ಗುಡಿಬಂಡೆ: ತಾಲೂಕಿನ ಭತ್ತಲಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಓವರ್ ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ಭತ್ತಲಹಳ್ಳಿ, ಹನುಮಂತಪುರ ಸೇರಿ ಇತರೆ ಗ್ರಾಮದಲ್ಲಿನ ಮನೆಗಳು ಬಿರುಕು ಬೀಳುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿಯೇ ಜೀವನ ಸಾಗಿಸಬೇಕಾಗಿದೆ.
ತಾಲೂಕಿನ ದಪ್ಪರ್ತಿ ಗ್ರಾಪಂ ವ್ಯಾಪ್ತಿಯ ಭತ್ತಲಹಳ್ಳಿ ಮತ್ತು ಹನುಮಂತಪುರ ಗ್ರಾಮಗಳಿಗೆ ಹೊಂದಿಕೊಂಡಿರುವಂತೆ ಕಂತಾರ‌್ಲಹಳ್ಳಿ ಗ್ರಾಮದ ಸರ್ವೆ ನಂಬರ್ 25 ರಲ್ಲಿ ಎರಡು ಕಲ್ಲು ಗಣಿಗಾರಿಕೆಗಳು ತಲೆ ಎತ್ತಿದ್ದು, ಇಲ್ಲಿ ಸಂಜೆಯಾಗುತ್ತಿದ್ದಂತೆ ಓವರ್ ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ಮನೆಗಳು ಬಿರುಕು ಬೀಳುತ್ತಿವೆ, ಬ್ಲಾಸ್ಟಿಂಗ್ ಶಬ್ದಕ್ಕೆ ಮನೆಯಲ್ಲಿರುವ ಎಲ್ಲಾ ಪಾತ್ರೆಗಳು ಕೆಳಗೆ ಬೀಳುತ್ತಿವೆಂದು ಗ್ರಾಮಸ್ಥರು ದೂರಿದ್ದಾರೆ.
ಪಟಾಕಿ ಇರುವ ನಿರ್ಬಂಧ ಬ್ಲಾಸ್ಟಿಂಗ್‌ಗೆ ಯಾಕಿಲ್ಲ: ಸರ್ಕಾರ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಆಗುತ್ತದೆ ಎಂದು ನಿರ್ಬಂಧ ಹೇರಿದ್ದಾರೆ. ಆದರೆ, ಗಣಿಗಾರಿಕೆಗಳಲ್ಲಿ ಇತಿ ಮಿತಿ ಇಲ್ಲದೆ ಬ್ಲಾಸ್ಟಿಂಗ್ ಮಾಡುತ್ತಿರು ವುದಕ್ಕೆ ಏಕೆ ನಿರ್ಬಂಧ ಹೇರುತ್ತಿಲ್ಲ ಎನ್ನು ವುದು ಜನರ ಪ್ರಶ್ನೆಯಾಗಿದೆ. ಬಲಾಡ್ಯರಿಗೊಂದು ನ್ಯಾಯ, ಜನರಿಗೆ ಒಂದು ನ್ಯಾಯ ಮಾಡಲಾಗುತ್ತಿದೆ ಎನ್ನು ವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಭತ್ತಲಹಳ್ಳಿ ಗ್ರಾಮಕ್ಕೆ ಅಂಟಿಕೊಂಡಂತೆ ಇರುವ ಕಲ್ಲು ಗಣಿಗಾರಿಕೆಯಲ್ಲಿ ಓವರ್ ಬ್ಲಾಸ್ಟಿಂಗ್ ಮಾಡುತ್ತಿರುವ ಕುರಿತು ತಹಶೀಲ್ದಾರ್ ಮತ್ತು ಶಾಸಕರಿಗೂ ತಿಳಿಸಿದ್ದೇವೆ. ಆದರೆ ಅವರು ನಮ್ಮ ಮಾತು ಕಿವಿಗೂ ಸಹ ಹಾಕಿಕೊಳ್ಳುತ್ತಿಲ್ಲ, ಕೂಡಲೇ ಜಿಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಸಮಸ್ಯೆ ಸರಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗಣಿಗಾರಿಕೆಗೆ ಅಧಿಕಾರಿಗಳು ಸಾಥ್: ಪ್ರತಿನಿತ್ಯ ನಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳಿಗೆ ತಿಳಿಸಿದರು ಸಹ ಪ್ರಯೋಜನೆ ಆಗು ತ್ತಿಲ್ಲ. ಕನಿಷ್ಟ ಪಕ್ಷ ಅವರು ಬಂದು ಪರಿಶೀಲನೆ ಯನ್ನು ಮಾಡಿಲ್ಲ. ಗ್ರಾಮದ ಪಕ್ಕದಲ್ಲೆ ಗಣಿಗಾರಿಕೆ ಅನುಮತಿ ನೀಡಿದರೆ ನಮ್ಮ ಪರಿಸ್ಥಿತಿ ಏನು? ಯಾರೋ ಬಂದು ಇಲ್ಲಿ ನಮಗೆ ತೊಂದರೆ ನೀಡಿ, ಅವರು ಹಣಗಳಿಸಿ ಕೊ ಳ್ಳು ತ್ತಿದ್ದಾರೆ. ಅವರಿಗೆ ಬೆಂಬಲ ವಾಗಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಗಳು