ಒಂದು ಊರಿನಲ್ಲಿ ಒಬ್ಬ ಮೀನುಗಾರನಿದ್ದ. ಒಂದು ದಿನ ಅವನ ಬಲೆಯಲ್ಲಿ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಅದನ್ನು ಮೀನುಗಾರ ಬಲೆಯಿಂದ ಬಿಡಿಸಿ ಎತ್ತಿಕೊಂಡ. ಮೀನು ಮಾತನಾಡತೊಡಗಿತು, “ಅಯ್ನಾ… ನನ್ನನ್ನು ಬಿಟ್ಟುಬಿಟ್ಟರೆ ನಿನಗೆ ಮೂರು ವರಗಳನ್ನು ಕೊಡುತ್ತೇನೆ’ ಎಂದಿತು. ಮೀನು ಮಾತನಾಡುವುದನ್ನು ಕೇಳಿ ಮೀನುಗಾರನಿಗೆ ಆಶ್ಚರ್ಯವಾಯಿತು. ಅವನು ಮೀನನ್ನು ಮತ್ತೆ ನೀರಲ್ಲಿ ಬಿಡಲು ಒಪ್ಪಿದನು. ಅವನಿಗೆ ಮೂರು ವರಗಳು ಸಿಕ್ಕವು.
ಆ ಮೂರು ವರಗಳನ್ನು ಮನೆಗೆ ಹೋದ ನಂತರ ಬಳಸಿಕೊಂಡರಾಯಿತು ಎಂದುಕೊಂಡ ಮೀನುಗಾರ. ಮೀನಿನ ಬುಟ್ಟಿಯನ್ನು ಕತ್ತೆಯ ಮೇಲೆ ಹೊರಿಸಿ ಮನೆಯ ಕಡೆಗೆ ಹೊರಟ. ಕತ್ತೆ ಬಹಳ ನಿಧಾನವಾಗಿ ನಡೆಯುತ್ತಿತ್ತು. ಮೀನುಗಾರನಿಗೆ ಸಿಟ್ಟು ಬಂದು ಅದಕ್ಕೆ ಚೆನ್ನಾಗಿ ಹೊಡೆದ. ಅದು ಮತ್ತಷ್ಟು ನಿಧಾನವಾಗಿ ನಡೆಯತೊಡಗಿದಾಗ ಮೀನುಗಾರನ ಸಿಟ್ಟು ನೆತ್ತಿಗೇರಿತು. ಅವನು “ಏ ಕತ್ತೆ ನೀನು ಸತ್ತು ಹೋಗಬಾರದೇ’ ಎಂದ. ಅದು ತಕ್ಷಣ ಸತ್ತು ಬಿದ್ದಿತು. ಅವನ ಮೊದಲ ವರ ತೀರಿತ್ತು. ಕತ್ತೆ ಬದುಕಿ ಬರಲಿ ಎಂದರೆ ಇನ್ನೊಂದು ವರ ವ್ಯರ್ಥವಾಗುತ್ತದೆ ಎಂದು ಮೀನುಗಾರ ಕತ್ತೆಯನ್ನು ಅಲ್ಲೇ ಬಿಟ್ಟು ಮನೆ ಸೇರಿದ.
ಮನೆಯಲ್ಲಿ ಅವನ ಹೆಂಡತಿ “ಕತ್ತೆ ಎಲ್ಲಿದೆ…?’ ಎಂದು ಕೇಳಿದಳು. ಮೀನುಗಾರ ಉತ್ತರ ಕೊಡಲೇ ಇಲ್ಲ. ಆಕೆಗೂ ಸಿಟ್ಟು ಹತ್ತಿ “ರೀ… ನೀವು ನನ್ನೊಡನೆ ಏಕೆ ಮಾತನಾಡುತ್ತಿಲ್ಲಾ…?’ ಎಂದು ಏರುಧ್ವನಿಯಲ್ಲಿ ಕೇಳಿದಳು. ಮೀನುಗಾರನಿಗೆ ತಾಳ್ಮೆತಪ್ಪಿ, “ಏ ಹುಚ್ಚಿ… ನೀನೇಕೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಿ… ನಿನ್ನ ಬಾಯಿ ಮುಚ್ಚಿಹೋಗಬಾರದೇ…?’ ಎಂದು ಅವನು ಅಬ್ಬರಿಸಿದ. ಮರುಕ್ಷಣವೇ ಹೆಂಡತಿಯ ಬಾಯಿ ಮುಚ್ಚಿಹೋಯಿತು. ಮೀನುಗಾರನ ಎರಡನೇ ವರ ಹೀಗೆ ತೀರಿತು. ಮೀನುಗಾರನ ಬಳಿ ಇನ್ನೊಂದೇ ವರ ಉಳಿದಿತ್ತು.
ದೊಡ್ಡ ವರ ಪಡೆಯುವ ಬಯಕೆ ಅವನಿಗಿತ್ತು. ಆದರೆ ಹೆಂಡತಿಯ ಸ್ಥಿತಿ ನೋಡಲು ಅವನಿಂದಾಗಲಿಲ್ಲ. ಅವನು ಅವಳಿಗೆ ಬಾಯಿ ಬರಲಿ ಎಂದು ಕೇಳಿಕೊಂಡ. ಮರುಕ್ಷಣವೇ ಅವಳು ಮಾತನಾಡತೊಡಗಿದಳು. ಮೀನುಗಾರ ತನಗಿದ್ದ ಮೂರೂ ವರಗಳನ್ನು ಬಳಸಿದ್ದ. ಆದರೆ, ಅವುಗಳಿಂದ ತಾನಂದುಕೊಂಡಂತೆ ಪ್ರಯೋಜನ ಪಡೆಯುವುದು ಸಾಧ್ಯವಾಗಲಿಲ್ಲ. ಮನುಷ್ಯನಿಗೆ ಸಿಟ್ಟು, ಅತಿಯಾಸೆ ಒಳಿತನ್ನು ಮಾಡುವುದಿಲ್ಲ ಎನ್ನುವುದು ಮೀನುಗಾರನಿಗೆ ತಡವಾಗಿ ಅರ್ಥವಾಯಿತು.
– ಸಹನಾ ಹೆಗ್ಗಳಗಿ, ಬಾಗಲಕೋಟ