ನ್ಯೂಯಾರ್ಕ್: ಚೀನಾದಲ್ಲಿ ಕೋವಿಡ್ 19 ವೈರಸ್ ಮಹಾಮಾರಿಯು ಅಲ್ಲೋಲ ಕಲ್ಲೋಲ ಸೃಷ್ಟಿಸಿದ ವಿಚಾರವನ್ನು ಆ ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ ಅಲ್ಲಿಂದ 4.30 ಲಕ್ಷ ಅಮೆರಿಕನ್ನರು ಸ್ವದೇಶಕ್ಕೆ ವಾಪಸಾಗಿದ್ದರು ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಅಮೆರಿಕದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗಿರುವಾಗಲೇ ಈ ವಿಚಾರ ಬಹಿರಂಗವಾಗಿದ್ದು, ದೇಶದಲ್ಲಿ ಕೋವಿಡ್ ಸೋಂಕು ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ಚೀನದ ಕೋವಿಡ್ ಕೇಂದ್ರಸ್ಥಾನವಾದ ವುಹಾನ್ ನಿಂದಲೇ ಸಾವಿರಾರು ಮಂದಿ ನೇರವಾಗಿ ವಿಮಾನಗಳ ಮೂಲಕ ಅಮೆರಿಕಕ್ಕೆ ಮರಳಿದ್ದಾರೆ ಎಂದು ‘ದ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಅಧ್ಯಕ್ಷ ಟ್ರಂಪ್ ಪ್ರಯಾಣ ನಿರ್ಬಂಧ ಘೋಷಿಸುವ ಮುನ್ನವೇ ಚೀನದಿಂದ 1,300 ನೇರ ವಿಮಾನಗಳು ಅಮೆರಿಕದ 17 ನಗರಗಳನ್ನು ತಲುಪಿವೆ. ಅಲ್ಲದೆ, ಆ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಕೂಡ ನಡೆಯುತ್ತಿರಲಿಲ್ಲ. ಇವೆಲ್ಲ ಕಾರಣದಿಂದಾಗಿ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚಳವಾಯಿತು ಎಂದೂ ವರದಿ ಹೇಳಿದೆ.
ನ್ಯೂಯಾರ್ಕ್ ತತ್ತರ: ಅಮೆರಿಕದ ಕೋವಿಡ್ 19 ವೈರಸ್ ನ ಕೇಂದ್ರಸ್ಥಾನ ಎಂದೇ ಪರಿಗಣಿಸಲ್ಪಟ್ಟಿರುವ ನ್ಯೂಯಾರ್ಕ್ ನಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಮೃತರ ಪ್ರಮಾಣದಲ್ಲೂ ನ್ಯೂಯಾರ್ಕ್ ದಾಖಲೆ ಬರೆಯುತ್ತಿದೆ.
ಭಾನುವಾರ 24 ಗಂಟೆಗಳ ಅವಧಿಯಲ್ಲಿ 630 ಮಂದಿ ಮೃತಪಟ್ಟಿದ್ದು, ಮುಂದಿನ 7 ದಿನಗಳಲ್ಲಿ ಈ ಸಂಖ್ಯೆ ಏರಿಕೆಯಾಗುವ ಭೀತಿಯಿದೆ ಎಂದು ಗವರ್ನರ್ ಆಂಡ್ರ್ಯೂ ಕ್ಯೂಮೋ ತಿಳಿಸಿದ್ದಾರೆ. ನ್ಯೂಯಾರ್ಕ್‌ವೊಂದರಲ್ಲೇ ಈವರೆಗಿನ ಸಾವಿನ ಸಂಖ್ಯೆ 3,565ಕ್ಕೇರಿಕೆಯಾಗಿದೆ. ಇಲ್ಲಿ ಸೋಂಕಿತರ ಸಂಖ್ಯೆ 1,13,704 ತಲುಪಿದೆ. ಇದೇ ವೇಳೆ, ನ್ಯೂಯಾರ್ಕ್ ಗೆ ಚೀನದಿಂದ ಭಾನುವಾರ 1,110 ವೆಂಟಿಲೇಟರ್‌ಗಳು ಬಂದಿವೆ.
ಈ ನಡುವೆ, ಮುಂದಿನ 2 ವಾರಗಳ ಕಾಲ ಅಮೆರಿಕಕ್ಕೆ ಸಂಕಷ್ಟದ ಕಾಲವಾಗಿದ್ದು, ಮತ್ತಷ್ಟು ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಟ್ರಂಪ್ ಹೇಳಿದ್ದಾರೆ. ಭಾನುವಾರಕ್ಕೆ ಅಮೆರಿಕದಾದ್ಯಂತ ಸಾವಿನ ಸಂಖ್ಯೆ 8 ಸಾವಿರ ದಾಟಿದ್ದು, ಸೋಂಕಿತರ ಸಂಖ್ಯೆ 3 ಲಕ್ಷಕ್ಕೂ ಅಧಿಕವಾಗಿದೆ.