Advertisement

ಮಣಿಪಾಲ: ಮೂರು ಕಡೆಗಳಲ್ಲಿ ಓವರ್‌ಹೆಡ್‌ ಟ್ಯಾಂಕ್‌

01:50 AM Dec 19, 2018 | Team Udayavani |

ಉಡುಪಿ: ಹೊಸದಾಗಿ ಅನುಷ್ಠಾನಗೊಳ್ಳಲಿರುವ ‘ವಾರಾಹಿ-ಉಡುಪಿ ಕುಡಿಯುವ ನೀರು ಪೂರೈಕೆ ಯೋಜನೆ’ಯಲ್ಲಿ ಮಣಿಪಾಲದ ಅಂಗನವಾಡಿ, ಮಂಚಿ ಮತ್ತು ಮಣ್ಣಪಳ್ಳ ಸಮೀಪ ತಲಾ ಒಂದು ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. ಇದು ಮಣಿಪಾಲ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಪರಿಹರಿಸಲಿದೆ ಎಂದು ನಗರಸಭೆಯ ಪರಿಸರ ಎಂಜಿನಿಯರ್‌ ರಾಘವೇಂದ್ರ ಅವರು ಹೇಳಿದ್ದಾರೆ.

Advertisement

ಮಂಗಳವಾರದಂದು ಮಣಿಪಾಲ
ಆರ್‌.ಎಸ್‌.ಬಿ. ಸಭಾಂಗಣದಲ್ಲಿ ಜರಗಿದ ವಾರಾಹಿಯಿಂದ ಉಡುಪಿಗೆ ಕುಡಿಯುವ ನೀರಿನ ಪೂರೈಕೆ ಯೋಜನೆ ಕುರಿತಾದ ಸಾರ್ವಜನಿಕ ಸಮಾಲೋಚನ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ‘ಮಣಿಪಾಲದ ಹಲವೆಡೆ ಮಳೆಗಾಲದಲ್ಲಿಯೂ ನಿರಂತರ ನೀರು ಪೂರೈಕೆಯಾಗುತ್ತಿಲ್ಲ. ಕೆಲವೇ ಗಂಟೆಗಳ ಕಾಲ ಮಾತ್ರ ದೊರೆಯುತ್ತದೆ’ ಎಂದು ರವೀಂದ್ರ ನಾಯಕ್‌ ಹಾಗೂ ಇತರ ಕೆಲವು ಮಂದಿ ಸ್ಥಳೀಯರು ದೂರಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಅವರು ‘ಮಳೆಗಾಲದಲ್ಲಿ ನೀರಿನ ಸಮಸ್ಯೆ ಇಲ್ಲ. ಸ್ವರ್ಣಾ ನದಿಯಲ್ಲಿ 106 ಟಿಎಂಸಿ ನೀರು ಲಭ್ಯವಿರುತ್ತದೆ. ಆದರೆ ನವೆಂಬರ್‌ ಅನಂತರ ನಾಲ್ಕು ತಿಂಗಳುಗಳ ಕಾಲ ನೀರಿನ ತೊಂದರೆಯಾಗುತ್ತದೆ. ನಗರದಲ್ಲಿ ಬೆಳಗ್ಗಿನ 5ರಿಂದ 8 ಗಂಟೆಗಳ ಕಾಲ ಏಕಕಾಲಕ್ಕೆ 15 ಎಂಎಲ್‌ಡಿ ನೀರಿನ ಬಳಕೆಯಾಗುತ್ತದೆ. ಆದರೆ ಬಜೆಯಲ್ಲಿ ಅಷ್ಟು ನೀರು ಪಂಪ್‌ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲೆಡೆ ನಿರಂತರ ನೀರು ಪೂರೈಕೆ ಅಸಾಧ್ಯವಾಗುತ್ತಿದೆ. ನೂತನ ವಿತರಣಾ ವ್ಯವಸ್ಥೆ ಅನುಷ್ಠಾನಗೊಂಡ ಅನಂತರ ನಿರಂತರ ನೀರು ಪೂರೈಕೆ ಸಾಧ್ಯವಾಗಲಿದೆ’ ಎಂದರು.

ಎತ್ತರದ ಪ್ರದೇಶಗಲ್ಲಿ ನೀರು ಪೂರೈಕೆ ಸಮಸ್ಯೆ ಇದ್ದು ಇದಕ್ಕೆ ಪರಿಹಾರ ಒದಗಿಸಬೇಕು. ಮಣಿಪಾಲದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಕೂಡ ಸರಿಪಡಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ನರಸಿಂಹ ನಾಯಕ್‌ ಮನವಿ ಮಾಡಿದರು. ಮಂಚಿ ಶಾಲೆಯ ಬಳಿ ನೀರಿನ ಪೈಪ್‌ ತುಂಡಾಗಿ ಸಮಸ್ಯೆಯಾಗಿದೆ ಎಂದು ಸ್ಥಳೀಯ ನಿವಾಸಿ ನಿತ್ಯಾನಂದ ನಾಯಕ್‌ ಹೇಳಿದರು. ಈ ಸಭೆಯ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಹಾಗಾಗಿ ಮತ್ತೂಮ್ಮೆ ಸಮಾಲೋಚನ ಸಭೆ ನಡೆಸಬೇಕು ಎಂಬ ಒತ್ತಾಯ ಸಭೆಯಿಂದ ಕೇಳಿಬಂತು.

ಪೌರಾಯುಕ್ತ ಆನಂದ ಕಲ್ಲೊಳಿಕರ್‌, ನಗರ ಸಭೆಯ ಸದಸ್ಯರಾದ ಮಣಿಪಾಲದ ಕಲ್ಪನಾ ಸುಧಾಮ, ಸರಳೇಬೆಟ್ಟಿನ ವಿಜಯಲಕ್ಷ್ಮೀ, ಈಶ್ವರ ನಗರದ ಮಂಜುನಾಥ  ಶೆಟ್ಟಿಗಾರ್‌, ಸಗ್ರಿಯ ಭಾರತಿ ಪ್ರಶಾಂತ್‌, ಅಶೋಕ್‌ ನಾಯಕ್‌, ಕೆಯುಐಡಿಎಫ್ಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಕೃಷ್ಣಯ್ಯ ಉಪಸ್ಥಿತರಿದ್ದರು. ಕರುಣಾಕರ ಕಾರ್ಯಕ್ರಮ ನಿರ್ವಹಿಸಿದರು. ಜಿಕೆಡಬ್ಲೂé ಕನ್ಸಲ್ಟೆನ್ಸಿಯ ಶಿವರಾಂ ಮಾಹಿತಿ ನೀಡಿದರು.

ನೀರು ಯಥೇಚ್ಛ ಲಭ್ಯ
ನಗರಸಭೆಯ ಮಾಜಿ ಅಧ್ಯಕ್ಷ ಕುಶಲ ಶೆಟ್ಟಿ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಎಂಜಿನಿಯರ್‌ ಅವರು ‘ವಾರಾಹಿಯಲ್ಲಿ ಯಥೇಚ್ಛ ನೀರಿದೆ. ಲಭ್ಯವಿರುವ ನೀರಿನ ಶೇ. 0.47ರಷ್ಟು ಮಾತ್ರ ನೀರು ಉಡುಪಿ ನಗರಕ್ಕೆ ಸಾಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next