Advertisement

ಪಡೀಲು ರೈಲ್ವೇ ಮೇಲ್ಸೇತುವೆ: ನಿತ್ಯವೂ ಟ್ರಾಫಿಕ್‌ ಜಾಮ್‌

06:55 AM Jul 17, 2017 | Team Udayavani |

ಮಹಾನಗರ: ನೀವು ಮಂಗಳೂರಿನಿಂದ ಪಡೀಲು ಮೂಲಕ ಅಗತ್ಯ ಕೆಲಸಕ್ಕೆ ಹೊರ ಹೋಗುವುದಾದರೆ ನಿಗದಿತ ವೇಳೆಗಿಂತ ಕನಿಷ್ಠ ಎರಡು ಗಂಟೆ ಮೊದಲೇ ಹೊರಡಿ. ಇಲ್ಲದಿದ್ದರೆ ನೀವು ಸಿಕ್ಕಿ ಹಾಕಿಕೊಳ್ಳುತ್ತೀರಿ. ನಿಮ್ಮ ಉದ್ದೇಶಿತ ಕೆಲಸವೂ ತಪ್ಪಿ ಹೋಗುತ್ತದೆ. ಯಾಕೆಂದರೆ, ಪಡೀಲು ರೈಲ್ವೇ ಬಿಡ್ಜ್ ಬಳಿಯ ಹೆದ್ದಾರಿ ಅವ್ಯವಸ್ಥೆಯಿಂದ ನಿತ್ಯವೂ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಅದನ್ನು ದುರಸ್ತಿ ಪಡಿಸಿ ಸಮಸ್ಯೆ ಬಗೆಹರಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇದು ಗಂಭೀರ ಸಮಸ್ಯೆಯಾಗಿ ತೋರುತ್ತಿಲ್ಲ. ಆದ ಕಾರಣ ನಾಗರಿಕರೇ ತಮ್ಮ ದಿನಚರಿಯಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಜನಪ್ರತಿನಿಧಿಗಳು ಅಧಿಕಾರಿಗಳ ಸಭೆಗಳಲ್ಲಿ ಒಮ್ಮೆ ಘರ್ಜಿಸಿ ಬಿಡುತ್ತಾರೆ. ಬಳಿಕ ಏನಾಯಿತು ಎಂದು ನೋಡುವುದಿಲ್ಲ. ಅದರ ಪರಿಣಾಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಬಾರಿ ಮಳೆಗಾಲ ಆರಂಭ‌ವಾದಂದಿನಿಂದ ಪ್ರತಿದಿನ ಪಡೀಲಿನಲ್ಲಿ ಟ್ರಾಫಿಕ್‌ ಜಾಮ್‌ ಕಂಡುಬರುತ್ತಿದೆ. ರೈಲ್ವೇ ಬ್ರಿಡ್ಜ್ ಬಳಿ ಹೆದ್ದಾರಿ ಪೂರ್ತಿ ಹದಗೆಟ್ಟಿರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾತ್ರ ಅದನ್ನು ದುರಸ್ತಿ ಪಡಿಸಿ ಸಮಸ್ಯೆ ಬಗೆಹರಿಸುವ ಕೆಲಸಕ್ಕೆ ಮುಂದಾಗಿಲ್ಲ. ಅವರನ್ನು ಕೇಳಬೇಕಾದವರೂ ಪರಸ್ಪರ ವೈಯಕ್ತಿಕ ಟೀಕೆಯಲ್ಲಿ ತೊಡಗಿರುವುದರಿಂದ ನಾಗರಿಕರ ಸಂಕಷ್ಟ ತಪ್ಪಿಲ್ಲ.

