Advertisement

ವಾಹನ ದಟ್ಟಣೆ : ಸುಗಮ ಸಂಚಾರಕ್ಕೆ ಅಡ್ಡಿ, ಆತಂಕ

01:50 AM Aug 29, 2018 | Karthik A |

ಕಾಸರಗೋಡು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾಸರಗೋಡು ನಗರದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಸುಗಮ ಸಾರಿಗೆಗೆ ಅಡ್ಡಿಯಾಗುತ್ತಿದ್ದು, ವಾಹನ ದಟ್ಟಣೆಯಿಂದ ಸಮಸ್ಯೆಗೆ ಗುರಿಯಾಗುತ್ತಿದೆ. ವಾಹನ ದಟ್ಟಣೆಯ ಪರಿಣಾಮವಾಗಿ ನಗರದ ಕೆಲವೆಡೆ ಸಾಗಬೇಕಾದರೆ ಗಂಟೆಕಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕಾಸರಗೋಡು ಹೊಸ ಬಸ್‌ ನಿಲ್ದಾಣ, ಎಂ.ಜಿ.ರಸ್ತೆ, ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣ ಪರಿಸರ ಮೊದಲಾದೆಡೆಗಳಲ್ಲಿ ವಾಹನ ದಟ್ಟಣೆಯಿಂದಾಗಿ ಸಮಸ್ಯೆ ನಿತ್ಯ ಅನುಭವಿಸುವಂತಾಗಿದೆ. ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವಂತೆ ವಿವಿಧ ಸಂಘ ಸಂಸ್ಥೆಗಳು ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಈ ವರೆಗೂ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾಹನ ದಟ್ಟಣೆಯ ಕಾರಣಕ್ಕೆ ಕಾಸರಗೋಡು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಗಂಟೆಕಟ್ಟಲೆ ರಸ್ತೆಯಲ್ಲೇ ಉಳಿದು ಬಿಡುವಂತಾಗಿದ್ದು, ಹಬ್ಬಹರಿದಿನಗಳು ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.

ತಲಪಾಡಿ ಹೆದ್ದಾರಿಯಲ್ಲೂ ಬ್ಲಾಕ್‌
ಕಾಸರಗೋಡು ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ಸಾಮಾನ್ಯವಾಗಿದ್ದು, ಇದೀಗ ಕಾಸರಗೋಡು – ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬ್ಲಾಕ್‌ ಸಾಮಾನ್ಯವಾಗಿದೆ. ರಾ. ಹೆದ್ದಾರಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗದೆ ಹತ್ತು ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ರಾ.ಹೆದ್ದಾರಿಯುದ್ದಕ್ಕೂ ಸೃಷ್ಟಿಯಾಗಿರುವ ಮೃತ್ಯು ಕೂಪಗಳಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದಾಗಿ ವಾಹನಗಳು ಗಂಟೆಕಟ್ಟಲೇ ರಸ್ತೆಯಲ್ಲೇ ಉಳಿದು ಬಿಡುವುದು ಸಾಮಾನ್ಯವಾಗಿದೆ. ವಾಹನ ದಟ್ಟಣೆಯಿಂದಾಗಿ ವಾಹನಗಳಿಗೆ ಸುಗಮವಾಗಿ ಸಾಗಲು ಸಾಧ್ಯವಾಗದೆ ವಾಹನಗಳು ಪರಸ್ಪರ ಒಂದಕ್ಕೊಂದು ಒರಸಿ ಚಾಲಕರ ಮಧ್ಯೆ ವಾಗ್ವಾದ ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದಾಗಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತ್ತಿದೆ.

