನಪಿದೆ.

ಕ್ರಿಕೆಟ್‌ ಮುಂದೆ ಎಲ್ಲವೂ ಶೂನ್ಯ
ಭಾರತ 2011ರಲ್ಲಿ ವಿಶ್ವಕಪ್‌ ಗೆದ್ದು, ತಂಡದವರೆಲ್ಲ ಸಚಿನ್‌ನನ್ನು ಹೆಗಲ ಮೇಲೆತ್ತಿ ಮೆರವಣಿಗೆ ಮಾಡಿದ್ದನ್ನು ನೋಡಿ, ನನಗಾದ ಖುಷಿಗೆ ಪಾರವೇ ಇರಲಿಲ್ಲ. ಸಚಿನ್‌ ಕಾಲದಿಂದ ಹಿಡಿದು ಇಂದಿನ ಧೋನಿ, ಕೊಹ್ಲಿ ಕಾಲದವರೆಗೂ ಕ್ರಿಕೆಟ್‌ ನನ್ನ ಬದುಕಿನ ಒಂದು ಭಾಗವೇ ಆಗಿದೆ. ಎಷ್ಟೇ ವೈಮನಸ್ಯವಿದ್ದರೂ ಕ್ರಿಕೆಟ್‌ ವಿಷಯ ಬಂದಾಗ, ಇಡೀ ದೇಶ ಒಂದಾಗುತ್ತದೆ, ಕ್ರಿಕೆಟ್‌ ಸುದ್ದಿ ಓದುವಾಗ ದಿನಪತ್ರಿಕೆ ಸದ್ದಿಲ್ಲದೇ ಇಬ್ಬರು ಓದುಗರ ಒಂದೇ ಪತ್ರಿಕೆಯಾಗುತ್ತದೆ, ಅಂಗಡಿಯೊಂದರ ಟಿ.ವಿ. ಪರದೆಯ ಮೇಲಿನ ಕ್ರಿಕೆಟ್‌ ಆಟವು ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ಒಂದೆಡೆ ಸೇರಿಸುತ್ತದೆ. ಅದಕ್ಕೇ ಹೇಳುವುದು ಕ್ರಿಕೆಟ್‌ ಆಟವಲ್ಲ; ಅದೊಂದು ಧರ್ಮ ಅಂತ!

ಗಂಡನಿಗಿಂತ ಜಾಸ್ತಿ ಕ್ರಿಕೆಟ್‌ ಆಸ್ವಾದಿಸುವೆ…

ನಮ್ಮ ವಯಸ್ಸಿನ ಹುಡುಗಿಯರು ನೀನು ಸಲ್ಮಾನ್‌ ಖಾನ್‌, ನಾನು ಐಶ್ವರ್ಯ ರೈ, ಇಬ್ಬರೂ ಗಂಡ ಹೆಂಡತಿ ಆಟ ಆಡೋಣ ಅಂತ ತಮಗೆ ತಿಳಿದ ಹಾಗೆ ಆಟವಾಡ್ತಿರಬೇಕಾದರೆ, ನಾನು ಕ್ರಿಕೆಟ್‌ ಪ್ಯಾಡನ್ನು ಸುತ್ತಿ ಬ್ಯಾಟು ಹಿಡಿದು ಜಗತ್ತನ್ನೇ ಗೆದ್ದವಳ ರೀತಿ ಬೀಗುತ್ತಿದ್ದೆ…