Advertisement

ಚರಂಡಿ ಎಂಬುದೇ ಇಲ್ಲ !
ಈ ಮೇಲ್ಸೇತುವೆ ಬಳಿ ಮಳೆ ನೀರು ಹರಿಯಲು ಚರಂಡಿಯೇ ಇಲ್ಲ. ಇದ್ದರೂ ಅದರಲ್ಲಿ ನೀರು ಹೋಗುತ್ತಿಲ್ಲ. ಕೆಲವು ಕಡೆ ಚರಂಡಿಯಲ್ಲಿ ಹೂಳು ತುಂಬಿದ್ದರೆ, ಇನ್ನು ಕೆಲವೆಡೆ ನಡೆದ ಅರ್ಧಂಬರ್ಧ ಕಾಮಗಾರಿಯಿಂದಾಗಿ ಅವ್ಯವಸ್ಥೆ ಉಂಟಾಗಿದೆ. ಹೀಗಾಗಿ ನೀರೂ ಹೆದ್ದಾರಿಯಲ್ಲೇ ಹರಿಯುತ್ತಿದೆ. ಇದರಿಂದ ರಸ್ತೆಯ ಡಾಮರು ಪೂರ್ತಿ ಎದ್ದು ಹೋಗಿ ಬೃಹತ್‌ ಹೊಂಡಗಳು ಸೃಷ್ಟಿಯಾಗಿವೆ. ವಾಹನಗಳು ಸುಗಮವಾಗಿ ಸಂಚರಿಸಲಾಗುತ್ತಿಲ್ಲ. ನಿಧಾನಗತಿಯಲ್ಲಿ ಸಾಗಬೇಕಿರುವುದರಿಂದ ಪಡೀಲು ಬ್ರಿಡ್ಜ್ನ ಎರಡೂ ಬದಿಗಳಲ್ಲಿ ಸಾಗಿ ಬಂದ ವಾಹನ ದಟ್ಟಣೆ ಹೆಚ್ಚಿ ಟ್ರಾಫಿಕ್‌ ಜಾಮ್‌ ಆಗುತ್ತಿದೆ.

ಹೊಸ ಮೇಲ್ಸತುವೆ ಲಭ್ಯವಿಲ್ಲ
ಪಡೀಲಿನಲ್ಲಿ ನಿರ್ಮಾಣಗೊಂಡಿರುವ ಮೇಲ್ಸೇತುವೆ ಸಂಚಾರಕ್ಕೆ ಇನ್ನೂ ಲಭ್ಯವಾಗದ ಪರಿಣಾಮ ಇಲ್ಲಿ ಟ್ರಾಫಿಕ್‌ ಸಮಸ್ಯೆ ಬಿಗಡಾಯಿಸಿದೆ. ಇದು ಪೂರ್ಣ ಪ್ರಮಾಣದಲ್ಲಿ ಲಭ್ಯವಾದರೆ ಮಾತ್ರ ಸಮಸ್ಯೆಗೆ ಮುಕ್ತಿ ಸಿಗಬಹುದು. ಸೇತುವೆಯ ಕಾಮಗಾರಿ ಆರಂಭ‌ವಾಗಿ ಹಲವು ವರ್ಷಗಳೇ ಕಳೆದರೂ, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಮಣ್ಣು ಹೆದ್ದಾರಿಗೆ
ಪಡೀಲಿನಲ್ಲಿ ಹೆದ್ದಾರಿಗೆ ಅಡ್ಡಲಾಗಿ ಹಾದು ಹೋಗಿರುವ ರೈಲ್ವೇ ಹಳಿಯ ಇಕ್ಕೆಲಗಳಲ್ಲಿ ಮಣ್ಣು ಹಾಕಿರುವುದೂ ಈ ಸಮಸ್ಯೆಗೆ ಮತ್ತೂಂದು ಕಾರಣವಾಗಿದೆ. ಕಳೆದ ಬೇಸಗೆಯಲ್ಲಿ ಹಳಿಯ ಬದಿಗೆ ಲೋಡ್‌ಗಟ್ಟಲೆ ಮಣ್ಣು ಸುರಿಯಲಾಗಿದ್ದು, ಅದು ಮಳೆಗೆ ರಸ್ತೆಗೆ ಬಾರದಂತೆ ವ್ಯವಸ್ಥೆ ಮಾಡಿಲ್ಲ. ಆದ ಕಾರಣ, ಮಣ್ಣು ರಸ್ತೆಗೆ ಮಳೆ ನೀರಿನೊಂದಿಗೆ ಹರಿದು ಬರುತ್ತಿದೆ. ಇದು ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದೆ.

