ಬೆಂಗಳೂರು: ರಾಜ್ಯದಲ್ಲಿ ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ಸಮನ್ವಯದ ಕೊರತೆಯಿಂದ ಸುಮಾರು 500ಕ್ಕೂ ಹೆಚ್ಚು ಎಂಜಿನಿಯರ್‌ಗಳಿಗೆ ನಿಗದಿತ ಸ್ಥಳ ನಿಯೋಜನೆ ಆಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪಿಡಬ್ಲ್ಯುಡಿ ಇಲಾಖೆ ವ್ಯಾಪ್ತಿಯಲ್ಲಿದ್ದ ಎಂಜಿನಿಯರ್‌ಗಳನ್ನು ವಿವಿಧ ಇಲಾಖೆಗಳಿಗೆ ವಿಭಜಿಸಲು ಸರಕಾರ ನಿರ್ಧರಿಸಿದೆ. ಆದರೆ ಪಿಡಬ್ಲ್ಯುಡಿ, ಜಲ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಪ್ರತಿಷ್ಠೆಯಿಂದಾಗಿ ಸರಕಾರ ವಿವಿಧ ಶ್ರೇಣಿಗಳ 500ಕ್ಕೂ ಹೆಚ್ಚು ಎಂಜಿನಿಯರ್‌ಗಳಿಗೆ ಹುದ್ದೆ ತೋರಿಸಿಲ್ಲ.
ಲೋಕೋಪಯೋಗಿ ಇಲಾಖೆಯಲ್ಲಿ ನೇಮಕಗೊಂಡ ಎಂಜಿನಿಯರ್‌ಗಳು ಸುಮಾರು 25-30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯಲ್ಲಿ ಇತ್ತೀಚೆಗೆ ಪ್ರತ್ಯೇಕ ನೇಮಕ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚುವರಿಯಾಗಿ ಇರುವ ಎಂಜಿನಿಯರ್‌ಗಳನ್ನು ಆರ್‌ಡಿಪಿಆರ್ ಮತ್ತು ಜಲ ಸಂಪನ್ಮೂಲ ಇಲಾಖೆಗೆ ನಿಯೋಜಿಸಿದರೆ ಸೇವಾ ಹಿರಿತನದ ಹಿನ್ನೆಲೆಯಲ್ಲಿ ಅವರಿಗೆ ಭಡ್ತಿಯಲ್ಲಿ ಆದ್ಯತೆ ನೀಡಬೇಕಾಗುತ್ತದೆ. ಹೀಗಾಗಿ ಈ ಎರಡೂ ಇಲಾಖೆಯವರು ಪಿಡಬ್ಲ್ಯುಡಿಯ ಹೆಚ್ಚುವರಿ ಎಂಜಿನಿಯರ್‌ಗಳನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಆರೋಪ.
ಇಲಾಖೆಗಳಿಗೆ ಅಧಿಕಾರಿಗಳ ಹಂಚಿಕೆ ಮಾಡುವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಮೂವರು ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಮುಖ್ಯ ಎಂಜಿನಿಯರ್ ಅವರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಗೆ ಅಧಿಕಾರಿಗಳ ಹಂಚಿಕೆ ಕಬ್ಬಿಣದ ಕಡಲೆಯಾಗಿದೆ.
ವಿವಿಧ ನಿಗಮ ಮಂಡಳಿಗಳಲ್ಲಿ ನೇಮಕ ಗೊಂಡ ಎಂಜಿನಿಯರ್‌ಗಳನ್ನು ಬೇರೆ ಇಲಾಖೆಗಳಿಗೆ ಶಾಶ್ವತವಾಗಿ ನಿಯೋಜನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಅವರ ಭವಿಷ್ಯದ ಬಗ್ಗೆ ಗೊಂದಲ ಮುಂದುವರಿದಿದೆ.
ಏನಿದು ಬೇರ್ಪಡಿಸುವ ಲೆಕ್ಕಾಚಾರ?
ಹಿಂದೆ ಲೋಕೋಪಯೋಗಿ ಇಲಾಖೆ ಮೂಲಕವೇ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡು ವಿವಿಧ ಇಲಾಖೆಗಳಿಗೆ ನಿಯೋಜನೆ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. 2010ರ ಅನಂತರ ಆಯಾ ಇಲಾಖೆಗಳು ನೇರವಾಗಿ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿದವು. ಇದರಿಂದ ಎಂಜಿನಿಯರ್‌ಗಳ ಸೇವಾ ಜ್ಯೇಷ್ಠತೆಯಲ್ಲಿ ವ್ಯತ್ಯಾಸ ಉಂಟಾಗಿ ಭಡ್ತಿ ನೀಡುವಾಗ ಸಮಸ್ಯೆ ಎದುರಾಗಿದೆ. ಅದಕ್ಕಾಗಿ ಎಂಜಿನಿಯರ್‌ಗಳ ವಿಭಜನೆಯ ಮಾರ್ಗ ಕಂಡುಕೊಳ್ಳಲಾಗಿತ್ತು.