ಪ್ಯಾರಿಸ್: ಫ್ರಾನ್ಸ್‌ನ ಪ್ರಸಿದ್ಧ ಕ್ಯಾಥೊಲಿಕ್ ಚರ್ಚ್‌ನ ಆವರಣದಲ್ಲಿ ಕಳೆದ 70 ವರ್ಷಗಳಲ್ಲಿ 3.30 ಲಕ್ಷ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ
ಆಘಾತಕಾರಿ ಅಂಶವೊಂದು ಬಹಿರಂಗವಾಗಿದೆ. ಚರ್ಚ್‌ನ ಆವರಣದಲ್ಲಿ1950ರಿಂದ 2021ರವರೆಗೆ 3,30,000 ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ
ದೌರ್ಜನ್ಯವೆಸಗಲಾಗಿದೆ. ಸಂತ್ರಸ್ತರಲ್ಲಿ ಶೇ.80 ಮಂದಿ ಬಾಲಕರು!
ಇದನ್ನೂ ಓದಿ:6 ಗಂಟೆಗಳ ಕಾಲ ನಿಷ್ಟ್ರಿಯ; ಬರೋಬ್ಬರಿ 40 ಸಾವಿರ ಕೋಟಿ ನಷ್ಟ!
ಚರ್ಚಿನ ಸಿಬ್ಬಂದಿ ಹಾಗೂ ಭಕ್ತಾದಿಗಳು ಸೇರಿ ಒಟ್ಟು 3 ಸಾವಿರ ಆರೋಪಿಗಳಿಂದ ಈ ದುಷ್ಕೃತ್ಯ ನಡೆದಿದೆ. ಸಂತ್ರಸ್ತರಲ್ಲಿ ಶೇ. 60 ಮಂದಿ ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ತೊಂದರೆಗೊಳಗಾಗಿದ್ದಾರೆ. ಚರ್ಚಿನ ಆಡಳಿತವು ಈ ಎಲ್ಲ ವಿಚಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿಡುವ ಪ್ರಯತ್ನ ಮಾಡಿದೆ ಎಂದು ವರದಿ ಹೇಳಿದೆ.
ಸುಮಾರು ಎರಡೂವರೆ ವರ್ಷಗಳ ಕಾಲ ಸಂತ್ರಸ್ತರು, ಸಾಕ್ಷಿದಾರರು, ನ್ಯಾಯಾಲಯ, ಪೊಲೀಸರು ಸೇರಿ ಅನೇಕರಿಂದ ಮಾಹಿತಿ ಪಡೆದು ಈ ವರದಿ ತಯಾರಿಸಲಾಗಿದೆ. ಇದು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿರುವ 2,500 ಪುಟಗಳ ಬೃಹತ್ ವರದಿಯಾಗಿದೆ ಎಂದು ವರದಿ ತಯಾರಿಸಿರುವ ಸಮಿತಿಯ ಅಧ್ಯಕ್ಷರಾದ ಜೀನ್ ಮಾರ್ಕ್ ಸಾವೆ ತಿಳಿಸಿದ್ದಾರೆ.
ವರದಿ ಪ್ರಕಟವಾದ ನಂತರ ಸಾವಿರಾರು ಮಂದಿ, ತಾವು ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಕರೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕ್ಯಾಥೋಲಿಕ್ ಚರ್ಚಿನ ಪಾದ್ರಿ ಬರ್ನಾರ್ಡ್ ಪ್ರಯ್ನಾಟ್ ಕಳೆದ ವರ್ಷ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸಿಕ್ಕಿ ಬಿದ್ದಿದ್ದರು. ಅವರು 75 ಬಾಲಕರ ಮೇಲೆ ದೌರ್ಜನ್ಯವೆಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾದ ಬೆನ್ನಲ್ಲೇ ಈ ವರದಿ ತಯಾರಿ ಕೆಲಸ ಚುರುಕುಗೊಂಡಿತ್ತು.