ಹೊಸದಿಲ್ಲಿ: ಅಗ್ರ ರ‍್ಯಾಂಕ್ ಪಡೆದವರು ಸೇರಿದಂತೆ, 50 ಕ್ಕೂ ಹೆಚ್ಚು ಗುಜರಾತ್ ಮೂಲದ NEET-UG ಅಭ್ಯರ್ಥಿಗಳು ವಿವಾದಿತ ಪರೀಕ್ಷೆಯನ್ನು ರದ್ದುಗೊಳಿಸದಂತೆ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
2024 ರ ಮೇ 5 ರಂದು ನಡೆಸಿದ NEET-UG ಪರೀಕ್ಷೆಯಲ್ಲಿ ಪೇಪರ್ ಸೋರಿಕೆ ಮತ್ತು ಅಕ್ರಮಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ಮತ್ತು ಇತರರ ವಿರುದ್ಧ ತನಿಖೆ ಮತ್ತು ಕಠಿನ ಕ್ರಮ ಕೈಗೊಳ್ಳಲು ಅವರು ಉನ್ನತ ನ್ಯಾಯಾಲಯದಿಂದ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ನಿರ್ದೇಶನವನ್ನು ಕೋರಿದ್ದಾರೆ.
ಮರು ಪರೀಕ್ಷೆ ನಡೆಸದಂತೆ, ಪರೀಕ್ಷೆಯ ನಿರ್ವಹಣೆಯ ಬಗ್ಗೆ ತನಿಖೆಯಂತಹ ಪರಿಹಾರಗಳನ್ನು ಕೋರಿ 56 ವಿದ್ಯಾರ್ಥಿಗಳು ಸಲ್ಲಿಸಿರುವ 26 ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠ ವಿಚಾರಣೆಗೆ ನಿಗದಿಪಡಿಸಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET-UG) ಅನ್ನು ದೇಶಾದ್ಯಂತ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಎನ್‌ಟಿಎ ನಡೆಸುತ್ತದೆ. NEET-UG 2024 ಮೇ 5 ರಂದು 4,750 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪೇಪರ್ ಸೋರಿಕೆ ಸೇರಿದಂತೆ ಅಕ್ರಮಗಳ ಆರೋಪಗಳು ಹಲವಾರು ನಗರಗಳಲ್ಲಿ ಪ್ರತಿಭಟನೆಗಳಿಗೆ ಮತ್ತು ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿವೆ.
ಪರೀಕ್ಷೆಯನ್ನು ರದ್ದುಗೊಳಿಸುವುದು, ಮರು ಪರೀಕ್ಷೆ ಮತ್ತು ಉನ್ನತ ಮಟ್ಟದ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಎಸ್‌ಸಿಯಲ್ಲಿ ಜುಲೈ 8 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.