Advertisement

50 ಸಾವಿರಕ್ಕೂ ಅಧಿಕ ಗಿಡಗಳು ವಿತರಣೆಗೆ ಸಿದ್ಧ

01:00 AM Jun 08, 2020 | Sriram |

ವಿಶೇಷ ವರದಿ- ಬಂಟ್ವಾಳ: ಸಸ್ಯಸಂಪತ್ತನ್ನು ವೃದ್ಧಿಸುವ ದೃಷ್ಟಿಯಿಂದ ಪ್ರತಿ ಮಳೆಗಾಲದ ಪ್ರಾರಂಭದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಸಿಗಳನ್ನು ನೆಡುವ, ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದ್ದು, ಬಂಟ್ವಾಳ ತಾಲೂಕಿನಲ್ಲಿ ಈ ಬಾರಿ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಸುಮಾರು 50 ಸಾವಿರಕ್ಕೂ ಅಧಿಕ ಗಿಡಗಳು ವಿತರಣೆ ಸಿದ್ಧಗೊಂಡಿವೆ.

Advertisement

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಸಸಿಗಳು ಉಚಿತವಾಗಿ ವಿತರಣೆಯಾಗಲಿದ್ದು, ಆಸಕ್ತರು ಸೂಕ್ತ ದಾಖಲೆಗಳನ್ನು ನೀಡಿ ಗಿಡಗಳನ್ನು ಪಡೆದುಕೊಳ್ಳಬೇಕಿದೆ. ಸಾಮಾಜಿಕ ಅರಣ್ಯ ಬಂಟ್ವಾಳ ವಲಯದ ನೆಟ್ಲಮುಟ್ನೂರಿನ ಕೇಂದ್ರೀಯ ನರ್ಸರಿಯಲ್ಲಿ ಜೂ. 1ರಿಂದ ಗಿಡಗಳ ವಿತರಣೆ ಪ್ರಾರಂಭಗೊಂಡಿದ್ದು, ಈಗಾಗಲೇ 2 ಸಾವಿರಕ್ಕೂ ಅಧಿಕ ಗಿಡಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ಜತೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾ.ಪಂ. ಫಲಾನುಭವಿಗಳಿಗೆ 2,000 ಕಸಿ ಗೇರು ಗಿಡಗಳು ಕೂಡ ಲಭ್ಯವಿವೆ. ರಸ್ತೆ ಬದಿ, ನೆಡುತೋಪು, ಸರಕಾರಿ ಕಚೇರಿ ಆವರಣಗಳಲ್ಲಿಯೂ ಗಿಡ ನೆಡುವುದಕ್ಕಾಗಿ ಸಾಮಾಜಿಕ ಅರಣ್ಯದಿಂದ ಗಿಡಗಳ ವಿತರಣೆ ನಡೆಯಲಿವೆ. ಮುಖ್ಯವಾಗಿ ಉದ್ಯೋಗ ಸೃಷ್ಟಿಯನ್ನು ಗಮನದಲ್ಲಿಸಿ ನರೇಗಾದ ಮೂಲಕ ಗಿಡಗಳ ವಿತರಣೆ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಬದಿ ಗಿಡಗಳು
ಇಲಾಖೆಯ ವತಿಯಿಂದ ರಸ್ತೆ ಬದಿಗಳಲ್ಲೂ ಗಿಡ ನೆಡುವ ಉದ್ದೇಶದಿಂದ 3 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. ಪ್ರಸ್ತುತ ಸೈಕ್ಲೋನ್‌ ಪ್ರಭಾವದಿಂದ ಮಳೆಯಾಗುತ್ತಿದ್ದು, ಮುಂದೆ ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭಗೊಂಡರೆ ಅದನ್ನು ನೆಡುವ ಕಾರ್ಯ ನಡೆಯಲಿದೆ ಎಂದು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ್ಯಾವ ಗಿಡಗಳು
ಸಾಮಾಜಿಕ ಅರಣ್ಯದಿಂದ ವಿತರಣೆಯಾಗುವ ಗಿಡಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಹಣ್ಣುಗಳ ಗಿಡಗಳು ಕೂಡ ಒಳಗೊಂಡಿರುತ್ತವೆ. ಮುಖ್ಯವಾಗಿ ಹಲಸು, ಹೆಬ್ಬಲಸು, ಪುನರ್‌ಪುಳಿ, ಮಹಾಗನಿ, ನೆಲ್ಲಿ, ಕಹಿಬೇವು, ಶ್ರೀಗಂಧ, ನಿಂಬೆ, ಸಂಪಿಗೆ, ಬೀಟೆ, ಸೀತಾಫಲ, ನೇರಳೆ, ಜಂಬುನೇರಳೆ ಮುಂತಾದ ಗಿಡಗಳನ್ನು ಬೆಳೆಸಲಾಗಿದ್ದು, 8×12 ಹಾಗೂ 6×9 ಗಾತ್ರದ ಪಾಲಿಥೀನ್‌ ಚೀಲಗಳಲ್ಲಿ ಗಿಡ ಬೆಳೆಸಲಾಗಿದೆ.

Advertisement

 ವಿತರಣೆ ಪ್ರಾರಂಭ
ನರೇಗಾ ಯೋಜನೆಯ ಮೂಲಕ ಸಾರ್ವಜನಿಕರಿಗೆ ವಿತರಣೆ ಮಾಡುವುದಕ್ಕೆ 50 ಸಾವಿರ ಗಿಡಗಳನ್ನು ಸಿದ್ಧಪಡಿಸಲಾಗಿದ್ದು, ಜೂ. 1ರಿಂದ ವಿತರಣೆ ಪ್ರಾರಂಭಗೊಂಡಿದೆ. ಸುಮಾರು 3,000 ಗಿಡಗಳನ್ನು ರಸ್ತೆ ಬದಿಗಳಲ್ಲಿ ನೆಡುವುದಕ್ಕಾಗಿ ಸಿದ್ಧಪಡಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭಗೊಂಡ ತತ್‌ಕ್ಷಣ ನೆಡುವ ಕಾರ್ಯವನ್ನೂ ಪ್ರಾರಂಭಿಸುತ್ತೇವೆ.
-ರಾಜೇಶ್‌ ಬಳಿಗಾರ್‌,ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next