– ನಮ್ರತಾ ಶೇಖರ್‌
ನವೆಂಬರ್‌ ತಿಂಗಳು. ಬೆಳಗ್ಗೆ ಎಂಟಕ್ಕೆ ಸೂರ್ಯ ಬಂದಮೇಲೆ ಎದ್ದರೂ ಕೊರೆಯುವ ಚಳಿ. ಅಂಥದ್ದರಲ್ಲಿ ನಾನು ಏಳ್ತಿದ್ದಿದ್ದು ಬೆಳಗ್ಗೆ 5ಕ್ಕೆ! ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು ಡಿಸ್ಟ್ರಿಕr… ಮೈದಾನಕ್ಕೆ ಅಪ್ಪನ ಹಿಂದೆ ಸ್ಕೂಟರ್‌ನಲ್ಲಿ ಪ್ರಯಾಣ. ಹೋದಕೂಡಲೆ ಬೃಹತ್‌ ಗಾತ್ರದ ಮೈದಾನಕ್ಕೆ ಒಂದಿಷ್ಟು ಸುತ್ತು ಹಾಕೋದು. ಅದೆಂಥದೋ ವಾರ್ಮ್ಅಪ್‌ ಅಂತೆ! ನಂತರ ಶುರು ಆಟದ ಅಭ್ಯಾಸ. ನಮ್ಮ ಪುಟ್ಟ ಪುಟ್ಟ ಕೈ, ಕಾಲುಗಳಿಗೆ ಸರಿಹೊಂದುವಂತೆ ಇರುವ ಪ್ಯಾಡುಗಳನ್ನೆ ಸುತ್ತಿಕೊಂಡು ಕೈಯಲ್ಲಿ ಬ್ಯಾಟನ್ನೋ, ನಮ್ಮ ಕೈಗಳಿಗೆ ಸರಿಯಾಗುವಂತೆ ಗಾತ್ರವನ್ನು ಹೊಂದಿಸಿರುವ ಲೆದರ್‌ ಬಾಲನ್ನೋ ಹಿಡಿದ ತಕ್ಷಣ ನಮ್ಮ ದೇಹದೊಳಗೆ ಸಚಿನ್‌, ಸೆಹ್ವಾಗ್‌, ಜಾವಗಲ್‌ ಶ್ರೀನಾಥರು ಆವಾಹನೆಯಾಗುತ್ತಿದ್ದರು! ಬೆಳಗ್ಗೆ ಐದೂವರೆಯಿಂದ ಏಳೂವರೆವರೆಗೆ ಹೀಗೆ ಕ್ರಿಕೆಟ್‌ ಪ್ರ್ಯಾಕ್ಟೀಸ್‌ ಮಾಡಿ, ನಂತರ ಮನೆಗೆ ಹೋಗಿ ಶಾಲೆಗೆ ತಯಾರಾಗಿ ಹೊರಡೋದು ನಿತ್ಯದ ದಿನಚರಿಯಾಗಿತ್ತು. ಕ್ರಿಕೆಟ್‌ ಎನ್ನುವ ಈ ಮಾಯಾಜಾಲ, ನನ್ನ ಬದುಕನ್ನು ಹೀಗೆ ಆವರಿಸಿಕೊಳ್ಳುವಾಗ ನನಗಿನ್ನೂ 9 ವರ್ಷ!

ಅದು 2007ರ ಸಮಯ. ಭಾರತ ತಂಡ 50 ಓವರ್‌ಗಳ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿ, ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಇಡೀ ದೇಶದ ಮೇಲೊಂದು ದುಃಖದ ಛಾಯೆ. ಎಲ್ಲರ ಮುಖದಲ್ಲೂ ಏನೋ ಕಳಕೊಂಡ ಭಾವ. ಅಷ್ಟೊತ್ತಿಗೆ ಈ ಇಪ್ಪತ್ತು ಓವರ್‌ನ ವಿಶ್ವಕಪ್‌ ಶುರುವಾಗಿತ್ತು. ಅಲ್ಲಿಯವರೆಗೆ ಬಹುಶಃ ಒಂದೇ ಒಂದು 20 ಓವರ್‌ನ ಪಂದ್ಯವನ್ನಾಡಿದ್ದ ಭಾರತದ ತಂಡದ ಬಗ್ಗೆ ಯಾರಿಗೂ ನಂಬಿಕೆ ಇರಲಿಲ್ಲ. ಅದಕ್ಕಾಗೇ ಉದ್ದ ಕೂದಲಿನ ಧೋನಿಯ ತಲೆಗೆ ನಾಯಕನ ಪಟ್ಟ ಕಟ್ಟಿ, ಮೈದಾನಕ್ಕೆ ಕಳುಹಿಸಿದ್ದರು. ಆತ ಗೆದ್ದು ಬಂದಾಗ ಕ್ರಿಕೆಟ್‌ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿತ್ತು. ಮುಂದೆ ಐಪಿಎಲ್‌ ಎನ್ನುವ ದೈತ್ಯ ತಲೆ ಎತ್ತಿತು. ಕ್ರಿಕೆಟ್‌ ಬದುಕಿನ ಈ ಎಲ್ಲ ಆಗುಹೋಗುಗಳನ್ನು ನಾನು ಆಟ ಆಡುತ್ತಾ, ನೋಡುತ್ತಾ ಗಮನಿಸುತ್ತಿದ್ದೆ. ಎಲ್ಲ ಕಳಕೊಂಡ ಮೇಲೂ, ಗೆಲ್ಲಲು ಏನೋ ಒಂದು ಉಳಿದೇ ಇರುತ್ತದೆ ಎಂಬ ಪಾಠ ಕಲಿತಿದ್ದು ಕ್ರಿಕೆಟ್‌ನಿಂದಲೇ.

