ನವದೆಹಲಿ: ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗಳಾದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರು. ನಂತರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ವಿತರಣೆಯಲ್ಲಿ ಆದ್ಯತೆ ನೀಡಿದ್ದರು. ಇದರಿಂದ ಎರಡನೇ ಅಲೆಯಲ್ಲಿ ಪ್ರಾಣಹಾನಿ ಪ್ರಮಾಣ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಪತ್ರಕರ್ತರು ಮಾತ್ರ ಈ ವಿಚಾರದಲ್ಲಿ ದುರಾದೃಷ್ಟವಂತರಾಗಿದ್ದರು!
ಇದನ್ನೂ ಓದಿ:ಭಾರತೀಯ ಬಳಕೆದಾರರಿಗೆ ಲಸಿಕೆ ಶೋಧಕ ಸಾಧನವನ್ನು ಪರಿಚಯಿಸಲಿದೆ ಫೇಸ್ ಬುಕ್
ಕೋವಿಡ್ ತೀವ್ರವಾಗಿ ಹರಡುತ್ತಿದ್ದ ಸಂದರ್ಭದಲ್ಲಿಯೂ ಪತ್ರಕರ್ತರು ನಿರಂತರವಾಗಿ ಫೀಲ್ಡ್ ನಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಲಿಲ್ಲ. ಅಲ್ಲದೇ ಲಸಿಕೆ ಅಭಿಯಾನದ ವೇಳೆಯಲ್ಲಿಯೂ ಆದ್ಯತೆಯನ್ನು ನೀಡಿರಲಿಲ್ಲ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಒಂದು ಅಂದಾಜಿನ ಅಧ್ಯಯನದ ಪ್ರಕಾರ ಕೆಲವು ಹೆಸರಾಂತ ಪತ್ರಕರ್ತರು ಸೇರಿದಂತೆ ಕೋವಿಡ್ 19 ವೈರಸ್ ನಿಂದ ಸುಮಾರು 300 ಮಂದಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ. 2021ರ ಏಪ್ರಿಲ್ ನಿಂದ ಪ್ರತಿದಿನ ಮೂರು ಮಂದಿ ಪತ್ರಕರ್ತರು ಸಾವನ್ನಪ್ಪುತ್ತಿದ್ದಾರೆ. ಮೇ ತಿಂಗಳಿನಲ್ಲಿ ದಿನಕ್ಕೆ ನಾಲ್ವರು ಪತ್ರಕರ್ತರು ಕೋವಿಡ್ ಸೋಂಕಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಕೋವಿಡ್ ಎರಡನೇ ಅಲೆ ಕೆಲವು ಹಿರಿಯ ಪತ್ರಕರ್ತ ಜೀವವನ್ನು ಮಾತ್ರ ತೆಗೆದಿಲ್ಲ, ಜತೆಗೆ ದೇಶದ ವಿವಿಧ ಜಿಲ್ಲೆ, ನಗರ ಮತ್ತು ಹಳ್ಳಿಗಳಲ್ಲಿ ವಾಸವಾಗಿರುವ ಪತ್ರಕರ್ತರನ್ನೂ ಬಲಿಪಡೆದಿದೆ ಎಂದು ವರದಿ ಹೇಳಿದೆ.
ದೆಹಲಿ ಮೂಲದ ಇನ್ಸಿಟ್ಯೂಟ್ ಆಫ್ ಪರ್ಸೆಪ್ಶನ್ ಸ್ಟಡೀಸ್ ವರದಿ ಪ್ರಕಾರ, 2020ರ ಏಪ್ರಿಲ್ ನಿಂದ 2021ರ ಮೇ 16ರವರೆಗೆ 238 ಪತ್ರಕರ್ತರು ಸಾವನ್ನಪ್ಪಿದ್ದಾರೆ.(ಈ ಪ್ರಕರಣಗಳನ್ನು ಪರಿಶೀಲಿಸಲಾಗಿದೆ, ಇನ್ನುಳಿದ 82 ಪ್ರಕರಣಗಳನ್ನು ಪರಿಶೀಲಿಸಬೇಕಾಗಿದೆ)
ಮೊದಲ ಅಲೆಗಿಂತ ಎರಡನೇ ಅಲೆ ಮಾಧ್ಯಮ ಕ್ಷೇತ್ರದ ಮೇಲೆ ಅಗಾಧ ನಷ್ಟವನ್ನು ತಂದಿದೆ. 2020ರ ಡಿಸೆಂಬರ್ ನಿಂದ ಏಪ್ರಿಲ್ ವರೆಗೆ 56 ಪತ್ರಕರ್ತರು ಸಾವನ್ನಪ್ಪಿದ್ದರು. ಆದರೆ ಎರಡನೇ ಅಲೆಯಲ್ಲಿ 2021ರ ಏಪ್ರಿಲ್ ನಿಂದ ಮೇ 16ರವರೆಗೆ 171 ಪತ್ರಕರ್ತರು ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದರು ಎಂದು ವರದಿ ತಿಳಿಸಿದೆ.