ಸಹ ಸಾಥ್ ನೀಡು ತ್ತಿರುವುದು ನೋವಿನ ಸಂಗತಿ. ಇನ್ನಾದರೂ ಅಧಿ ಕಾರಿಗಳು ಎಚ್ಚೆತ್ತುಕೊಂಡು ಬ್ಲಾಸ್ಟಿಂಗ್ ಮಾಡದಂತೆ ಆದೇಶ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ನಿಯಮ ಗಾಳಿಗೆ ತೂರಿದ ಅಧಿಕಾರಿಗಳು: ಗ್ರಾಮಸ್ಥರು ಗಣಿಗಾರಿಕೆ ಮಾಲೀಕರಿಗೆ ತಿಳಿಸಿದರು ಪ್ರಯೋಜ ನವಾಗಿಲ್ಲ. ನಮಗೆ ಸರ್ಕಾರ ಮತ್ತು ಅಧಿಕಾರಿ ಗಳು ಆದೇಶ ನೀಡಿದ್ದಾರೆ. ಅದರ ಪ್ರಕಾರ ನಾವು ಮಾಡಿಕೊಳ್ಳುತ್ತೇವೆ, ನೀವು ಯಾರಿಗೆ ಬೇಕಾ ದರೂ ದೂರು ನೀಡಿಕೊಳ್ಳಿ ಎಂಬ ಹಾರಿಕೆ ಉತ್ತರ ನೀಡುತ್ತಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಹುತೇಕ ಕಲ್ಲು ಗಣಿಗಾರಿಕೆಗಳು ಊರಿಗೆ ಇಂತಿಷ್ಟು ದೂರದಲ್ಲಿ ಇರಬೇಕೆಂಬ ನಿಯಮವಿದೆ. ಆದರೆ ಇಲ್ಲಿನ ಅಧಿಕಾರಿಗಳು ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ಗ್ರಾಮದ ಪಕ್ಕದಲ್ಲೆ ಅನುಮತಿ ನೀಡಿರು ವುದು ಸರಿಯಲ್ಲ. ಕೂಡಲೇ ನಮ್ಮ ಎಲ್ಲಾ ಸಮಸ್ಯೆ ಗಳನ್ನು ಪರಿಗಣಿಸಿ ಕೂಡಲೇ ಗಣಿಗಾರಿಕೆ ನೀಡಿರುವ ಅನುಮತಿ ರದ್ದುಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ಅಂಟಿಕೊಂಡಿರುವ ಗಲ್ಲು ಗಣಿಗಾರಿಕೆಯಲ್ಲಿ ಮಾಡುತ್ತಿರುವ ಓವರ್ ಬ್ಲಾಸ್ಟಿಂಗ್ ನಿಂದ ನೂತನವಾಗಿ ನಿರ್ಮಾಣ ಮಾಡಿರುವ ಮನೆ, ಕಾಂಪೌಂಡ್‌ಗಳು ಬಿರುಕು ಬೀಳುತ್ತಿವೆ, ಸಾಲ ಸೂಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಈಗ ಓವರ್ ಬ್ಲಾಸ್ಟಿಂಗ್ ನಿಂದ ನಿರ್ಮಿಸಿರುವ ಮನೆಗಳು ಬಿರುಕು ಬೀಳುತ್ತಿವೆ. ಈ ಕುರಿತು ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ·
– ರಹಮತ್ ವುಲ್ಲಾ, ಭತ್ತಲಹಳ್ಳಿ ಗ್ರಾಮಸ್ಥ
ತಾಲೂಕಿನ ಭತ್ತಲಹಳ್ಳಿ ಗ್ರಾಮದಲ್ಲಿನ ಗಣಿಗಾರಿಕೆ ಬಗ್ಗೆ ಈಗಾಗಲೇ ದಪ್ಪರ್ತಿ ಗ್ರಾಪಂ ಪಿಡಿಒ ರಾಮಾಂಜಿ ಮತ್ತು ಆಡಳಿತ ಮಂಡಳಿ ಸದಸ್ಯರು ಸಭೆಯಲ್ಲಿ ತೀರ್ಮಾನ ಮಾಡಿ ತಹಶೀಲ್ದಾರ್ ರವರಿಗೆ ದೂರು ನೀಡಿದ್ದು, ನಾನು ಸಹ ಈ ಬಗ್ಗೆ ತಹಶೀಲ್ದಾರ್ ರವರಿಗೆ ಮತ್ತೂಮ್ಮೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ.
-ಹೇಮಾವತಿ, ಕಾರ್ಯನಿರ್ವಹಣಾಧಿಕಾರಿ, ತಾಪಂ ಗುಡಿಬಂಡೆ
ತಾಲೂಕಿನ ಭತ್ತಲಹಳ್ಳಿ ಗ್ರಾಮದಲ್ಲಿನ ಗಣಿಗಾರಿಕೆ ಬಗ್ಗೆ ದೂರುಗಳು ಬರುತ್ತಿದ್ದು, ಬ್ಲಾಸ್ಟಿಂಗ್ ನಿಂದ ಮನೆಗಳು ಬಿರುಕು ಬರುತ್ತಿರುವುದರ ಬಗ್ಗೆ ಖುದ್ದು ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿಯನ್ನು ಕ್ರಮಕ್ಕೆ ಸಲ್ಲಿಸಲಾಗುವುದು.
-ಎನ್.ಮನೀಷಾ, ತಹಶೀಲ್ದಾರ್, ಗುಡಿಬಂಡೆ
-ಎನ್.ನವೀನ್ ಕುಮಾರ್