ನನ್ನ ಪ್ರಕಾರ ಕ್ರಿಕೆಟ್‌ ಮತ್ತು ಬದುಕಿನ ನಡುವೆ ಜಾಸ್ತಿ ವ್ಯತ್ಯಾಸವಿಲ್ಲ. ನಮ್ಮ ವಯಸ್ಸಿನ ಹುಡುಗಿಯರು ನೀನು ಸಲ್ಮಾನ್‌ ಖಾನ್‌, ನಾನು ಐಶ್ವರ್ಯ ರೈ. ಇಬ್ಬರೂ ಗಂಡ ಹೆಂಡತಿ ಆಟ ಆಡೋಣ ಅಂತ ತಮಗೆ ತಿಳಿದ ಹಾಗೆ ಆಟವಾಡ್ತಿರಬೇಕಾದರೆ, ನಾನು ಕ್ರಿಕೆಟ್‌ ಪ್ಯಾಡನ್ನು ಸುತ್ತಿ ಬ್ಯಾಟು ಹಿಡಿದು ಜಗತ್ತನ್ನೇ ಗೆದ್ದವಳ ರೀತಿ ಬೀಗುತ್ತಿ¨ªೆ. ಹೆಲ್ಮೆಟ್‌ನ ಗ್ರಿಲ್ಲುಗಳ ಮಧ್ಯ ಕಾಣುತ್ತಿದ್ದ ಜಗತ್ತಿಗೆ ಹೊಸತೊಂದು ಸೌಂದರ್ಯವಿತ್ತು! ಪರಿಸ್ಥಿತಿಗಳು ಸರಿಹೊಂದಿದ್ದರೆ ಬದುಕಿನ ದಿಕ್ಕು ಬೇರೆಯಾಗುತ್ತಿತ್ತೇನೋ… ಆದರೂ ನನ್ನೊಳಗಿನ ಕ್ರಿಕೆಟ್ಟು ಮಾತ್ರ ಅಳಿದಿಲ್ಲ. ಈಗಲೂ ಪಂದ್ಯ ನೋಡುವಾಗ ನನ್ನ ಗಂಡನಿಗಿಂತ ಜಾಸ್ತಿ ನಾನೇ ಆಟವನ್ನು ಹಚ್ಚಿಕೊಂಡು ಹಾರಾಡ್ತೀನಿ…

ಬದುಕಿನ ಹಲವು ಜಂಜಡಗಳ ನಡುವೆ, ಆಟದ ಮೂಲಕ ಬದುಕನ್ನೇ ಹೇಳಿಕೊಡುವ ಕ್ರಿಕೆಟ್ಟು ಇಷ್ಟವಾಗಲು ಇನ್ನೂ ಬಹಳಷ್ಟು ಕಾರಣಗಳಿವೆ. ನನ್ನ ನೆಚ್ಚಿನ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಟಿ-20 ಪಂದ್ಯದ ಗಡಿಬಿಡಿಯನ್ನು ವಿವರಿಸುವಾಗ ಒಂದು ಮಾತು ಹೇಳ್ತಾರೆ- “ಯಾವಾಗಲೂ ನೀವು ಅಂದುಕೊಂಡಿದ್ದಕಿಂತ ಜಾಸ್ತಿ ಸಮಯ ಇರುತ್ತದೆ… ಆಟದಲ್ಲೂ, ಬದುಕಿನಲ್ಲೂ…’

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next