ನವದೆಹಲಿ:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕಾಗಿ ದೇಶಾದ್ಯಂತ ದೇಣಿಯಾಗಿ ಸಂಗ್ರಹಿಸಿರುವ ಸುಮಾರು 22 ಕೋಟಿ ರೂಪಾಯಿ ಮೊತ್ತದ 15,000ಕ್ಕೂ ಅಧಿಕ ಚೆಕ್ ಗಳು ಬೌನ್ಸ್ ಆಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಮಾಸ್ಕ್ ಹಾಕಿಕೊಂಡ ದೇವಿ : ಈ ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುತ್ತೆ ವಿಶೇಷ ಪ್ರಸಾದ!
ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷತ್ ಮತ್ತು ಇತರ ಹಿಂದೂಪರ ಸಂಘಟನೆಗಳು ಸಂಗ್ರಹಿಸಿದ್ದ ವಿವಿಧ ಬ್ಯಾಂಕ್ ಗಳ 15,000ಕ್ಕೂ ಅಧಿಕ ಚೆಕ್ ಗಳು ಬೌನ್ಸ್ ಆಗಿದ್ದು, ಇದರ ಒಟ್ಟು ಮೊತ್ತ 22 ಕೋಟಿ ರೂಪಾಯಿ ಎಂದು ವರದಿ ವಿವರಿಸಿದೆ.
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಡಿಟ್ ಮಾಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಖಾತೆಯಲ್ಲಿ ಹಣದ ಕೊರತೆ ಅಥವಾ ತಾಂತ್ರಿಕ ದೋಷದಿಂದ ಚೆಕ್ ಬೌನ್ಸ್ ಆಗಿರಬಹುದು ಎಂದು ಆಡಿಟ್ ವರದಿಯಲ್ಲಿ ತಿಳಿಸಿದೆ. ಈ ತಪ್ಪುಗಳನ್ನು ಸರಿಪಡಿಸಲು ಟ್ರಸ್ಟ್ ಬ್ಯಾಂಕ್ ಗಳ ಜತೆ ಸಂಪರ್ಕದಲ್ಲಿರುವುದಾಗಿ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯ ಡಾ.ಅನಿಲ್ ಮಿಶ್ರಾ ತಿಳಿಸಿದ್ದಾರೆ.
ಬೌನ್ಸ್ ಆಗಿರುವ 15 ಸಾವಿರ ಚೆಕ್ ಗಳಲ್ಲಿ ಸುಮಾರು 2000 ಚೆಕ್ ಗಳು ಅಯೋಧ್ಯೆಯಲ್ಲಿಯೇ ಸಂಗ್ರಹವಾಗಿರುವುದಾಗಿ ಟ್ರಸ್ಟ್ ನ ಕೋಶಾಧಿಕಾರಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ. ಇನ್ನುಳಿದ 13 ಸಾವಿರ ಚೆಕ್ ಗಳು ದೇಶದ ವಿವಿಧ ಭಾಗಗಳಿಂದ ಸಂಗ್ರಹವಾಗಿರುವುದಾಗಿ ತಿಳಿಸಿದ್ದಾರೆ.