ಪೊಲೀಸರು ಹೈರಾಣ.!
ನಗರ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಸಂಭ‌ವಿಸಿದರೆ ಅದು ಒಂದು ಪ್ರದೇಶಕ್ಕೆ ಸೀಮಿತವಾಗುವುದಿಲ್ಲ. ಇಡೀ ನಗರಕ್ಕೆ ಹಬ್ಬುತ್ತದೆ. ಪ್ರಸ್ತುತ ಪಡೀಲಿನ ಟ್ರಾಫಿಕ್‌ ಜಾಮ್‌ನಿಂದ ಪೊಲೀಸರು ಹೈರಾಣಾಗಿದ್ದಾರೆ. ಐದಾರು ಪೊಲೀಸರು, ಆಫೀಸರ್, ಹೈವೇ ಪ್ಯಾಟ್ರೊಲ್‌ ವಾಹನವೂ ನಿತ್ಯ ಪಡೀಲಿನಲ್ಲಿ ಟ್ರಾಫಿಕ್‌ ನಿಯಂತ್ರಣದ ಕೆಲಸ ಮಾಡುತ್ತಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗುವುದರಿಂದ ಏನೂ ಮಾಡಲಾಗದು ಎನ್ನುತ್ತಾರೆ ಪೊಲೀಸರು.

Advertisement

ಹೆದ್ದಾರಿ ಹೊಂಡಗಳಿಂದ ಸಮಸ್ಯೆ
ಹೆದ್ದಾರಿಯಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನಗಳು ಆಮೆಗತಿಯಲ್ಲಿ ಸಾಗುವುದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಪೊಲೀಸ್‌ ಇಲಾಖೆಯ ವತಿಯಿಂದ ಎನ್‌ಎಚ್‌ಎಐನವರಿಗೆ ಪತ್ರ ಹಾಗೂ ದೂರವಾಣಿ ಮೂಲಕವೂ ರಸ್ತೆ ದುರಸ್ತಿಗೆ ತಿಳಿಸಲಾಗಿದೆ. ದುರಸ್ತಿಯ ಭರವಸೆ ನೀಡಿ ಸುಮ್ಮನಾಗುತ್ತಾರೆ. ಹೀಗಾಗಿ ಟ್ರಾಫಿಕ್‌ ಜಾಮ್‌ ತಪ್ಪಿಸಲು ಸಾಧ್ಯವಾಗುತ್ತಿಲ್ಲ.
– ತಿಲಕ್‌ಚಂದ್ರ, ಎಸಿಪಿ, ಟ್ರಾಫಿಕ್‌ ಪೊಲೀಸ್‌, ಮಂಗಳೂರು

ಸಭೆೆಯಲ್ಲಿ ಹುಲಿಗಳಿವರು
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ ಅನುದಾನದ ಕಾಮಗಾರಿಯ ಕುರಿತು ಕೆಡಿಪಿ ಸಭೆೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಹುಲಿಗಳಂತೆ ಘರ್ಜಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಅಧಿಕಾರಿಗಳು ಬೀಸುವ ದೊಣ್ಣೆಯಲ್ಲಿ ತಪ್ಪಿಸಿಕೊಳ್ಳಲು, ಬೇಗ ಮುಗಿಸುತ್ತೇವೆ ಎಂದು ತಲೆಯಾಡಿಸುತ್ತಾರೆ. ಆದರೆ ಮತ್ತೆ ಅದೇ ವಿಷಯ ಮುಂದಿನ ಸಭೆಯಲ್ಲಿ ಚರ್ಚೆಯಾಗುತ್ತದೆಯೇ ಹೊರತು ಸಮಸ್ಯೆ ಬಗೆಹರಿದಿರುವುದಿಲ್ಲ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next