ಮುಂಬೈ: ವರ್ಷದ ಹಿಂದೆ ಮಹಾ ರಾಜಕೀಯ ಪ್ರಹಸನಗಳನ್ನು ಕಂಡಿದ್ದ ಮಹಾರಾಷ್ಟ್ರದಲ್ಲಿ ಇದೀಗ ಅಂತಹದ್ದೇ ಮತ್ತೊಂದು ಪ್ರಸಂಗ ನಡೆಯುವ ಸಾಧ್ಯತೆಯಿದೆ. ಇದೀಗ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಬಿಜೆಪಿಗೆ ಸೇರುವ ಬಗ್ಗೆ ವರದಿಯಾಗುತ್ತಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಅವರಿಗೆ ತಮ್ಮ ಪಕ್ಷವು ಎಂದಿಗೂ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಹೇಳಿದ್ದರೆಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಭಾನುವಾರ ಹೇಳಿಕೊಂಡಿದ್ದಾರೆ.
ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಮುಂದಿನ ದಿನಗಳಲ್ಲಿ ಅಜಿತ್ ಪವಾರ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅವರಿಗೆ ನಿಷ್ಠರಾಗಿರುತ್ತೇವೆ ಎಂದು ಎನ್‌ಸಿಪಿ ಶಾಸಕರಿಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದ ಇಬ್ಬರು ಉನ್ನತ ಬಿಜೆಪಿ ನಾಯಕರು ದೆಹಲಿಗೆ ಧಾವಿಸಿದ ಸಂದರ್ಭದಲ್ಲೇ ಅಜಿತ್ ಪವಾರ್ ಅವರು ಹಠಾತ್ತಾಗಿ ಪುಣೆಯ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು ಕೂಡ ಇಂತಹ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.
ಮೂಲಗಳ ಪ್ರಕಾರ, 53 ವಿಪಕ್ಷ ಶಾಸಕರಲ್ಲಿ ಸುಮಾರು 34 ಮಂದಿ ಬಿಜೆಪಿಯೊಂದಿಗೆ ಕೈಜೋಡಿಸಿ ಶಿಂಧೆ-ಫಡ್ನವೀಸ್ ಸರ್ಕಾರದ ಭಾಗವಾಗಲು ಅಜಿತ್ ಪವಾರ್ ಅವರನ್ನು ಆಂತರಿಕವಾಗಿ ಬೆಂಬಲಿಸಿದ್ದಾರೆ.
ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ, ಚಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ಸೇರಿದಂತೆ ಪ್ರಮುಖರು ಅಜಿತ್ ಪವಾರ್ ಅವರನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.