Advertisement

ಪದಗ್ರಹಣ ವೀಕ್ಷಣೆಗೆ 500ಕ್ಕೂ ಹೆಚ್ಚು ಕಡೆ ವ್ಯವಸ್ಥೆ

01:09 PM Jun 28, 2020 | Suhan S |

ಬೆಳಗಾವಿ: ಬರುವ ಜುಲೈ 2 ರಂದು ನಡೆಯಲಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ವೀಕ್ಷಣೆಗೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ದೇಶದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್‌ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಸರಳ ಕಾರ್ಯಕ್ರಮ ನಡೆಯಲಿದ್ದು, ಸೀಮಿತ ನಾಯಕರು ಭಾಗಿಯಾಗಲಿದ್ದಾರೆ. ಉಳಿದಂತೆ ರಾಜ್ಯದಾದ್ಯಂತ ಕಾರ್ಯಕರ್ತರು ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ನೇರ ಪ್ರಸಾರದಲ್ಲಿ 10 ಲಕ್ಷ ಕಾರ್ಯಕರ್ತರು ಪದಗ್ರಹಣ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಅದ್ದೂರಿ ಕಾರ್ಯಕ್ರಮದ ಬದಲು ಸರಳವಾಗಿ ನಡೆಸಲಾಗುತ್ತಿದೆ. ಮಾಧ್ಯಮ ಸಾಮಾಜಿಕ ಜಾಲತಾಣದ ಮೂಲಕ ವಿನೂತನ ಮಾದರಿ ಕಾರ್ಯಕ್ರಮವನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುವುದು ಎಂದರು. ಕೆಪಿಸಿಸಿ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಈಗಾಗಲೇ ತಾವು ಸೇರಿದಂತೆ ಮೂವರೂ ಕಾರ್ಯಾಧ್ಯಕ್ಷರು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದು ಪದಗ್ರಹಣ ಸಮಾರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಪಂ ಉಪಾಧ್ಯಕ್ಷ ಅರುಣ ಕಾಟಂಬಳೆ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲೂ ಕ್ರೆಡಿಟ್‌ ವಾರ್‌ ಇದ್ದೇ ಇರುತ್ತದೆ. ಇದು ಸಾಮಾನ್ಯ. ಆದರೆ ನಮ್ಮ ನಾಯಕರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಎಂದರು. ಪದಗ್ರಹಣ ಸಮಾರಂಭ ಮುಗಿದ ಬಳಿಕ ಜಿಲ್ಲಾ ಕಾಂಗ್ರೆಸ್‌ ಘಟಕಗಳ ಪುನಾರಚನೆ ಮಾಡಲಾಗುತ್ತದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಅವಧಿ ಮುಗಿದಿದೆ. ಬರುವ ದಿನಗಳಲ್ಲಿ ಪಕ್ಷಕ್ಕೆ ಹೊಸ ರೂಪ ನೀಡಲಾಗುವದು ಎಂದು ಹೇಳಿದರು. ಲಾಕ್‌ ಡೌನ್‌ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮತ್ತೆ ಲಾಕ್‌ಡೌನ್‌ ಜಾರಿಮಾಡುವ ಅವಶ್ಯಕತೆ ಇಲ್ಲ. ಆದರೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವದು ಬಹಳ ಅಗತ್ಯವಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next