ಟ್ರಾಫಿಕ್‌ ಸಿಗ್ನಲ್‌ ಅವ್ಯವಸ್ಥೆ
ಕಾಸರಗೋಡು ನಗರದಲ್ಲಿ ಸುವ್ಯವಸ್ಥಿತವಾಗಿ ಸಾರಿಗೆ ವ್ಯವಸ್ಥೆಯಿಲ್ಲ. ನಗರದ ಸಿಗ್ನಲ್‌ಗ‌ಳು ಸರಿಯಾಗಿ ಎಲ್ಲೂ ಕಾರ್ಯಾಚರಿಸುತ್ತಿಲ್ಲ. ಟ್ರಾಫಿಕ್‌ ಪೊಲೀಸರ ಕೊರತೆಯೂ ಸಮಸ್ಯೆ ಇಮ್ಮಡಿಗೆ ಕಾರಣವಾಗಿದೆ. ಕಾಸರಗೋಡು- ಕಾಂಞಂಗಾಡ್‌ – ಚಂದ್ರಗಿರಿ ಜಂಕ್ಷನ್‌ನಲ್ಲೂ ವಾಹನ ದಟ್ಟಣೆಯಿಂದಾಗಿ ಜನರಿಗೂ ರಸ್ತೆ ಬದಿಯಲ್ಲಿ ನಡೆದಾಡಲೂ ಸಾಧ್ಯ ವಾಗುವುದಿಲ್ಲ. ನಗರದಲ್ಲಿ ದಾರಿ ಹೋಕರಿಗೆ ಹಾಕಿರುವ ಜೀಬ್ರಾ ಲೈನ್‌ಗಳು ಮಾಸಿ ಹೋಗಿದ್ದು, ಇದರಿಂದಾಗಿ ನಡೆದು ಹೋಗುವವರಿಗೆ ಸಮಸ್ಯೆ ಎದುರಾಗಿದೆ. ಕರಂದಕ್ಕಾಡು, ನುಳ್ಳಿಪ್ಪಾಡಿ, ಕಾಸರಗೋಡು ಪರಿಸರ ರಸ್ತೆಗಳಲ್ಲಿ ವಾಹನ ಅಪಘಾತ ನಿತ್ಯ ಘಟನೆಯಾಗಿದೆ.

ಕಾಸರಗೋಡು ಹೊಸ ಬಸ್‌ ನಿಲ್ದಾಣ ದೊಳಗೆ ಕೆಲವು ರಾಜ್ಯ ಸಾರಿಗೆ ಬಸ್‌ಗಳು ಮತ್ತು ಖಾಸಗಿ ಬಸ್‌ಗಳು ಪ್ರವೇಶಿಸದೆ ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸುವುದರಿಂದ ವಾಹನ ದಟ್ಟಣೆಗೆ ಇನ್ನಷ್ಟು ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದರಿಂದಾಗಿ ಪ್ರಯಾಣಿಕರಿಗೆ ರಸ್ತೆ ದಾಟಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ವಾಹನಗಳು ಢಿಕ್ಕಿ ಹೊಡೆಯುತ್ತಿರುವುದು ಸಾಮಾನ್ಯವಾಗಿದೆ. ಕಾಂಞಂಗಾಡ್‌ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಸ್‌ಗಳು ಕಾಸರಗೋಡು ಹೊಸ ಬಸ್‌ ನಿಲ್ದಾಣದೊಳಗೆ ಪ್ರವೇಶಿಸದೆ ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸುತ್ತಿರುವುದರಿಂದಾಗಿ ಅಪಘಾತಕ್ಕೂ ಕಾರಣವಾಗುತ್ತಿದೆ. ಪ್ರಯಾಣಿಕರನ್ನು ಇಳಿಸಲು ಕೆಲವೊಮ್ಮೆ ರಸ್ತೆ ಮಧ್ಯದಲ್ಲೇ ಬಸ್‌ ನಿಲ್ಲಿಸುತ್ತಿರುವುದು ಕಾಣಬಹುದು.

Advertisement

ಆ. 30: ರಸ್ತೆ ಸುರಕ್ಷಾ ಸಮಿತಿ ಸಭೆ
ಕಾಸರಗೋಡು ನಗರದಲ್ಲಿ ವಾಹನ ದಟ್ಟಣೆ ಮತ್ತು ವಾಹನ ಅಪಘಾತವನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರಸ್ತೆ ಸುರಕ್ಷಾ ಸಮಿತಿಯ ಸಭೆ ಆ.30 ರಂದು ಬೆಳಗ್ಗೆ 11.30 ಕ್ಕೆ ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್‌ ಹಾಲ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಅಗತ್ಯದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಈ ಸಭೆಯ ಬಳಿಕವಾದರೂ ನಗರದಲ್ಲಿ ವಾಹನ ದಟ್ಟಣೆ ನಿವಾರಿಸಿ ಸುಗಮ ಸಾರಿಗೆ ಕಲ್ಪಿಸಬೇಕಾದುದು ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next