Advertisement

ಉತ್ತರ ಕನ್ನಡ ಹೆದ್ದಾರಿ ಅಪಘಾತದಲ್ಲಿ 5000ಕ್ಕೂ ಹೆಚ್ಚು ಜಾನುವಾರುಗಳ ಸಾವು

07:47 PM Apr 13, 2022 | Team Udayavani |

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಕಾರವಾರದಿಂದ ಶಿರೂರು ಟೋಲ್ ಗೇಟ್ ತನಕ ಉತ್ತರ ಕನ್ನಡದಲ್ಲಿ ಹಾದು ಹೋಗಿದ್ದು, ದ್ವಿಪಥ ಕಾಮಗಾರಿ ಆರಂಭವಾಗಿ ದಶಕ ಕಳೆದರೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ.

Advertisement

ಹಲವು ಕಡೆಗಳಲ್ಲಿ ನಗರ ಭಾಗದಲ್ಲಿಯೇ ಹೆಚ್ಚು ಕಾಮಗಾರಿ ಬಾಕಿಯಿದ್ದು ಆದಷ್ಟು ಬೇಗ ಮುಗಿಸಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ. ಇತ್ತ ಹೆದ್ದಾರಿ ಕಾಮಗಾರಿ ಮುಗಿಯುವ ಹಂತದಲ್ಲಿರುವಾಗಲೇ ಐ.ಆರ್.ಬಿ. ಕಾಮಗಾರಿಯ ಅದ್ವಾನಗಳು ಒಂದೊಂದಾಗಿ ಹೊರ ಬೀಳುತ್ತಲಿವೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾಗಿ ಮಾಡಿ ಮುಗಿಸಿದ್ದರೂ ಸಹ ಹೆದ್ದಾರಿ ಮಧ್ಯದಲ್ಲಿರುವ ಡಿವೈಡರ್ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೇ ಇರುವುದರಿಂದ ನಿತ್ಯ ವಾಹನ ಅಪಘಾತ, ಜಾನುವಾರುಗಳ ಅಪಘಾತ ಪದೇ ಪದೇ ಸಂಭವಿಸುತ್ತಿದ್ದರೂ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.

ಕಳೆದ ಎರಡು ವರ್ಷಗಳಿಂದ ವಾಹನ ಅಫಘಾತಗಳ ಸಂಖ್ಯೆ ಅತೀ ಹೆಚ್ಚು ಸಂಭವಿಸಿದ್ದರೆ ಅದು ಇದೇ ಹೆದ್ದಾರಿಯಲ್ಲಿ ಎನ್ನಲು ಯಾವುದೇ ಅಡ್ಡಿಯಿಲ್ಲ. ಕೇವಲ ಎರಡು ವರ್ಷಗಳಲ್ಲಿನ ಅಪಘಾತದಲ್ಲಿ 5000ದಷ್ಟು ಜಾನುವಾರುಗಳು ಕಾರವಾರದಿಂದ ಶಿರೂರು ಟೋಲ್ ತನಕ ಮೃತ ಪಟ್ಟಿವೆ ಎಂದರೆ ಅಪಘಾತದ ತೀವ್ರತೆ ಎಷ್ಟಿದೆ ಎನ್ನುವುದನ್ನು  ಊಹಿಸಬಹುದು.

ಅಪಘಾತಕ್ಕೆ ಕಾರಣಗಳು
ರಾಷ್ಟ್ರೀಯ ಹೆದ್ದಾರಿ ದ್ವಿಪಥ ರಸ್ತೆಯನ್ನು ಮಾಡುತ್ತಿರುವ ಐ.ಆರ್.ಬಿ. ಕಂಪೆನಿಯವರು ಮಧ್ಯದಲ್ಲಿ ಹಾಕಿರುವ ಡಿವೈಡರ್ ನಲ್ಲಿ ಗಿಡಗಳನ್ನು ನೆಟ್ಟಿರುವುದರಿಂದ ಜಾನುವಾರುಗಳು ಗಿಡಗಳನ್ನು ತಿನ್ನುವ ಆಸೆಯಿಂದ ಬರುತ್ತಿದ್ದು ಹಾಗೆ ಬಂದ ಜಾನುವಾರುಗಳೇ ವಾಹನಕ್ಕೆ ಸಿಲುಕಿ ಸಾಯುತ್ತವೆ. ಯಾವುದೇ ಮುಂಜಾಗೃತಾ ಕ್ರಮ ಇಲ್ಲದಿರುವುದು ಕೂಡಾ ಜಾನುವಾರುಗಳು ಎಲ್ಲೆಂದರಲ್ಲಿ ರಸ್ತೆಯ ಮೇಲೆ ಬಂದು ತಾವು ಸಾಯುವುದಲ್ಲದೇ ಅಪಘಾತದಿಂದ ಮಾನವ ಜೀವಕ್ಕೂ ಅಪಾಯ ತಂದೊಡ್ಡುತ್ತಿವೆ. ಹೆಚ್ಚಿನ ಪ್ರಕರಣದಲ್ಲಿ ಅಪಘಾತಗಳು ಸಂಭವಿಸಿದಾಗ ಜಾನುವಾರುಗಳು ಬೀಡಾಡಿ ಗೋವುಗಳೇ ಆಗಿರುತ್ತವೆ, ಇನ್ನು ಯಾರದ್ದೇ ಜಾನುವಾರು ಮೃತಪಟ್ಟರೂ ಸಹ ಮಾಲಿಕರು ಕನಿಷ್ಟ ನೋಡಲೂ ಬರುವುದಿಲ್ಲ.

Advertisement

ಜಾನುವಾರುಗಳ ಕುತ್ತಿಗೆಗೆ ರೇಡಿಯಂ ಪಟ್ಟಿ
ಜಾನುವಾರುಗಳು ಸಾಯುತ್ತಿರುವುದನ್ನು ಸ್ವಲ್ಪವಾದರೂ ತಡೆಯುವ ದೃಷ್ಟಿಯಿಂದ ಮುರ್ಡೇಶ್ವರ ಯುತ್ಸ್ ಯನಿಟಿ ಸಂಘದ ವತಿಯಿಂದ ಬೀಡಾಡಿ ದನಗಳಿಗೆ ಪ್ರತಿಫಲಿಸುವ ರೇಡಿಯಂ ಇರುವ ಕಾಲರ್ ಅಳವಡಿಸಲು ಯೋಚಿಸಿದ್ದು ಪ್ರಥಮವಾಗಿ ಅವರು ತಯಾರಿಸಿದ ಕಾಲರ್ ಗಳನ್ನು ಉಚಿತವಾಗಿ ಅಳವಡಿಸುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿಯಾಗಿದೆ. ಇದೇ ರೀತಿ ಸಂಘ ಸಂಸ್ಥಗಳು ಮುಂದೆ ಬಂದು ಜಾನುವಾರುಗಳಿಗೆ ಪ್ರತಿಫಲಿಸುವ ಕಾಲರ್ ಅಳವಡಿಸಿ ರಕ್ಷಣೆಗೆ ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಗೋವುಗಳ ತಳಿಯೇ ಮಾಯವಾಗುವ ಚಿಂತೆ ನಾಗರಿಕರದ್ದಾಗಿದೆ. ಇನ್ನಾದರೂ ಐ.ಆರ್.ಬಿ. ಕಂಪೆನಿ ಜಾನುವಾರುಗಳ ಅಪಘಾತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next